ADVERTISEMENT

Budget 2024|ದೆಹಲಿಗೆ ₹10 ಸಾವಿರ ಕೋಟಿ ಅನುದಾನ ನೀಡಿ: ಕೇಂದ್ರಕ್ಕೆ ಆತಿಶಿ ಆಗ್ರಹ

ಪಿಟಿಐ
Published 19 ಜುಲೈ 2024, 12:43 IST
Last Updated 19 ಜುಲೈ 2024, 12:43 IST
ಆತಿಶಿ
ಆತಿಶಿ   

(ಪಿಟಿಐ ಚಿತ್ರ)

ನವದೆಹಲಿ: ಕೇಂದ್ರ ಸರ್ಕಾರವು ಇದೇ 23ರಂದು ಕೇಂದ್ರೀಯ ಬಜೆಟ್‌ ಮಂಡಿಸಲು ಸಿದ್ಧತೆ ನಡೆಸಿರುವ ಬೆನ್ನಲ್ಲೆ, ದೆಹಲಿಯಲ್ಲಿ ಮೂಲ ಸೌಕರ್ಯಗಳ ಅಭಿವೃದ್ಧಿಗೆ ಕೇಂದ್ರ ಸರ್ಕಾರವು ₹10,000 ಕೋಟಿ ಅನುದಾನ ನೀಡಬೇಕೆಂದು ದೆಹಲಿ ಹಣಕಾಸು ಸಚಿವೆ ಆತಿಶಿ ಆಗ್ರಹಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕೇಂದ್ರ ಸರ್ಕಾರವು ಕಳೆದೊಂದು ವರ್ಷದಿಂದ ಆದಾಯ ತೆರಿಗೆ ರೂಪದಲ್ಲಿ ದೆಹಲಿಯಿಂದಲೇ ₹2 ಲಕ್ಷ ಕೋಟಿ ಸಂಗ್ರಹಿಸಿದ್ದರೂ, ದೆಹಲಿ ಸರ್ಕಾರಕ್ಕೆ ನಯಾ ಪೈಸೆ ನೀಡಿಲ್ಲ ಎಂದು ಅವರು ದೂರಿದ್ದಾರೆ. ಆದಾಯ ತೆರಿಗೆಯಷ್ಟೇ ಅಲ್ಲದೆ, ಜಿಎಸ್‌ಟಿ ರೂಪದಲ್ಲಿಯೂ ₹25 ಸಾವಿರ ಕೋಟಿ ಸಂಗ್ರಹಿಸಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ADVERTISEMENT

‘ಕೇಂದ್ರ ಸರ್ಕಾರವು ಮುಂಬೈನಿಂದ ತೆರಿಗೆ ರೂಪದಲ್ಲಿ ₹5 ಲಕ್ಷ ಕೋಟಿ ಸಂಗ್ರಹಿಸುತ್ತಿದೆ. ಅದಕ್ಕೆ ಪ್ರತಿಯಾಗಿ ₹54 ಸಾವಿರ ಕೋಟಿಯನ್ನು ಮಹಾರಾಷ್ಟ್ರ ಸರ್ಕಾರಕ್ಕೆ ಮರಳಿ ನೀಡುತ್ತಿದೆ. ಬೆಂಗಳೂರಿನಿಂದ ₹2 ಲಕ್ಷ ಕೋಟಿ ತೆರಿಗೆ ಸಂಗ್ರಹಿಸಿ, ಕರ್ನಾಟಕ ಸರ್ಕಾರಕ್ಕೆ ₹33 ಸಾವಿರ ಕೋಟಿ ಮರಳಿಸುತ್ತಿದೆ. ಆದರೆ, ಇಷ್ಟೇ ಹಣವನ್ನು ದೆಹಲಿಯಿಂದ ಸಂಗ್ರಹಿಸಿದರೂ 2001ರಿಂದಲೂ ಕೇವಲ ₹325 ಕೋಟಿಯನ್ನು ದೆಹಲಿ ಸರ್ಕಾರಕ್ಕೆ ನೀಡಿದೆ. ಕಳೆದ ವರ್ಷದಿಂದ ಅದನ್ನೂ ಸಂಪೂರ್ಣವಾಗಿ ನಿಲ್ಲಿಸಿದೆ’ ಎಂದು ಆರೋಪಿಸಿದ್ದಾರೆ.

ಆತಿಶಿಯವರ ಆರೋಪ ಕುರಿತು ಪ್ರತಿಕ್ರಿಯಿಸಿರುವ ದೆಹಲಿ ಬಿಜೆಪಿ ಕಾರ್ಯದರ್ಶಿ ಹರೀಶ್‌ ಖುರಾನ, ‘ಕೇಂದ್ರವು ದೆಹಲಿ ಸರ್ಕಾರಕ್ಕೆ 2015ರಲ್ಲಿ ₹4,258 ಕೋಟಿ ನೀಡಿದೆ ಹಾಗೂ 2022ರಲ್ಲಿ ಈ ಮೊತ್ತ ₹11,945 ಕೋಟಿಗೆ ಏರಿಕೆಯಾಗಿದೆ ಎಂದು ತಿರುಗೇಟು ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.