ಜೈಪುರ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್) ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಬಂಧಿತರಾಗಿರುವ ಆರೋಪಿಗಳಿಗೆ ಸೇರಿದ ಕಟ್ಟಡವನ್ನು ದೇವಸ್ಥಾನಕ್ಕೆ ಸೇರಿದ ಜಾಗದಲ್ಲಿ ಅಕ್ರಮವಾಗಿ ನಿರ್ಮಿಸಿರುವುದರಿಂದ ಅದರ ಒಂದು ಭಾಗವನ್ನು ನೆಲಸಮಗೊಳಿಸಲಾಗಿದೆ.
ಜೈಪುರದ ಕರ್ಣಿ ವಿಹಾರ ದೇವಸ್ಥಾನದಲ್ಲಿ ಗುರುವಾರ ರಾತ್ರಿ ಆಯೋಜಿಸಲಾಗಿದ್ದ ಶರದ್ ಪೂರ್ಣಿಮಾ ಕಾರ್ಯಕ್ರಮಕ್ಕೆ ನುಗ್ಗಿದ ಹಲವರು ಅಲ್ಲಿದ್ದ ಆರ್‌ಎಸ್‌ಎಸ್ ಕಾರ್ಯಕರ್ತರ ಮೇಲೆ ಚಾಕು ಹಾಗೂ ಇತರ ಶಸ್ತ್ರಾಸ್ತ್ರಗಳಿಂದ ದಾಳಿ ನಡೆಸಿದ್ದರು. ಘಟನೆಯಲ್ಲಿ 10 ಜನ ಆರ್‌ಎಸ್‌ಎಸ್ ಕಾರ್ಯಕರ್ತರು ಗಾಯಗೊಂಡಿದ್ದರು. ಘಟನೆ ಬಳಿಕ ಆರೋಪಿಗಳಾದ ನಸೀಬ್ ಚೌಧರಿ, ಅವರ ಪತ್ನಿ ನಿರ್ಮಲಾ ಹಾಗೂ ಮಗ ಭೀಶಮ್ ಚೌಧರಿಯನ್ನು ಪೊಲೀಸರು ಬಂಧಿಸಿದ್ದಾರೆ.
ನಸೀಬ್ ಚೌಧರಿಯು ದೇವಸ್ಥಾನದ ಜಮೀನಿನ ಒಂದು ಭಾಗವನ್ನು ಮತ್ತು ಉದ್ಯಾನವನ್ನು ಒತ್ತುವರಿ ಮಾಡಿಕೊಂಡು ಕಟ್ಟಡವೊಂದನ್ನು ನಿರ್ಮಿಸಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದರು.
ದೇವಸ್ಥಾನದಲ್ಲಿ ಆರ್‌ಎಸ್‌ಎಸ್ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ ಘಟನೆ ಬಳಿಕ ಜೈಪುರ ಅಭಿವೃದ್ಧಿ ಪ್ರಾಧಿಕಾರವು ಸ್ಥಳದಲ್ಲಿ ಪರಿಶೀಲನೆ ನಡೆಸಿತು. ಒತ್ತುವರಿ ಮಾಡಿರುವುದು ತಿಳಿದ ಬಳಿಕ 24 ಗಂಟೆಯೊಳಗೆ ಉತ್ತರಿಸುವಂತೆ ಚೌಧರಿಗೆ ನೋಟಿಸ್ ನೀಡಿತ್ತು. ಆದರೆ, ನೋಟಿಸ್‌ಗೆ ಯಾವುದೇ ಪ್ರತಿಕ್ರಿಯೆ ಬಾರದ ಕಾರಣಕ್ಕೆ ಕಟ್ಟಡದ ಭಾಗವನ್ನು ನೆಲಸಮಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.