ಮುಂಬೈ: ಯಾರೇ ಬೇಡಿಕೆ ಸಲ್ಲಿಸಿದರೂ ಸಂವಿಧಾನದಿಂದ ‘ಜಾತ್ಯತೀತ’ ಪದವನ್ನು ಕೈಬಿಡುವ ಪ್ರಶ್ನೆಯೇ ಇಲ್ಲ ಎಂದು ಕೇಂದ್ರ ಸಾಮಾಜಿಕ ನ್ಯಾಯ ಇಲಾಖೆಯ ರಾಜ್ಯ ಖಾತೆ ಸಚಿವ ರಾಮದಾಸ್ ಅಠವಲೆ ತಿಳಿಸಿದರು.
ಸಂವಿಧಾನದಿಂದ ‘ಜಾತ್ಯತೀತ’ ಪದವನ್ನು ಕೈಬಿಡುವಂತೆ ಸನಾತನ ಸಂಸ್ಥೆಯ ರಾಷ್ಟ್ರೀಯ ವಕ್ತಾರ ಚೇತನ್ ರಾಜಹನ್ಸ್ ಸೋಮವಾರ ಆಗ್ರಹಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ‘ಜಾತ್ಯತೀತತೆಯೇ ದೇಶದಲ್ಲಿ ಏಕಾತೆಯನ್ನು ಉಳಿಸಿಕೊಳ್ಳಲು ನೆರವಾಗಿದೆ. ಜಾತ್ಯತೀತ ಶಬ್ದ ಸಂವಿಧಾನದಲ್ಲಿ ಎಂದೆಂದಿಗೂ ಇರಲಿದೆ’ ಎಂದರು.
ಇದನ್ನೂ ಓದಿ:ಸಂವಿಧಾನದಿಂದ ‘ಜಾತ್ಯತೀತ’ ಪದ ಕೈಬಿಡಲು ಸನಾತನ ಸಂಸ್ಥೆ ಆಗ್ರಹ
ಕಾಂಗ್ರೆಸ್ ಮತ್ತು ಇತರ ರಾಜಕೀಯ ಪಕ್ಷಗಳ ಬೇಡಿಕೆಯಂತೆ ಸನಾತನ ಸಂಸ್ಥೆಯನ್ನು ನಿಷೇಧಿಸಿದರೂ ದೊಡ್ಡ ಪ್ರಯೋಜನವಾಗದು ಎಂದು ಅವರು ಅಭಿಪ್ರಾಯಪಟ್ಟರು.
‘ಕೊಲ್ಲುವ ಮೂಲಕ ಅಭಿಪ್ರಾಯ ಹತ್ತಿಕ್ಕಲಾಗದು’: ವ್ಯಕ್ತಿಯೊಬ್ಬನನ್ನು ಹತ್ಯೆ ಮಾಡುವ ಮೂಲಕ ಆತನ ಅಭಿಪ್ರಾಯಗಳನ್ನುಹತ್ತಿಕ್ಕಲಾಗದು ಎಂದು ಅಠವಲೆ ಪರೋಕ್ಷವಾಗಿ ಸನಾತನ ಸಂಸ್ಥೆಗೆ ಚಾಟಿ ಬೀಸಿದರು. ಯಾರೊಬ್ಬರೂ ಹಿಂಸೆಯಲ್ಲಿ ತೊಡಗಿಕೊಳ್ಳುವಂತಿಲ್ಲ. ಹಿಂಸಾಚಾರದಲ್ಲಿ ತೊಡಗಿಕೊಳ್ಳುವವರು ಕಠಿಣ ಕ್ರಮ ಎದುರಿಸಬೇಕಾದೀತು ಎಂದು ಅವರು ಎಚ್ಚರಿಕೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.