ADVERTISEMENT

ಕೋವಿಡ್ ಲಸಿಕೆ 3ನೇ ಹಂತದ ಅಭಿಯಾನ: ತಪ್ಪು ಮಾಹಿತಿ ಹರಡಲು ಯತ್ನ– ಸಚಿವ ಹರ್ಷವರ್ಧನ್

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2021, 3:02 IST
Last Updated 26 ಏಪ್ರಿಲ್ 2021, 3:02 IST
ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್
ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್   

ನವದೆಹಲಿ: ಇತ್ತೀಚೆಗಷ್ಟೇ ಘೋಷಿಸಲಾದ 'ಮೇ 1 ರಿಂದ ವಿಸ್ತೃತ ಮತ್ತು ವೇಗದ ಮೂರನೇ ಹಂತದ ಕೋವಿಡ್-19 ಲಸಿಕೆ ನೀಡಿಕೆ ಕಾರ್ಯತಂತ್ರ' ಕುರಿತಂತೆ ಕೇಳಿಬಂದಿರುವ ಆರೋಪಗಳ ಕುರಿತಂತೆ ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್, ಭಾನುವಾರ ಪ್ರತಿಪಕ್ಷದ 'ಕೆಲವು ರಾಜಕೀಯ ಮುಖಂಡರ'ನ್ನು ತರಾಟೆಗೆ ತೆಗೆದುಕೊಂಡರು. ಅವರು 'ಅನಗತ್ಯ ರಾಜಕೀಯ' ಮತ್ತು 'ತಪ್ಪು ಮಾಹಿತಿಯನ್ನು' ಹರಡುತ್ತಿದ್ದಾರೆ ಎಂದು ದೂರಿದರು.

'ಯಾವುದೇ ಯುದ್ಧದಲ್ಲಾದರೂ ಸಮಯವು ಅತ್ಯಂತ ಮುಖ್ಯವಾಗಿರುತ್ತದೆ. ಭೀತಿಗೊಳಿಸುವ ರೋಗವು ಸುನಾಮಿಯಂತೆ ಹರಡುತ್ತಿರುವಾಗ, ನಿಯಂತ್ರಣಗಳನ್ನು ಸರಾಗಗೊಳಿಸುವ ಮತ್ತು ರಾಜ್ಯ ಸರ್ಕಾರಗಳಿಗೆ ಹಾಗೂ ಖಾಸಗಿ ವಲಯಕ್ಕೆ ಮುಕ್ತ ಅವಕಾಶ ನೀಡುವುದು ನಿರ್ಣಾಯಕವಾಗಿತ್ತು. ಆದ್ದರಿಂದ, ಪ್ರಧಾನಿ ನರೇಂದ್ರ ಮೋದಿಯವರ ಸಮರ್ಥ ಮಾರ್ಗದರ್ಶನದಲ್ಲಿ ವ್ಯಾಕ್ಸಿನೇಷನ್ ನೀತಿ ನಿಯಮಗಳನ್ನು ಸರಾಗಗೊಳಿಸಲು ನಾವು ನಿರ್ಧರಿಸಿದ್ದೇವೆ' ಎಂದರು.

'ಲಸಿಕೆ ಅಭಿಯಾನದ ಪ್ರಮುಖ ಹಂತ'ದ ಬಗ್ಗೆ 'ಹೆಚ್ಚಿನ ತಪ್ಪು ಮಾಹಿತಿಯನ್ನು ಹರಡಲು ಪ್ರಯತ್ನಿಸಲಾಗುತ್ತಿದೆ' ಎನ್ನುವುದು ದುರದೃಷ್ಟಕರ. ವಿಶ್ವದ ಅತಿದೊಡ್ಡ ಲಸಿಕಾ ಅಭಿಯಾನದ ಹಳಿ ತಪ್ಪಿಸಲು ಪ್ರಯತ್ನಿಸುತ್ತಿರುವ ಕೆಲವು ಪಟ್ಟಭದ್ರ ಹಿತಾಸಕ್ತಿಗಳ ಪ್ರಯತ್ನಗಳನ್ನು ಪತ್ತೆಹಚ್ಚಲು ನಾನು ಬಯಸುತ್ತೇನೆ. ಇದುವರೆಗೆ 14 ಕೋಟಿ ಲಸಿಕೆ ಪ್ರಮಾಣವನ್ನು ರಾಜ್ಯಗಳು ಜನರಿಗೆ ನೀಡಿವೆ ಮತ್ತು ಇನ್ನೂ ಕೆಲವು ಕೋಟಿ ಲಸಿಕೆಗಳನ್ನು ಸಂಗ್ರಹಿಸಲಾಗಿದೆ. ಇಲ್ಲಿಯವರೆಗೆ ಎಲ್ಲಾ ಡೋಸೇಜ್‌ಗಳನ್ನು ಕೇಂದ್ರವು ರಾಜ್ಯ ಸರ್ಕಾರಗಳಿಗೆ ಉಚಿತವಾಗಿ ನೀಡಿದೆ ಎಂದು ಹೇಳಿದರು.

