ನವದೆಹಲಿ: ರೈಲು ಅಪಘಾತ ಮತ್ತು ದುರಂತಗಳನ್ನು ತಡೆಯುವ ನಿಟ್ಟಿನಲ್ಲಿ ಹೆಚ್ಚಿನ ಎಚ್ಚರಿಕೆ ವಹಿಸಬೇಕು ಎಂದು ರೈಲ್ವೆ ಸುರಕ್ಷತಾ ಆಯುಕ್ತರು ಶುಕ್ರವಾರ ರೈಲ್ವೆ ಮಂಡಳಿಗೆ ಪತ್ರ ಬರೆದಿದ್ದಾರೆ.
ಮಹಾರಾಷ್ಟ್ರದ ಔರಂಗಬಾದ್‌ನಲ್ಲಿ ಹಳಿಯಲ್ಲಿ ಮಲಗಿದ್ದ ವಲಸೆ ಕಾರ್ಮಿಕರ ಮೇಲೆ ಗೂಡ್ಸ್ ರೈಲು ಹರಿದು 16 ಮಂದಿ ಸಾವಿಗೀಡಾದ ಬೆನ್ನಲ್ಲೇ ಅವರು ಈ ಪತ್ರ ಬರೆದಿದ್ದಾರೆ.
ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರ ವಹಿಸಬೇಕು. ಹಳಿ ಗಸ್ತನ್ನು ಹೆಚ್ಚಿಸಬೇಕು. ಹಳಿಯಲ್ಲಿ ಯಾರಾದರೂ ಕಂಡು ಬಂದರೆ ಹತ್ತಿರದ ರೈಲು ನಿಲ್ದಾಣಕ್ಕೆ ಮಾಹಿತಿ ನೀಡಿ ರೈಲು ಬರುವುದನ್ನು ತಡೆಯಬೇಕು ಎಂದು ರೈಲ್ವೆ ಮಂಡಳಿ ಅಧ್ಯಕ್ಷ ವಿ.ಕೆ.ಯಾದವ್ ಅವರಿಗೆ ಬರೆದ ಪತ್ರದಲ್ಲಿ ರೈಲ್ವೆ ಸುರಕ್ಷತಾ ಆಯುಕ್ತ ಶೈಲೇಶ್ ಪಾಠಕ್ ಉಲ್ಲೇಖಿಸಿದ್ದಾರೆ.
‘ಈ ರೀತಿಯ ಅವಘಡಗಳು ಇನ್ನು ಮುಂದೆ ಸಂಭವಿಸದಂತೆ ಎಚ್ಚರಿಕೆ ವಹಿಸುವಂತೆ ತಕ್ಷಣವೇ ಎಲ್ಲ ರೈಲ್ವೆ ವಲಯಗಳಿಗೆ ಅಗತ್ಯ ನಿರ್ದೇಶನ ನೀಡಬೇಕು’ ಎಂದೂ ಅವರು ಪತ್ರದಲ್ಲಿ ಸೂಚಿಸಿದ್ದಾರೆ.
ಈ ಮಧ್ಯೆ, ಔರಂಗಾಬಾದ್ ಘಟನೆ ಬಗ್ಗೆ ರೈಲ್ವೆ ಇಲಾಖೆಯು ತನಿಖೆಗೆ ಆದೇಶಿಸಿದೆ. ಹಳಿಗೆ ಅಕ್ರಮ ಪ್ರವೇಶವನ್ನು ತಡೆಯುವುದಕ್ಕೆ ರೈಲ್ವೆಯಲ್ಲಿ ಗಸ್ತು ತಂಡ ಇದೆ. ಹಳಿಯನ್ನು ಪರಿಶೀಲಿಸುವುದು ಈ ತಂಡದ ಹೊಣೆ. ಹಳಿಯಲ್ಲಿ ಮಲಗಿದ್ದ ಕಾರ್ಮಿಕರು ಅವರ ಕಣ್ಣಿಗೆ ಯಾಕೆ ಬಿದ್ದಿಲ್ಲ ಎಂಬ ಬಗ್ಗೆಯೂ ತನಿಖೆ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.