ನವದೆಹಲಿ: ಎಎಪಿ ಪಕ್ಷದ ಶಾಸಕಾಂಗ ಸಭೆಯಲ್ಲಿ ಅರವಿಂದ ಕೇಜ್ರಿವಾಲ್ ಅವರು ಸಚಿವೆ ಆತಿಶಿ ಹೆಸರನ್ನು ತಮ್ಮ ಉತ್ತರಾಧಿಕಾರಿಯಾಗಿ ಪ್ರಸ್ತಾಪಿಸಿದ್ದು, ಪಕ್ಷವು ಸರ್ವಾನುಮತದಿಂದ ಒಪ್ಪಿಗೆ ನೀಡಿದೆ.
ಭ್ರಷ್ಟಾಚಾರ ಪ್ರಕರಣದಲ್ಲಿ ಜೈಲು ಸೇರಿದ್ದ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಜಾಮೀನು ಪಡೆದು ಹೊರಬಂದ ಬಳಿಕ ಹುದ್ದೆಗೆ ರಾಜೀನಾಮೆ ನೀಡುವುದಾಗಿ ಹೇಳಿದ್ದರು. ಅಲ್ಲದೆ ದೆಹಲಿ ಜನತೆ ತಮ್ಮನ್ನು ಪ್ರಾಮಾಣಿಕ ಎಂದು ಒಪ್ಪಿಕೊಂಡ ಮೇಲೆ ಮತ್ತೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುವುದಾಗಿ ಪಕ್ಷದ ಕಾರ್ಯಕರ್ತರೊಂದಿಗಿನ ಸಭೆಯಲ್ಲಿ ಘೋಷಣೆ ಮಾಡಿದ್ದರು.
ಇಂದು ಸಂಜೆ ಕೇಜ್ರಿವಾಲ್ ಅವರು, ಲೆಫ್ಟಿನಂಟ್ ಗವರ್ನರ್ ವಿ.ಕೆ.ಸಕ್ಸೇನಾ ಅವರನ್ನು ಭೇಟಿಯಾಗಿ ರಾಜೀನಾಮೆ ಪತ್ರ ಸಲ್ಲಿಸಲಿದ್ದಾರೆ.
ಕೇಜ್ರಿವಾಲ್ ಅವರ ಅನುಪಸ್ಥಿತಿಯಲ್ಲಿ ಬಹುತೇಕ ಇಲಾಖೆಗಳ ಉಸ್ತುವಾರಿ ಹೊಂದಿದ್ದ ಸಚಿವೆ ಆತಿಶಿ, ಕೇಜ್ರಿವಾಲ್ ಅವರ ನಿಷ್ಠರು ಎಂದೇ ಗುರುತಿಸಲಾಗಿದೆ.
ಇತ್ತೀಚೆಗೆ ದೆಹಲಿಗೆ ನೀರು ಬಿಡುವಂತೆ ಉಪವಾಸ ಸತ್ಯಾಗ್ರಹ ಮಾಡಿದ್ದರು. ಅಲ್ಲದೆ ಕೇಜ್ರಿವಾಲ್ ವಿರುದ್ಧದ ಆರೋಪಗಳನ್ನು ಖಂಡಿಸಿ ಪ್ರತಿಭಟನೆಯನ್ನೂ ನಡೆಸಿದ್ದರು. ಸ್ವಾತಂತ್ರ್ಯ ದಿನ ಸಮಾರಂಭದಲ್ಲಿ ಧ್ವಜಾರೋಹಣಕ್ಕೆ ಆತಿಶಿ ಹೆಸರನ್ನೇ ಕೇಜ್ರಿವಾಲ್ ಸೂಚಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.