ನವದೆಹಲಿ: ದೆಹಲಿಯ ನೂತನ ಮುಖ್ಯಮಂತ್ರಿಯಾಗಿ ಆತಿಶಿ ಇಂದು (ಶನಿವಾರ) ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಸಂಜೆ 4.30ಕ್ಕೆ ರಾಜ್ ನಿವಾಸದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಅವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಮೂಲಕ ಸಿಎಂ ಗದ್ದುಗೆ ಏರಿದ ದೇಶದ 17ನೇ ಮಹಿಳೆ ಎಂಬ ಹೆಗ್ಗಳಿಕೆಗೆ ಆತಿಶಿ ಪಾತ್ರರಾಗಲಿದ್ದಾರೆ.
ಆತಿಶಿ ದೆಹಲಿಯ 3ನೇ ಮಹಿಳಾ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವುದು ವಿಶೇಷ. ಈ ಮೊದಲು ಬಿಜೆಪಿಯ ಸುಷ್ಮಾ ಸ್ವರಾಜ್ ಹಾಗೂ ಕಾಂಗ್ರೆಸ್‌ನ ಶೀಲಾ ದೀಕ್ಷಿತ್ ದೆಹಲಿಯ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸಿದ್ದಾರೆ.
ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಇತರ ಐವರು ಎಎಪಿ ನಾಯಕರು ಅವರ ಸಂಪುಟದ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಹೊಸ ಸಚಿವ ಸಂಪುಟದಲ್ಲಿ ಸುಲ್ತಾನಪುರ ಮಜ್ರಾ ಶಾಸಕ ಮುಕೇಶ್ ಅಹ್ಲಾವತ್, ಗೋಪಾಲ್ ರಾಯ್, ಕೈಲಾಶ್ ಗೆಹ್ಲೋತ್, ಸೌರಭ್ ಭಾರದ್ವಾಜ್ ಮತ್ತು ಇಮ್ರಾನ್ ಹುಸ್ಸೇನ್ ಸೇರಿದ್ದಾರೆ.
ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ಬಂಧಿತರಾಗಿದ್ದ ಕೇಜ್ರಿವಾಲ್ ಅವರು, ಸೆಪ್ಟೆಂಬರ್ 13ರಂದು ಜಾಮೀನು ಪಡೆದು ಜೈಲಿನಿಂದ ಬಿಡುಗಡೆಗೊಂಡಿದ್ದರು. ಬಳಿಕ ಅಚ್ಚರಿ ಎನ್ನುವಂತೆ ಸಿಎಂ ಸ್ಥಾನದಿಂದ ಕೆಳಗಿಳಿಯುವುದಾಗಿ ಘೋಷಿಸಿ ರಾಜೀನಾಮೆ ನೀಡಿದ್ದರು.
'ನೀವು ಪ್ರಾಮಾಣಿಕರು ಎಂದು ಜನರು ಹೇಳಿದ ನಂತರವೇ ನಾನು ಮುಖ್ಯಮಂತ್ರಿ ಆಗುತ್ತೇನೆ, ಮನೀಶ್ ಸಿಸೋಡಿಯಾ ಅವರು ಉಪ ಮುಖ್ಯಮಂತ್ರಿ ಆಗುತ್ತಾರೆ' ಎಂದೂ ಹೇಳಿದ್ದರು.
ಬಳಿಕ ನಡೆದ ಎಎಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ತಮ್ಮ ಉತ್ತರಾಧಿಕಾರಿಯಾಗಿ ಆತಿಶಿ ಅವರ ಹೆಸರನ್ನು ಕೇಜ್ರಿವಾಲ್ ಘೋಷಿಸಿದ್ದರು. ನಿರ್ಗಮಿತ ಸಿಎಂ ನಿರ್ಧಾರವನ್ನು ಎಎಪಿಯು ಸರ್ವಾನುಮತದಿಂದ ಅಂಗೀಕರಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.