ADVERTISEMENT

'ಹೊಸ ನೀತಿಯ ಪ್ರಕಾರ, ಮೇ 2021 ರಿಂದ ಮೂರನೇ ಹಂತದ ವ್ಯಾಕ್ಸಿನೇಷನ್ ಪ್ರಾರಂಭವಾಗುವ ನಂತರವೂ, ಲಸಿಕೆ ಉಚಿತ ವಿತರಣೆಯನ್ನು ಸರ್ಕಾರ ಮುಂದುವರಿಸುತ್ತದೆ. ಈ ಮೊದಲಿನಂತೆಯೇ, ಕೇಂದ್ರವು ತನ್ನ ಶೇ 50 ಕೋಟಾದಿಂದ ಲಸಿಕೆ ಪ್ರಮಾಣವನ್ನು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಉಚಿತವಾಗಿ ನೀಡಲಿದೆ. ಈ ಲಸಿಕೆಗಳನ್ನು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ನಿರ್ವಹಿಸುತ್ತಲೇ ಇರುತ್ತವೆ' ಎಂದು ತಿಳಿಸಿದರು.

ತಾವೇ ಲಸಿಕೆ ನೀಡುವ ಪ್ರಕ್ರಿಯೆಯನ್ನು ತೆರೆಯಬೇಕೆಂದು ಅನೇಕ ರಾಜ್ಯಗಳು ಮನವಿ ಮಾಡಿದ್ದವು. ಈಗ, ಈ 'ಬಾಕಿ ಶೇ 50ರಷ್ಟು ಕೋಟಾವನ್ನು' ಅವರು ಆದ್ಯತೆಯೆಂದು ಪರಿಗಣಿಸುವ ಗುಂಪುಗಳಿಗೆ ಲಸಿಕೆ ಹಾಕುವ ಸ್ವಾತಂತ್ರ್ಯವನ್ನು ನೀಡುತ್ತದೆ. ಆರೋಗ್ಯವು ರಾಜ್ಯಕ್ಕೆ ಸಂಬಂಧಿಸಿದ ವಿಷಯವಾಗಿದೆ ಎಂಬುದು ಸತ್ಯ, ಅಲ್ಲಿ ಕೇಂದ್ರವು ಮೂಲಭೂತವಾಗಿ ರಾಜ್ಯಗಳನ್ನು ಸಮನ್ವಯಗೊಳಿಸುತ್ತದೆ ಮತ್ತು ಸುಗಮಗೊಳಿಸುತ್ತದೆ. ಲಸಿಕೆ ವಿತರಣಾ ನೀತಿಯನ್ನು ಉದಾರೀಕರಣಗೊಳಿಸಲು ಮತ್ತು ನಿಯಂತ್ರಣವನ್ನು ರಾಜ್ಯಗಳಿಗೆ ನೀಡಲು ಬಹುತೇಕ ಎಲ್ಲ ರಾಜ್ಯಗಳಿಂದ ವಿನಂತಿಗಳನ್ನು ಸ್ವೀಕರಿಸಿದ ನಂತರ, ನಾವು ಮುಂದೆ ಹೋಗಲು ನಿರ್ಧರಿಸಿದ್ದೇವೆ' ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.