ನವದೆಹಲಿ: ಸಿಯಾಚಿನ್ ನೀರ್ಗಲ್ಲು ಪ್ರದೇಶದಲ್ಲಿರುವ ಸೇನಾ ಠಾಣೆ ಮೇಲೆ ಹಿಮ ಕುಸಿತವಾಗಿದ್ದು ಭಾರತದ ನಾಲ್ವರು ಯೋಧರು ಮತ್ತು ಇಬ್ಬರು ಸಹಾಯಕರು (ಪೋರ್ಟರ್) ಮೃತಪಟ್ಟಿದ್ದಾರೆ ಎಂದು ರಕ್ಷಣಾ ಇಲಾಖೆಯ ವಕ್ತಾರರು ಸೋಮವಾರ ತಿಳಿಸಿದ್ದಾರೆ.
ಸಿಯಾಚಿನ್ ನೀರ್ಗಲ್ಲು ಪ್ರದೇಶದ ಉತ್ತರಭಾಗದಲ್ಲಿ 19,000 ಅಡಿ ಎತ್ತರದಲ್ಲಿ ಮಧ್ಯಾಹ್ನ 3.30ರ ವೇಳೆಗೆ ಈ
ಘಟನೆ ಸಂಭವಿಸಿದ್ದು, ಹಿಮದಡಿ ಎಂಟು ಮಂದಿ ಸಿಲುಕಿದ್ದರು. ಸಮೀಪದ ಶಿಬಿರಗಳಲಿದ್ದ ಯೋಧರು ಮತ್ತು ನೀರ್ಗಲ್ಲು ಪ್ರದೇಶದ ಕಾರ್ಯಾಚರಣೆಯಲ್ಲಿ ತರಬೇತಿ ಪಡೆದಿರುವ ಸಿಬ್ಬಂದಿ ಇವರನ್ನು ಹಿಮದಡಿಯಿಂದ ಹೊರತೆಗೆದರು.
ತೀವ್ರವಾಗಿ ಗಾಯಗೊಂಡಿದ್ದ ಏಳು ಮಂದಿಯನ್ನು ಹೆಲಿಕಾಪ್ಟರ್ ಮೂಲಕ ಸಮೀಪದ ಮಿಲಿಟರಿ ಆಸ್ಪತ್ರೆಗೆ ಸಾಗಿಸಲಾಯಿತು. ಈ ಪೈಕಿ ಆರು ಮಂದಿ ಮೃತಪಟ್ಟರು. ಇಬ್ಬರು ಯೋಧರನ್ನು ರಕ್ಷಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಸಿಯಾಚಿನ್ ನೀರ್ಗಲ್ಲು ಪ್ರದೇಶ ಕಾರಕೋರಂ ಪರ್ವತ ಶ್ರೇಣಿಯಲ್ಲಿದೆ. ಸಮುದ್ರ ಮಟ್ಟದಿಂದ 20,000 ಅಡಿ ಎತ್ತರದ ಈ ಪ್ರದೇಶದಲ್ಲಿ –60 ಡಿಗ್ರಿ ಉಷ್ಣಾಂಶ ಇರುತ್ತದೆ. ಭಾರತ ಮತ್ತು ಪಾಕಿಸ್ತಾನ ಯೋಧರು ಗಡಿ ಕಾಯುತ್ತಿದ್ದಾರೆ.
ಇದನ್ನೂ ಓದಿ:ಸಿಯಾಚಿನ್ ಸೇನಾ ಕಾವಲಿಗೆ ನಿತ್ಯ ₹5 ಕೋಟಿ ಖರ್ಚು!
ವಿಶ್ವದ ಅತಿ ಎತ್ತರದ ಯುದ್ಧಭೂಮಿ ಎಂದೇ ಪರಿಗಣಿಸಲಾಗಿರುವ ಸಿಯಾಚಿನ್‌ನಲ್ಲಿ 1984ರಿಂದ ಈವರೆಗೆ ಭಾರತ ಮತ್ತು ಪಾಕಿಸ್ತಾನದ ಅನೇಕ ಯೋಧರನ್ನು ಹಿಮಪಾತ ಬಲಿತೆಗೆದುಕೊಂಡಿದೆ.
2016ರ ಫೆಬ್ರುವರಿಯಲ್ಲಿ ಸಂಭವಿಸಿದ್ದ ಹಿಮಪಾತದಲ್ಲಿ 10 ಜನ ಯೋಧರು ಮೃತಪಟ್ಟಿದ್ದರು.25 ಅಡಿ ಆಳದಲ್ಲಿ ಹಿಮದಡಿ ಸಿಲುಕಿದ್ದ ಕರ್ನಾಟಕದ ಯೋಧ ಹನುಮತಪ್ಪ ಕೊಪ್ಪದ ಅವರನ್ನು ಆರು ದಿನಗಳ ಕಾರ್ಯಾಚರಣೆ ಬಳಿಕ ಹೊರತೆಗೆಯಲಾಗಿತ್ತು. ಆದರೆ ಅವರು ಬಳಿಕ ಮೃತಪಟ್ಟಿದ್ದರು. ಘಟನೆಯಲ್ಲಿಮೈಸೂರಿನ ಎಚ್.ಡಿ. ಕೋಟೆಯ ಮಹೇಶ್, ಹಾಸನದ ಸುಬೇದಾರ್ ಟಿ.ಟಿ. ನಾಗೇಶ್ ಸಹ ಘಟನೆಯಲ್ಲಿ ಹುತಾತ್ಮರಾಗಿದ್ದರು.
ಇನ್ನಷ್ಟು...
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.