ಮೀರತ್: ಬಿಎಸ್‌ಪಿ ಶಾಸಕ ರಾಜು ಪಾಲ್ ಕೊಲೆ ಪ್ರಕರಣದಲ್ಲಿ ಪ್ರಮುಖ ಸಾಕ್ಷಿಯಾಗಿದ್ದ ಉಮೇಶ್ ಪಾಲ್ ಹತ್ಯೆಯ ಪ್ರಮುಖ ದರೋಡೆಕೋರ–ರಾಜಕಾರಣಿ ಆರೋಪಿ ಅತೀಕ್ ಅಹ್ಮದ್‌ಗೆ ಆಶ್ರಯ ನೀಡಿದ್ದ ಅವನ ಭಾವ ಅಖ್ಲಾಕ್ ಅಹ್ಮದ್‌ನನ್ನು ಉತ್ತರ ಪ್ರದೇಶ ಪೊಲೀಸ್ ವಿಶೇಷ ಕಾರ್ಯಾಚರಣೆ ಪಡೆಯು ಬಂಧಿಸಿದೆ.
ಸರ್ಕಾರಿ ವೈದ್ಯನಾಗಿದ್ದ ಅಖ್ಲಾಕ್ ಅಹ್ಮದ್‌ನನ್ನು ಕಳೆದ ರಾತ್ರಿ ನಗರದ ನೌಚಂಡಿ ಪ್ರದೇಶದಲ್ಲಿ ಎಸ್‌ಟಿಎಫ್ ತಂಡವು ಬಂಧಿಸಿ ಪ್ರಯಾಗರಾಜ್‌ಗೆ ಕರೆದೊಯ್ದಿದೆ ಎಂದು ಎಸ್‌ಟಿಎಫ್ ಪೊಲೀಸ್ ವರಿಷ್ಠಾಧಿಕಾರಿ ಬ್ರೀಜೇಶ್ ಸಿಂಗ್ ಭಾನುವಾರ ಹೇಳಿದ್ದಾರೆ.
ಫೆಬ್ರುವರಿ 24 ರಂದು ಪ್ರಯಾಗರಾಜ್‌ನ ಧೂಮಂಗಂಜ್ ಮನೆಯ ಹೊರಗೆ ಉಮೇಶ್ ಪಾಲ್ ಜೊತೆಗೆ ಪೊಲೀಸ್ ರಕ್ಷಣಾ ಸಿಬ್ಬಂದಿ ಸಂದೀಪ್ ನಿಶಾದ್ ಮತ್ತು ರಾಘವೇಂದ್ರ ಸಿಂಗ್‌ನನ್ನು ಗುಂಡಿಕ್ಕಿ ಕೊಲ್ಲಲಾಗಿತ್ತು.
ಉಮೇಶ್ ಪಾಲ್ ಪತ್ನಿ ಜಯ ಪಾಲ್ ನೀಡಿದ ದೂರಿನ ಆಧಾರದ ಮೇಲೆ ಅತೀಕ್ ಅಹ್ಮದ್, ಅವನ ಸಹೋದರ ಆಶ್ರಫ್, ಪತ್ನಿ ಶೈಸ್ತಾ ಪರ್ವೀನ್ ಸೇರಿದಂತೆ ಒಂಬತ್ತು ಆರೋಪಿಗಳ ವಿರುದ್ಧ ಧೂಮಂಗಂಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಅಬ್ದುಲ್ಲಾಪುರದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯನಾಗಿದ್ದ ಅಖ್ಲಾಕ್ ಅಹ್ಮದ್ ಆರೋಪಿಗಳಿಗೆ ಆಶ್ರಯ ನೀಡಿದ್ದಲ್ಲದೆ, ಉಮೇಶ್ ಪಾಲ್ ಹತ್ಯೆಯ ನಂತರ ಮೀರತ್‌ಗೆ ಪರಾರಿಯಾಗಿದ್ದ ಆರೋಪಿಗಳಿಗೆ ಹಣದ ಸಹಾಯ ಮಾಡಿದ್ದಾನೆ ಎಂದು ಮೂಲಗಳು ತಿಳಿಸಿವೆ.
2006 ರ ಉಮೇಶ್ ಪಾಲ್ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಎಂಪಿ–ಎಂಎಲ್‌ಎ ಕೋರ್ಟ್ ಮಾರ್ಚ್ 28 ರಂದು ಅತೀಕ್ ಅಹ್ಮದ್ ಸೇರಿ ಇಬ್ಬರನ್ನು ತಪ್ಪಿಸ್ಥರೆಂದು ಪರಿಗಣಿಸಿ ಅವರಿಗೆ ಕಠಿಣ ಜೀವಾವಧಿ ಶಿಕ್ಷೆಯನ್ನು ವಿಧಿಸಿ, ಇತರ ಆರು ಆರೋಪಿಗಳನ್ನು ಬಿಡುಗಡೆಗೊಳಿಸಿತ್ತು.
ಸಮಾಜವಾದಿ ಪಕ್ಷದ ಸಂಸದ ಅತೀಕ್ ಅಹ್ಮದ್ ವಿರುದ್ಧ ಒಂದು ವರ್ಷದಲ್ಲಿ 100 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದರೂ ಇದೇ ಮೊದಲ ಬಾರಿಗೆ ಶಿಕ್ಷೆಯಾಗಿದೆ.
ಇವನ್ನೂ ಓದಿ: ಬಿಹಾರ ಹಿಂಸಾಚಾರ | ಪರಿಸ್ಥಿತಿ ಅವಲೋಕಿಸಿದ ಅಮಿತ್ ಶಾ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.