ADVERTISEMENT

ಕೋಲ್ಕತ್ತ ವಿದ್ಯಾರ್ಥಿನಿ ಕೊಲೆ ದಿನ ಆಸ್ಪತ್ರೆಯಿದ ಮೂರು ಕರೆ, ಭಿನ್ನ ಮಾಹಿತಿ...

ಪಿಟಿಐ
Published 29 ಆಗಸ್ಟ್ 2024, 16:34 IST
Last Updated 29 ಆಗಸ್ಟ್ 2024, 16:34 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕೋಲ್ಕತ್ತ: ಅತ್ಯಾಚಾರ ಮತ್ತು ಹತ್ಯೆಗೀಡಾದ ವೈದ್ಯ ವಿದ್ಯಾರ್ಥಿನಿಯ ತಂದೆ–ತಾಯಿಗೆ, ಆರ್.ಜಿ. ಕರ್ ವೈದ್ಯಕೀಯ ಕಾಲೇಜಿನ ಸಿಬ್ಬಂದಿ ಆಗಸ್ಟ್‌ 9ರ ಬೆಳಿಗ್ಗೆ ಮಾಡಿದ್ದು ಎನ್ನಲಾದ ದೂರವಾಣಿ ಕರೆಯ ವಿವರಗಳು ಗುರುವಾರ ಬಹಿರಂಗವಾಗಿವೆ.

ಸಿಬ್ಬಂದಿ ಆ ತಂದೆ–ತಾಯಿಗೆ ನೀಡಿದ ಮಾಹಿತಿ ತಪ್ಪಾಗಿತ್ತು ಹಾಗೂ ಮಾಹಿತಿ ನೀಡುವಾಗ ಎಷ್ಟು ಅಸೂಕ್ಷ್ಮವಾಗಿ ವರ್ತಿಸಿದ್ದರು ಎಂಬದು ಈಗ ಚರ್ಚೆಗೀಡಾಗಿದೆ.

ದೂರವಾಣಿ ಕರೆ ಮಾಡಿದ್ದ ಸಿಬ್ಬಂದಿ, ‘ವಿವರ ನೀಡುವಾಗ ಮಾತುಗಳನ್ನು ಬದಲಿಸಿರುವುದು ಕೃತ್ಯವನ್ನು ಮುಚ್ಚಿಹಾಕುವ ಯತ್ನ ಆಸ್ಪತ್ರೆಯಿಂದ ನಡೆದಿತ್ತೇ ಎಂಬ ಪ್ರಶ್ನೆಯನ್ನೂ ಮೂಡಿಸಿದೆ. ದೂರವಾಣಿ ಕರೆಯ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಪಿಟಿಐ ಸುದ್ದಿಸಂಸ್ಥೆಗೆ ಸಾಧ್ಯವಾಗಿಲ್ಲ.

ADVERTISEMENT

ಸಂತ್ರಸ್ತೆ ತಂದೆಗೆ ಕರೆ ಮಾಡಿದ್ದ ಮಹಿಳೆಯು ತನ್ನನ್ನು ಆಸ್ಪತ್ರೆಯ ಸಹಾಯಕ ಅಧೀಕ್ಷಕಿ ಎಂದು ಪರಿಚಯಿಸಿಕೊಂಡಿದ್ದಾರೆ. ಮೂವತ್ತು ನಿಮಿಷಗಳಲ್ಲಿ ಆ  ಮಹಿಳೆ ಸಂತ್ರಸ್ತೆ ತಂದೆಗೆ ಮೂರು ಬಾರಿ ಕರೆ ಮಾಡಿದ್ದಾರೆ. ತಕ್ಷಣ ಆಸ್ಪತ್ರೆಗೆ ಬನ್ನಿ ಎಂದು ಮತ್ತೆ, ಮತ್ತೆ ಹೇಳಿದ್ದಾರೆ.

ಕರೆಗಳಲ್ಲಿ ಏನಿದೆ?

ಬೆಳಿಗ್ಗೆ 10.53ಕ್ಕೆ ತಂದೆಗೆ ಬಂದ ಮೊದಲ ಕರೆ

ಮಹಿಳೆ: ನಾನು ಆರ್‌.ಜಿ. ಕರ್ ಆಸ್ಪತ್ರೆಯಿಂದ ಕರೆ ಮಾಡುತ್ತಿದ್ದೇನೆ. ನೀವು ಇಲ್ಲಿಗೆ ತಕ್ಷಣ ಬರಬಹುದೇ?

