ಉತ್ತರಕಾಶಿ: ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯ ಸಿಲ್ಕ್ಯಾರಾ–ಬಡಕೋಟ್ ಸುರಂಗದಲ್ಲಿ ಸಿಲುಕಿದ್ದ 41 ಮಂದಿ ಕಾರ್ಮಿಕರನ್ನು ರಕ್ಷಿಸಲು 17 ದಿನಗಳಿಂದ ನಡೆದಿದ್ದ ಹಿಮಾಲಯ ಸದೃಶ ಯತ್ನಕ್ಕೆ ಕೊನೆಗೂ ಜಯ ಸಿಕ್ಕಿದೆ.
ಅಷ್ಟೂ ಮಂದಿ ಕಾರ್ಮಿಕರನ್ನು ಸುರಕ್ಷಿತವಾಗಿ ಹೊರಗೆ ಕರೆದುಕೊಂಡು ಬರುವಲ್ಲಿ ರಕ್ಷಣಾ ಸಿಬ್ಬಂದಿ ಮಂಗಳವಾರ ರಾತ್ರಿ ಯಶಸ್ಸು ಕಂಡರು. ಭಾರತದಲ್ಲಿ ಇಂತಹ ಚಾರಿತ್ರಿಕ ಕಾರ್ಯಾಚರಣೆ ನಡೆದಿದ್ದು ಇದೇ ಮೊದಲು.
ಇನ್ನು ಈ ಕಾರ್ಯಾಚರಣೆಯಲ್ಲಿ ಪ್ರಮುಖವಾಗಿ ಗಮನ ಸೆಳೆದವರು ಆಸ್ಟ್ರೇಲಿಯಾದ ಅಂತರರಾಷ್ಟ್ರೀಯ ಸುರಂಗ ತಜ್ಞ ಅರ್ನಾಲ್ಡ್ ಡಿಕ್ಸ್.
ಅರ್ನಾಲ್ಡ್ ಡಿಕ್ಸ್ ಅವರು ಸ್ಥಳದಲ್ಲಿಯೇ ಬೀಡು ಬಿಟ್ಟು ಕಾರ್ಮಿಕರನ್ನು ಹೊರತರಲು ಸಾಕಷ್ಟು ಶ್ರಮಿಸಿದರು. ಸಲಹೆ, ಉಪಾಯಗಳನ್ನು ನೀಡಿದರು.
ಇದೇ ವೇಳೆ ಸುರಂಗದ ಹೊರಗೆ ನಿರ್ಮಿಸಲಾಗಿದ್ದ ದೇವಸ್ಥಾನದ ಮುಂದೆ ಕಾರ್ಮಿಕರ ಕುಟುಂಬದವರು ಪ್ರಾರ್ಥಿಸುತ್ತಿದ್ದರು. ಅರ್ನಾಲ್ಡ್ ಡಿಕ್ಸ್ ಕೂಡ ಇಲ್ಲಿ ನಿರ್ಮಿಸಲಾಗಿದ್ದ ಬಾಬಾ ಬೋಕ್ಯಾಂಗಾ ದೇವರಿಗೆ ಮೊರೆ ಹೋಗಿದ್ದರು. ಆ ಚಿತ್ರ ಸಾಕಷ್ಟು ಸದ್ದು ಮಾಡಿತ್ತು. ಅವರು ಕೂಡ ಕಾರ್ಮಿಕರ ಸುರಕ್ಷತೆಗಾಗಿ ಪ್ರಾರ್ಥಿಸಿ ಪೂಜೆ ಸಲ್ಲಿಸಿದ್ದರು.
ಇದೀಗ ಕಾರ್ಮಿಕರು ಸುರಕ್ಷಿತವಾಗಿ ಬಂದ ನಂತರ ಆ ದೇವರನ್ನು ಮರೆಯದ ಡಿಕ್ಸ್ ಮತ್ತೆ ಬಾಬಾ ಬೋಕ್ಯಾಂಗಾ ಮುಂದೆ ಮಂಡಿಯೂರಿ ಧನ್ಯವಾದ ಅರ್ಪಿಸಿದ್ದಾರೆ. ಅಲ್ಲದೇ ಭಾರತೀಯರ ಎಂಜಿನಿಯರಿಂಗ್ ಶ್ರೇಷ್ಠ ಸ್ಥಾನದಲ್ಲಿದೆ ಎಂದು ಕೊಂಡಾಡಿದ್ದಾರೆ.
ಕಾರ್ಮಿಕರ ಸುರಕ್ಷತೆಗಾಗಿ ಪ್ರಾರ್ಥಿಸಿ ಪೂಜೆ ಸಲ್ಲಿಸಿದ ಸಂದರ್ಭ –ಪಿಟಿಐ ಚಿತ್ರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.