ADVERTISEMENT

ವಿದ್ಯುನ್ಮಾನ ಮತಯಂತ್ರದ ಹಾದಿ...

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2019, 18:25 IST
Last Updated 30 ಮಾರ್ಚ್ 2019, 18:25 IST
ಇವಿಎಂ ಮತ್ತು ವಿವಿಪ್ಯಾಟ್
ಇವಿಎಂ ಮತ್ತು ವಿವಿಪ್ಯಾಟ್   

ಭಾರತದ ಚುನಾವಣಾ ಇತಿಹಾಸದಲ್ಲಿ ಮತಯಂತ್ರಗಳ (ಇವಿಎಂ) ಬಳಕೆ ಶುರುವಾಗಿದ್ದು ಮಹತ್ವದ ವಿದ್ಯಮಾನ. ಮತ ಖಾತರಿಪಡಿಸುವ ವಿವಿಪ್ಯಾಟ್‌ಗಳ ಬಳಕೆಯೂ ಕ್ರಮೇಣ ಆರಂಭವಾಯಿತು. ಇವಿಎಂ ಕಾರ್ಯನಿರ್ವಹಣೆ ಬಗ್ಗೆ ಹಲವು ರಾಜಕೀಯ ಪಕ್ಷಗಳು ಆಕ್ಷೇಪ ಎತ್ತಿವೆ.ಈವರೆಗೆ ಇವಿಎಂ ಮೂಲಕ 250 ಕೋಟಿ ಜನರು ಮತ ಚಲಾಯಿಸಿದ್ದಾರೆ. ಇವಿಎಂ ಬಳಕೆಯ ಹಿನ್ನೋಟ ಇಲ್ಲಿದೆ...

ಪ್ರಸ್ತಾವ

1977 :ಮತಪತ್ರಗಳ ಬದಲಾಗಿ ಮತದಾನಕ್ಕೆ ವಿದ್ಯುನ್ಮಾನ ಮತಯಂತ್ರಗಳ ಬಳಕೆ ಮಾಡುವ ಕುರಿತಂತೆ ಅಂದಿನ ಮುಖ್ಯಚುನಾವಣಾ ಆಯುಕ್ತ ಎಸ್.ಎಲ್. ಶಾಕಧೆರ್ ಅವರು ಮೊದಲ ಬಾರಿಗೆ ಪ್ರಸ್ತಾಪ ಮಾಡಿದರು

ADVERTISEMENT

ಮಾದರಿ

1979:ಆಯುಕ್ತರ ಪ್ರಸ್ತಾವದ ಬಳಿಕ ಮತಯಂತ್ರದ (ಇವಿಎಂ) ಮೊದಲ ಮಾದರಿ ತಯಾರಾಯಿತು.

ಪ್ರಾತ್ಯಕ್ಷಿಕೆ

1981:ಸಿದ್ಧವಾದ ಇವಿಎಂ ಬಳಕೆ ಕುರಿತು ಎಲೆಕ್ಟ್ರಾನಿಕ್ ಕಾರ್ಪೊರೇಷನ್ ಆಫ್ ಇಂಡಿಯಾ (ಇಸಿಐಎಲ್) ಮತ್ತು ಭಾರತ್ ಎಲೆಕ್ಟ್ರಾನಿಕ್ಸ್ ಕಾರ್ಪೊರೇಷನ್‌ (ಬಿಇಎಲ್) ಸಂಸ್ಥೆಗಳು ಪ್ರಾತ್ಯಕ್ಷಿಕೆ ನೀಡಿದವು.

ಇವಿಎಂ ಬಳಕೆ ಶುರು

1982:ಸಕಲ ಸಿದ್ಧತೆಗಳ ಬಳಿಕ ಕೇರಳದ ಪರೂರ್ ವಿಧಾನಸಭಾ ಚುನಾವಣೆಯಲ್ಲಿ ಮೊದಲ ಬಾರಿಗೆ ಇವಿಎಂ ಬಳಕೆ ಮಾಡಲಾಯಿತು. ಮೇ 19ರಂದು 84ರ ಪೈಕಿ 50 ಮತಗಟ್ಟೆಗಳಲ್ಲಿ ಜನರು ಮತಯಂತ್ರದ ಮೂಲಕವೇ ಮತ ಚಲಾವಣೆ ಮಾಡಿದರು.

ಶಾಂತಿನಗರದಲ್ಲಿ ಇವಿಎಂ

1983:ಕರ್ನಾಟಕಕ್ಕೂ ಇವಿಎಂ ಕಾಲಿಟ್ಟಿತು. ಬೆಂಗಳೂರಿನ ಶಾಂತಿನಗರ ಕ್ಷೇತ್ರದಲ್ಲಿ ಮೊದಲ ಬಾರಿಗೆ ಮತಯಂತ್ರ ಬಳಕೆಯಾಯಿತು. ಬಳಿಕ ಆಂಧ್ರ ಪ್ರದೇಶ, ಬಿಹಾರ, ನಾಗಾಲ್ಯಾಂಡ್, ತ್ರಿಪುರಾ, ಅರುಣಾಚಲ ಪ್ರದೇಶ, ದೆಹಲಿಯಲ್ಲೂ ಮತಯಂತ್ರದ ಬಳಕೆ ಆರಂಭವಾಯಿತು.

