ನವದೆಹಲಿ: ಅಸ್ಸಾಂನಲ್ಲಿ ಕಳೆದ ವರ್ಷ ನಡೆದಿದ್ದ ಸೇನೆ ಶಿಬಿರದ ಮೇಲಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರು ಆರೋಪಿಗಳ ವಿರುದ್ಧ ಎನ್‌ಐಎ ಮಂಗಳವಾರ ಆರೋಪ ಪಟ್ಟಿ ಸಲ್ಲಿಸಿದೆ.
ಭಾರತ ವಿರೋಧಿ ಕಾರ್ಯಸೂಚಿ ಭಾಗವಾಗಿ ನಡೆಸಲಾಗಿತ್ತು ಎನ್ನಲಾದ ಈ ದಾಳಿಗೆ ಸಂಬಂಧಿಸಿ ಸಲ್ಲಿಸಲಾಗಿರುವ ಆರೋಪಪಟ್ಟಿಯಲ್ಲಿ, ಮ್ಯಾನ್ಮಾರ್ ಮೂಲದ ನಿಷೇಧಿತ ಯುಎಲ್‌ಎಫ್‌ಎ–ಐ ಸಂಘಟನೆಯ ಒಬ್ಬ ಸದಸ್ಯನ ಹೆಸರನ್ನು ಸಹ ಉಲ್ಲೇಖಿಸಲಾಗಿದೆ.
ಕಳೆದ ವರ್ಷ ಡಿಸೆಂಬರ್ 14ರಂದು ದ್ವಿಚಕ್ರ ವಾಹನದ ಮೇಲೆ ಬಂದಿದ್ದ, ನಿಷೇಧಿತ ಸಂಘಟನೆಯ ಇಬ್ಬರು ಸದಸ್ಯರು, ಅಸ್ಸಾಂನ ಜೋರ್ಹಟ್ ಜಿಲ್ಲೆಯ ಲಿಚುಬಾರಿ ಎಂಬಲ್ಲಿ ಸೇನೆಯ ಶಿಬಿರದ ಮೇಲೆ ಗ್ರೆನೇಡ್‌ಗಳನ್ನು ಎಸೆದಿದ್ದರು. ಈಶಾನ್ಯ ಭಾರತದಲ್ಲಿರುವ ಸೇನೆಯ ಶಿಬಿರಗಳನ್ನು ಗುರಿಯಾಗಿಸಿ ಈ ದಾಳಿಗಳನ್ನು ನಡೆಸಲಾಗಿತ್ತು ಎಂದು ಎನ್‌ಐಎ ಪ್ರಕಟಣೆಯಲ್ಲಿ ತಿಳಿಸಿದೆ.
ಬಹುಮಾನ ಘೋಷಣೆ: ಪಂಜಾಬ್‌ನಲ್ಲಿ ನಡೆದಿದ್ದ ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ನಾಯಕ ವಿಕಾಸ್ ಪ್ರಭಾಕರ್ ಅವರ ಕೊಲೆ ಪ್ರಕರಣದಲ್ಲಿ ಬೇಕಾಗಿರುವ ಇಬ್ಬರು ಆರೋಪಿಗಳ ಕುರಿತು ಮಾಹಿತಿ ನೀಡಿದವರಿಗೆ ಎನ್‌ಐಎ, ತಲಾ ₹10 ಲಕ್ಷ ಬಹುಮಾನ ಘೋಷಿಸಿದೆ.
ಹರ್ಜೀತ್ ಸಿಂಗ್ ಅಲಿಯಾಸ್ ಲಡ್ಡಿ ಹಾಗೂ ಕುಲ್ಬೀರ್ ಸಿಂಗ್ ಅಲಿಯಾಸ್ ಸಿಧು ಆರೋಪಿಗಳು. ಇವರು ಮೇ 9ರಂದು ತಲೆಮರೆಸಿಕೊಂಡಿದ್ದಾರೆ ಎಂದು ತಿಳಿಸಿರುವ ಎನ್‌ಐಎ, ಆರೋಪಿಗಳ ಭಾವಚಿತ್ರಗಳನ್ನು ಬಿಡುಗಡೆ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.