ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ಸೇನಾ ವಾಹನಗಳ ಮೇಲೆ ಭಯೋತ್ಪಾದಕರು ನಡೆಸಿದ ದಾಳಿಯನ್ನು ’ಹೇಡಿತನದ ಕೃತ್ಯ’ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಜರಿದಿದ್ದಾರೆ.
ಈ ಸಂಬಂಧ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ದ್ರೌಪದಿ ಮುರ್ಮು, ‘ಭಯೋತ್ಪಾದಕರ ವಿರುದ್ಧ ಹೋರಾಡಿ ಪ್ರಾಣ ಕಳೆದುಕೊಂಡ ವೀರ ಯೋಧರ ಕುಟುಂಬಗಳಿಗೆ ಈ ನೋವನ್ನು ಭರಿಸುವ ಶಕ್ತಿ ದೇವರು ಕರುಣಿಸಲಿ, ಗಾಯಗೊಂಡವರು ಶೀಘ್ರವಾಗಿ ಗುಣಮುಖರಾಗಲೆಂದು ಪ್ರಾರ್ಥಿಸುತ್ತೇನೆ’ ಎಂದು ಹೇಳಿದ್ದಾರೆ.
‘ಈ ಘಟನೆಗೆ ತಕ್ಕ ಉತ್ತರ ನೀಡುವುದು ಅವಶ್ಯಕವಾಗಿದೆ’ ಎಂದು ಮುರ್ಮು ಪ್ರತಿಪಾದಿಸಿದರು.
ನಿನ್ನೆ (ಸೋಮವಾರ) ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ ಐವರು ಯೋಧರು ಮೃತಪಟ್ಟಿದ್ದು, ಹಲವಾರು ಯೋಧರು ಗಾಯಗೊಂಡಿದ್ದಾರೆ.
ಮಚೇಡಿ–ಕಿಂಡ್ಲಿ–ಮೊಲ್ಹಾರ್ ರಸ್ತೆಯಲ್ಲಿ ಯೋಧರು ಗಸ್ತು ತಿರುಗುತ್ತಿದ್ದಾಗ ಭಯೋತ್ಪಾದಕರು ಗ್ರೆನೇಡ್ ಮತ್ತು ಗುಂಡಿನ ದಾಳಿ ನಡೆಸಿದ್ದಾರೆ. ಐವರು ಯೋಧರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದಾಳಿ ನಡೆದ ಪ್ರದೇಶದಲ್ಲಿ ಇತ್ತೀಚೆಗೆ ಭಯೋತ್ಪಾದನೆ ಚಟುವಟಿಕೆಗಳು ಹೆಚ್ಚಾಗಿದ್ದ ಕಾರಣ ಸೇನೆಯು ಗಸ್ತು ತಿರುಗುತ್ತಿತ್ತು.
ಕಳೆದ ನಾಲ್ಕು ವಾರಗಳಲ್ಲಿ ಕಥುವಾದಲ್ಲಿ ನಡೆದ ಎರಡನೇ ಭಯೋತ್ಪಾದಕ ದಾಳಿ ಇದಾಗಿದ್ದು, ಜೂನ್ 12 ಮತ್ತು 13ರಂದು ಸೇನಾ ಕಾರ್ಯಾಚರಣೆ ವೇಳೆ ನಡೆದ ಗುಂಡಿನ ಚಕಮಕಿಯಲ್ಲಿ ಒಬ್ಬ ಸಿಆರ್‌ಪಿಎಫ್ ಯೋಧ ಮತ್ತು ಇಬ್ಬರು ಭಯೋತ್ಪಾದಕರು ಮೃತಪಟ್ಟಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.