ಕೋರ್ಟ್ ತಡೆ

1984:ಇವಿಎಂಗೆ ಮೊದಲ ವಿಘ್ನ ಎದುರಾಯಿತು. ಇವುಗಳ ಬಳಕೆಗೆ ಕೋರ್ಟ್ ತಡೆ ನೀಡಿತು. ಪ್ರಜಾಪ್ರಾತಿನಿಧ್ಯ ಕಾಯ್ದೆಗೆ ತಿದ್ದುಪಡಿಯಾಗುವವರೆಗೆ ಇವಿಎಂ ಬಳಕೆ ಮಾಡುವಂತಿಲ್ಲ ಎಂದ ಸುಪ್ರೀಂ ಕೋರ್ಟ್, ಪರೂರ್ ಕ್ಷೇತ್ರದ ಫಲಿತಾಂಶವನ್ನು ತಡೆಹಿಡಿಯಿತು.

ತಿದ್ದುಪಡಿ

1988 :ಸುಪ್ರೀಂ ಕೋರ್ಟ್ ಆದೇಶದಂತೆ ಮತಯಂತ್ರಗಳನ್ನು ಚುನಾವಣೆಗಳಲ್ಲಿ ಬಳಸಿಕೊಳ್ಳಲು ಅನುವಾಗುವ ರೀತಿಯಲ್ಲಿ ಪ್ರಜಾಪ್ರಾತಿನಿಧ್ಯ ಕಾಯ್ದೆಗೆ ತಿದ್ದುಪಡಿ ತಂದು, 61ಎ ಸೆಕ್ಷನ್ ಸೇರ್ಪಡೆ ಮಾಡಲಾಯಿತು.

ಮತ್ತೆ ಜಾರಿ

2000:ತಿದ್ದುಪಡಿ ಬಳಿಕ ಮತಯಂತ್ರಗಳ ಬಳಕೆಗೆ ಇದ್ದ ಅಡ್ಡಿ ನಿವಾರಣೆಯಾಯಿತು. 3 ಲೋಕಸಭೆ ಹಾಗೂ 118 ವಿಧಾನಸಭಾ ಚುನಾವಣೆಗಳಲ್ಲಿ ಮತ್ತೆ ಮತಯಂತ್ರಗಳು ಸದ್ದು ಮಾಡಿದವು. ಇಲ್ಲಿಂದ ಬಹುತೇಕ ಎಲ್ಲ ಚುನಾವಣೆಗಳಲ್ಲೂ ಅವು ಬಳಕೆಯಾಗುತ್ತಾ ಬಂದವು.

ವಿವಿಪ್ಯಾಟ್

2009:ಬಿಜೆಪಿ ಚುನಾವಣೆಯಲ್ಲಿ ಸೋಲುಂಡಿತು. ಆ ಪಕ್ಷವು ಮತಯಂತ್ರಗಳ ಕಾರ್ಯದಕ್ಷತೆ ಬಗ್ಗೆ ಅನುಮಾನ ವ್ಯಕ್ತಪಡಿಸಿತು. ಹೀಗಾಗಿ ಮತ ದೃಢೀಕರಣ ಮಾಡುವ ವಿವಿಪ್ಯಾಟ್‌ಗಳನ್ನು (ಪೇಪರ್ ಟ್ರಯಲ್) ಪರಿಚಯಿಸಲಾಯಿತು.

ಸುಪ್ರೀಂ ಸೂಚನೆ

2013:ಸೆಪ್ಟೆಂಬರ್ 4ರಂದು ನಾಗಾಲ್ಯಾಡ್‌ನ ನೊಕ್‌ಸೆನ್ ಉಪಚುನಾವಣೆಯಲ್ಲಿ ವಿವಿಪ್ಯಾಟ್ ಬಳಕೆ ಆಯಿತು. ಹಂತಹಂತವಾಗಿ ವಿವಿಪ್ಯಾಟ್ ಬಳಕೆಗೆ ಸುಪ್ರೀಂ ಕೋರ್ಟ್ ಕೂಡಾ ಸೂಚನೆ ನೀಡಿತು.

–––––––––––

ಇವಿಎಂ ಬೇಕು–ಬೇಡಗಳ ನಡುವೆ..

ಇವಿಎಂ ಕಾರ್ಯನಿರ್ವಹಣೆ ಬಗ್ಗೆ ವಿರೋಧ ಪಕ್ಷಗಳು ಆಗಾಗ್ಗೆ ದನಿ ಎತ್ತಿವೆ.ಈ ಆರೋಪಗಳನ್ನು ನಿರಾಕರಿಸುತ್ತಾ ಬಂದಿರುವ ಚುನಾವಣಾ ಆಯೋಗ,ಮತಯಂತ್ರಗಳನ್ನುತಿರುಚಲು ಸಾಧ್ಯವಿಲ್ಲ ಎಂದು ವಾದಿಸುತ್ತಿದೆ. ಕನಿಷ್ಠ ಶೇ 50ರಷ್ಟು ವಿವಿಪ್ಯಾಟ್ ಮತಗಳ ಎಣಿಕೆ ಮಾಡುವಂತೆ ಕೋರಿ ವಿರೋಧ ಪಕ್ಷಗಳು ಸುಪ್ರೀಂ ಕೋರ್ಟ್ ಮೊರೆ ಹೋಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.