ತಂದೆ: ಏಕೆ? ಏನಾಗಿದೆ?

ಮಹಿಳೆ: ನಿಮ್ಮ ಮಗಳಿಗೆ ಸ್ವಲ್ಪ ಹುಷಾರಿಲ್ಲ. ಆಕೆಯನ್ನು ಚಿಕಿತ್ಸೆಗೆ ದಾಖಲು ಮಾಡಿಕೊಳ್ಳುತ್ತಿದ್ದೇವೆ. ನೀವು ಬೇಗನೆ ಬರಬಹುದೇ?

ಹೆಚ್ಚಿನ ಮಾಹಿತಿಗೆ ತಂದೆ ಒತ್ತಾಯಿಸಿದಾಗ, ‘ವೈದ್ಯರು ಮಾತ್ರ ಆ ಮಾಹಿತಿ ನೀಡಬಲ್ಲರು. ನಿಮ್ಮ ದೂರವಾಣಿ ಸಂಖ್ಯೆ ಪತ್ತೆ ಮಾಡಿ, ಕರೆ ಮಾಡಿದೆವು’ ಎನ್ನುತ್ತಾರೆ. 

ಪರಿಸ್ಥಿತಿ ಗಂಭೀರವಾಗಿದೆಯೇ ಎಂಬ ಪ್ರಶ್ನೆಗೆ, ‘ಹೌದು,ಗಂಭೀರವಾಗಿದೆ. ಬೇಗ ಬನ್ನಿ’ ಎಂಬ ಉತ್ತರ. ಈ ಕರೆಯ ಅವಧಿ ಸುಮಾರು 11 ಸೆಕೆಂಡ್ ಇದೆ.

2ನೇ ಕರೆ ಐದು ನಿಮಿಷದ ಬರುತ್ತದೆ. ಅದರ ಅವಧಿ ಸುಮಾರು 46 ಸೆಕೆಂಡ್. ಮತ್ತದೇ ಮಹಿಳೆ: ‘ಮಗಳ ಸ್ಥಿತಿ ತುಂಬಾ ಗಂಭೀರವಾಗಿದೆ. ಬೇಗ ಬನ್ನಿ. ಎಷ್ಟು ಸಾಧ್ಯವೋ ಅಷ್ಟು ಬೇಗ ಬನ್ನಿ’ ಎನ್ನುತ್ತಾರೆ.

ಆತಂಕಗೊಂಡ ತಂದೆ, ‘ಏನಾಗಿದೆ ಮಗಳಿಗೆ’ ಎಂದು ಪ್ರಶ್ನಿಸುತ್ತಾರೆ. ಆಗಲೂ ಅದೇ ಉತ್ತರ: ‘ವೈದ್ಯರು ತಿಳಿಸುತ್ತಾರೆ. ಬೇಗ ಬನ್ನಿ’

ಆಗ ತಂದೆ ನೀವು ಯಾರು ಎಂದು ಪ್ರಶ್ನಿಸಿದಾಗ, ‘ನಾನು, ಸಹಾಯಕ ಸೂಪರಿಟೆಂಡೆಂಟ್. ವೈದ್ಯೆಯಲ್ಲ. ನಿಮ್ಮ ಮಗಳನ್ನು ತುರ್ತು ಚಿಕಿತ್ಸಾ ಕೊಠಡಿಗೆ ಕರೆತಂದಿದ್ದೇವೆ. ಬೇಗ ಬನ್ನಿ’.

‘ದಯವಿಟ್ಟು ಏನಾಯಿತು ತಿಳಿಸಿ. ಆಕೆ, ಡ್ಯೂಟಿಯಲ್ಲಿದ್ದಳು’ ಎಂದು ಆತಂಕದ ದನಿಯಲ್ಲಿ ವೈದ್ಯೆಯ ತಾಯಿ, ಹಿನ್ನೆಲೆಯಲ್ಲಿ ಕೇಳುತ್ತಾರೆ. 

ಆದರೆ, ಮೂರು ಮತ್ತು ಅಂತಿಮ ಕರೆಯಲ್ಲಿ ತಂದೆ–ತಾಯಿಗೆ, ಸಾವಿನ ಸುದ್ದಿ ತಿಳಿಸಲಾಗುತ್ತದೆ.

