ನವದೆಹಲಿ: ರೈಲ್ವೆ ನಿಲ್ದಾಣದಲ್ಲಿ ಬ್ಯಾಗ್ ಹಿಡಿದು ನಿಂತಿರುವ ನರೇಂದ್ರ ಮೋದಿ ಪೇಂಟಿಂಗ್‌ಗೆ ₹50 ಸಾವಿರ ಕನಿಷ್ಠ ಬೆಲೆ ನಿಗದಿ ಪಡಿಸಲಾಗಿತ್ತು, ಮೋದಿ ಅಭಿಮಾನಿಯೊಬ್ಬರು ಹರಾಜಿನಲ್ಲಿ ₹5 ಲಕ್ಷ ನೀಡಿ ಆಚಿತ್ರವನ್ನು ತಮ್ಮದಾಗಿಸಿಕೊಂಡರು.
ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಂದಿದ್ದ ಸ್ಮರಣಿಕೆಗಳನ್ನು ದೆಹಲಿಯ ಮಾಡರ್ನ್ ಆರ್ಟ್ ನ್ಯಾಷನಲ್ ಗ್ಯಾಲರಿಯಲ್ಲಿ ಭಾನುವಾರ ಮತ್ತು ಸೋಮವಾರ ಹರಾಜು ಹಾಕಲಾಗಿದೆ.ಪ್ರಧಾನಿ ಮೋದಿಗೆ ಉಡುಗೊರೆಯಾಗಿ ನೀಡಿದ್ದಮರದಿಂದ ಮಾಡಿದ ಬೈಕ್‌ವೊಂದಕ್ಕೆ ₹40 ಸಾವಿರ ಕನಿಷ್ಠ ಬೆಲೆ ನಿಗದಿ ಪಡಿಸಲಾಗಿತ್ತು. ಇದೂ ಸಹ ₹5 ಲಕ್ಷಕ್ಕೆ ಖರೀದಿಯಾಗಿದೆ ಎಂದು ಸಂಸ್ಕೃತಿ ಸಚಿವ ಮಹೇಶ್ ಶರ್ಮಾ ಸೋಮವಾರ ತಿಳಿಸಿದ್ದಾರೆ.
ಆರ್ಟ್ ಗ್ಯಾಲರಿಯಲ್ಲಿ ಹರಾಜು ಪ್ರಕ್ರಿಯೆ ಸೋಮವಾರವೇ ಕೊನೆಯಾಗಿದ್ದು, ಮಂಗಳವಾರದಿಂದ ಗುರುವಾರ(ಜ.31)ದ ವರೆಗೂ ಇ–ಹರಾಜು ಪ್ರಕ್ರಿಯೆ ನಡೆಯಲಿದೆ. ಪ್ರಧಾನಿ ಸ್ವೀಕರಿಸಿರುವ 1,900 ಉಡುಗೊರೆಗಳ ಪೈಕಿ 270 ವಸ್ತುಗಳು ಈಗಾಗಲೇ ಬಿಕರಿಯಾಗಿವೆ. ಉಳಿದ ವಸ್ತುಗಳ ಚಿತ್ರಸಹಿತ ಮಾಹಿತಿಯನ್ನು www.pmmementos.gov.in ಪೋರ್ಟಲ್‌ನಲ್ಲಿ ಪ್ರಕಟಿಸಲಾಗಿದ್ದು, ಆನ್‌ಲೈನ್ ಮೂಲಕವೇ ಹರಾಜು ನಡೆಸಿ ಇಷ್ಟದ ವಸ್ತುಗಳನ್ನು ಪಡೆದುಕೊಳ್ಳಬಹುದಾಗಿದೆ.
ಕಲಾಕೃತಿಗಳು, ವಾಸ್ತುಶಿಲ್ಪಗಳು, ಶಾಲು, ಜಾಕೆಟ್, ದೇಶದ ವಿವಿಧ ಭಾಗಗಳಲ್ಲಿ ಬಳಕೆಯಲ್ಲಿರುವ ಸಾಂಪ್ರದಾಯಿಕ ಸಂಗೀತ ಉಪಕರಣಗಳು ಸೇರಿದಂತೆ ಹಲವು ಉಡುಗೊರೆಗಳನ್ನು ಹರಾಜು ಹಾಕಲಾಗುತ್ತಿದೆ. ಹರಾಜಿನಿಂದ ಬಂದ ಹಣವನ್ನು ಗಂಗಾ ನದಿ ಸ್ವಚ್ಛಗೊಳಿಸುವ ಕೇಂದ್ರ ಸರ್ಕಾರದ ನಮಾಮಿ ಗಂಗೆಯೋಜನೆಗೆ ಬಳಸಿಕೊಳ್ಳಲಾಗುತ್ತದೆ. ಇ–ಹರಾಜಿನಲ್ಲಿ ವಿದೇಶದಿಂದಲೂ ಜನರು ಬಿಡ್ ಮಾಡಬಹುದು.
ಪ್ರಧಾನಿ ಮೋದಿ ಅವರ ಉಡುಗೊರೆಗಳನ್ನು ಖರೀದಿಸಲು ಉತ್ಸುಕರಾಗಿರುವ ಜನರು ನಿಗದಿತ ಬೆಲೆಗಿಂತ ಹೆಚ್ಚಿನ ಬಿಡ್ ಕೂಗಿ ವಸ್ತಗಳನ್ನು ಖರೀದಿಸುತ್ತಿದ್ದಾರೆ. ಸ್ವರ್ಣ ಮಂದಿರದ ರಚನೆಯನ್ನು ಹೊಂದಿರುವ ಸ್ಮರಣಿಕೆಯು ₹3.5 ಲಕ್ಷಕ್ಕೆ ಮಾರಾಟವಾಗಿದೆ. ಇದಕ್ಕೆ ನಿಗದಿ ಪಡಿಸಿದ್ದ ಬೆಲೆ ₹10,000.
₹1,500 ನಿಗದಿಯಾಗಿದ್ದ ಅಷ್ಟಮಂಗಳಂ ಫೋಟೊ ಫ್ರೇಮ್ ₹28 ಸಾವಿರಕ್ಕೆ ಮಾರಾಟವಾಗಿದೆ. ₹5 ಸಾವಿರ ನಿಗದಿತ ಬೆಲೆಯ ಲೋಹದ ಕಡ್ಗಕ್ಕೆ ₹1 ಲಕ್ಷ ಹಾಗೂ₹5 ಸಾವಿರ ನಿಗದಿತ ಬೆಲೆಯ ಬಸವೇಶ್ವರರ ಪುತ್ಥಳಿಗೆ ₹70 ಸಾವಿರ ನೀಡಿ ಜನರು ಪಡೆದುಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.