ADVERTISEMENT

ಪೋಶೆ ಅಪಘಾತ | ಬಾಲಕ ಕಾರು ಚಲಾಯಿಸುತ್ತಿರಲಿಲ್ಲ ಎಂದು ಬಿಂಬಿಸುವ ಯತ್ನ: ಪೊಲೀಸ್‌

ಪಿಟಿಐ
Published 24 ಮೇ 2024, 10:29 IST
Last Updated 24 ಮೇ 2024, 10:29 IST
<div class="paragraphs"><p>ಪೋಶೆ ಕಾರು ಅಪಘಾತ</p></div>

ಪೋಶೆ ಕಾರು ಅಪಘಾತ

   

ಪಿಟಿಐ ಚಿತ್ರ

ಪುಣೆ: ಇಬ್ಬರ ಸಾವಿಗೆ ಕಾರಣವಾಗಿದ್ದ ಪೋಶೆ ಕಾರು ಅಪಾಘಾತ ಪ್ರಕರಣದಲ್ಲಿ, ಬಾಲಕ ಕಾರು ಚಲಾಯಿಸುತ್ತಿರಲಿಲ್ಲ ಎಂದು ಬಿಂಬಿಸುವ ಪ್ರಯತ್ನ ನಡೆಯುತ್ತಿದೆ ಎಂದು ಪುಣೆ ನಗರ ಪೊಲೀಸ್ ಆಯುಕ್ತ ಅಮಿತೇಶ್ ಕುಮಾರ್‌ ಶುಕ್ರವಾರ ಹೇಳಿದ್ದಾರೆ.

ADVERTISEMENT

ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಳ್ಳುವಾಗಲೂ ಕೆಲವು ಪೊಲೀಸರು ಕರ್ತವ್ಯದಲ್ಲಿ ಲೋ‍‍ಪ ಎಸಗಿದ್ದು ಆಂತರಿಕ ತನಿಖೆಯಿಂದ ಗೊತ್ತಾಗಿದೆ. ಅವರ ಮೇಲೂ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ.

‘ಅಪಘಾತ ನಡೆದ ವೇಳೆ ಅಪ್ರಾಪ್ತನೇ ಕಾರು ಚಲಾಯಿಸಿದ್ದ ಎಂದು ನಮ್ಮ ತನಿಖೆ ವೇಳೆ ಗೊತ್ತಾಗಿದೆ. ಅದಕ್ಕೆ ಬೇಕಾದ ಸಾಕ್ಷ್ಯಗಳನ್ನೂ ನಾವು ಸಂಗ್ರಹಿಸಿದ್ದೇವೆ. ತಾಂತ್ರಿಕ ಹಾಗೂ ಸಿಸಿಟಿವಿ ಸಾಕ್ಷ್ಯಗಳಿಂದ, ಬಾಲಕನೇ ಕಾರು ಚಲಾಯಿಸಿದ್ದ ಎಂದು ಅಖೈರಾಗಿದೆ. ಸಾಕ್ಷಿದಾರರು ಕೂಡ ಅದನ್ನೇ ತಿಳಿಸಿದ್ದಾರೆ’ ಎಂದು ಅವರು ಮಾಹಿತಿ ನೀಡಿದ್ದಾರೆ.

ಅಪಘಾತ ಸಂಭವಿಸುವ ವೇಳೆ ಕುಟುಂಬದ ಚಾಲಕ ಕಾರು ಓಡಿಸುತ್ತಿದ್ದ ಎಂದು ಬಿಂಬಿಸುವ ಪ್ರಯತ್ನ ನಡೆಯುತ್ತಿದೆ. ನಾವು ಈ ಬಗ್ಗೆ ತನಿಖೆ ನಡೆಸುತ್ತಿದ್ದೇವೆ. ಈ ರೀತಿ ಬಿಂಬಿಸಲು ಪ್ರಯತ್ನಿಸುತ್ತಿರುವವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ.

‍ಪೊಲೀಸರ ಪರ ಕೋರ್ಟ್‌ನಲ್ಲಿ ವಾದ ಮಂಡಿಸಲು ವಿಶೇಷ ವಕೀಲರನ್ನು ನೇಮಕ ಮಾಡುತ್ತೇವೆ ಎಂದು ಅವರು ತಿಳಿಸಿದ್ದಾರೆ.

ರಿಯಲ್ ಎಸ್ಟೇಟ್ ಉದ್ಯಮಿ ವಿಶಾಲ್ ಅಗರ್ವಾಲ್ ಅವರ 17 ವರ್ಷದ ಪುತ್ರ ಕುಡಿದು ಈ ಕಾರನನ್ನು ಚಲಾಯಿಸಿ ಇಬ್ಬರು ಸಾಫ್ಟ್‌ವೇರ್ ಎಂಜಿನಿಯರ್‌ಗಳ ಸಾವಿಗೆ ಕಾರಣವಾಗಿದ್ದ ಎಂದು ಆರೋಪಿಸಲಾಗಿದೆ. ಮುಂಬೈನ ಕಲ್ಯಾಣಿ ನಗರದಲ್ಲಿ ಘಟನೆ ನಡೆದಿತ್ತು.

ಪ್ರಕರಣದಲ್ಲಿ ಬಾಲಕನನ್ನು ಜೂನ್ 5ರವರೆಗೆ ಬಾಲ ವೀಕ್ಷಣಾಯದಲ್ಲಿ ಇರಿಸಲಾಗಿದೆ. ತಂದೆಗೆ ಮೇ 24ರ ವರೆಗೆ ಪೊಲೀಸ್ ಕಸ್ಟಡಿ ವಿಧಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.