‘ಹೌದು, ದಯವಿಟ್ಟು ಕೇಳಿಸಿಕೊಳ್ಳಿ. ಮೊದಲಿನಿಂದ ಮತ್ತೆ, ಮತ್ತೆ ಹೇಳುತ್ತಿದ್ದೇವೆ. ನಿಮ್ಮ ಮಗಳು ಆತ್ಮಹತ್ಯೆ ಮಾಡಿಕೊಂಡಿರಬಹುದು ಅಥವಾ... ಆಕೆ ಸತ್ತಿದ್ದಾಳೆ. ಇಲ್ಲಿ ಪೊಲೀಸರು ಇದ್ದಾರೆ. ಆಸ್ಪತ್ರೆಯ ಎಲ್ಲರೂ ಇದ್ದೇವೆ.‘ ಎಂದು ಮೊದಲು ಕರೆ ಮಾಡಿದ್ದ ಮಹಿಳೆಯೇ, ಈಗ ಮಾತುಗಳನ್ನು ತಡೆದು ಆಡಿ ಹೇಳುತ್ತಾರೆ.

ಅಂತಿಮ ಕರೆಯ ಅವಧಿ 28 ಸೆಕೆಂಡ್‌ಗಳು.

ಆಸ್ಪತ್ರೆಯ ಸಿಬ್ಬಂದಿ ನೀಡಿದ ಹೇಳಿಕೆಗಳಲ್ಲಿ ಬದಲಾವಣೆ ಇದೆ. ಮೊದಲ ಕರೆಯಲ್ಲಿ ಸ್ವಲ್ಪ ಅನಾರೋಗ್ಯವಿದೆ ಎಂದರೆ, ಎರಡನೇ ಕರೆಯಲ್ಲಿ ತುರ್ತು ಚಿಕಿತ್ಸಾ ಕೊಠಡಿಗೆ ದಾಖಲಿಸಿದ್ದೇವೆ ಎನ್ನುತ್ತಾರೆ. ಮೂರನೇ ಕರೆಯಲ್ಲಿ, ‘ಮಗಳು ಆತ್ಮಹತ್ಯೆ ಮಾಡಿಕೊಂಡಿರಬಹುದು’ ಎನ್ನುತ್ತಾರೆ.

ಕುಟುಂಬ ಸದಸ್ಯರ ಹಾದಿ ತಪ್ಪಿಸುವಂತೆ ಮಾಹಿತಿ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸುತ್ತಾರೆ.

‘ಆಸ್ಪತ್ರೆ ಸಿಬ್ಬಂದಿಗೆ ಕ್ರೂರಕೃತ್ಯದ ಸಂಪೂರ್ಣ ಮಾಹಿತಿ ಇದ್ದಾಗಲೂ, ತಿರುಚಿದ, ತಪ್ಪಾದ ಮಾಹಿತಿಯನ್ನು ಪೋಷಕರಿಗೆ ನೀಡುವುದು ಹೇಗೆ ಸಾಧ್ಯ‘ ಎಂದು ಪ್ರತಿಭಟನನಿರತ ವಿದ್ಯಾರ್ಥಿಯೊಬ್ಬರು ಪ್ರಶ್ನಿಸಿದರು.

ಘೋಷ್ ವಿಚಾರಣೆ ಮುಂದುವರಿಸಿದ ಸಿಬಿಐ

ಕೋಲ್ಕತ್ತ: ವೈದ್ಯ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಹಾಗೂ ಆಕೆಯ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್.ಜಿ. ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಮಾಜಿ ಪ್ರಾಂಶುಪಾಲ ಸಂದೀಪ್ ಘೋಷ್ ಅವರ ವಿಚಾರಣೆಯನ್ನು ಸಿಬಿಐ ಅಧಿಕಾರಿಗಳು ಗುರುವಾರ ಮುಂದುವರಿಸಿದರು.

ಘೋಷ್ ಅವರು ಸತತ 13ನೆಯ ದಿನವೂ ವಿಚಾರಣೆಗೆ ಸಿಬಿಐ ಅಧಿಕಾರಿಗಳ ಮುಂದೆ ಹಾಜರಾದರು ಎಂದು ಮೂಲಗಳು ತಿಳಿಸಿವೆ. ಘೋಷ್ ಅವರನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 130 ತಾಸಿಗೂ ಹೆಚ್ಚು ಕಾಲ ವಿಚಾರಣೆಗೆ ಗುರಿಪಡಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು. ಘೋಷ್ ಅವರನ್ನು ಸಿಬಿಐ ಅಧಿಕಾರಿಗಳು ಸುಳ್ಳುಪತ್ತೆ ಪರೀಕ್ಷೆಗೂ ಒಳಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.