ಮುಂಬೈ:‘ಅವನಿ’ ಹುಲಿಗೆ ಅತ್ಯಂತ ತರಾತುರಿಯಲ್ಲಿ ಗುಂಡು ಹಾರಿಸಲಾಗಿದೆ. ಆ ಹುಲಿಯನ್ನು ಸೆರೆಹಿಡಿಯುವ ಕಾರ್ಯಾಚರಣೆಯಲ್ಲಿ ಸಾಮಾನ್ಯ ಕಾರ್ಯನಿರ್ವಹಣಾ ಪ್ರಕ್ರಿಯೆಗಳನ್ನು ಉಲ್ಲಂಘಿಸಲಾಗಿದೆ ಎಂದು ಪರಿಸರ ಮತ್ತು ಅರಣ್ಯ ಸಚಿವಾಲಯ ಹೇಳಿದೆ.
ಅವನಿ ಹುಲಿ ಹತ್ಯೆ ಪ್ರಕರಣದ ತನಿಖೆಗೆ ರಚಿಸಲಾಗಿದ್ದ ತಜ್ಞರ ತಂಡವು ನೀಡಿರುವ ವರದಿಯಲ್ಲಿ ಈ ಮಾಹಿತಿ ಇದೆ.
‘ಹುಲಿಯ ದೇಹ ಬಿದ್ದಿದ್ದ ಜಾಗ, ಅರಿವಳಿಕೆ ಚುಚ್ಚುಮದ್ದು ನಾಟಿಕೊಂಡಿದ್ದ ಭಾಗ ಮತ್ತು ಕೊನೆಯ ಕ್ಷಣಗಳಲ್ಲಿ ಹುಲಿಯ ಚಲನೆಯ ದಿಕ್ಕಿನ ವಿವರಗಳನ್ನು ಆಧಾರವಾಗಿಟ್ಟುಕೊಂಡು ಕಾರ್ಯಾಚರಣೆಯನ್ನು ಮರುಸೃಷ್ಟಿಸಲಾಯಿತು’ ಎಂದು ವರದಿ ಹೇಳಿದೆ.
‘ಗುಂಡಿಗೆ ಸಿಲುಕುವ ಮುನ್ನ ಹುಲಿಯು ರಸ್ತೆ ಮತ್ತು ವಾಹನಗಳಿಂದ ದೂರ ಸರಿಯುತ್ತಿತ್ತು. ಹುಲಿ ಚಲಿಸುತ್ತಿದ್ದ ದಿಕ್ಕಿನಲ್ಲೇ ಚುಚ್ಚುಮದ್ದು ಹಾರಿಸಲಾಗಿದೆ. ಇದು ಹುಲಿಯು ಹೊಂಚುಹಾಕಿರಲಿಲ್ಲ ಮತ್ತು ದಾಳಿಗೆ ಮುಂದಾಗಿರಲಿಲ್ಲ ಎಂಬುದನ್ನು ಸೂಚಿಸುತ್ತದೆ. ಅಲ್ಲದೆ ಆ ಸಂದರ್ಭದಲ್ಲಿ ಹುಲಿ ಅತ್ಯಂತ ಸಹಜವಾಗಿ ವರ್ತಿಸಿದೆ. ಅದನ್ನು ತಪ್ಪಾಗಿ ಅರ್ಥೈಸಿಕೊಂಡ ಅನನುಭವಿ ಅಸ್ಗರ್ ಅಲಿ ಖಾನ್ ಗುಂಡು ಹಾರಿಸಿದ್ದಾರೆ’ ಎಂದು ವರದಿಯಲ್ಲಿ ವಿವರಿಸಲಾಗಿದೆ.
‘ಅರಿವಳಿಕೆ ಚುಚ್ಚುಮದ್ದು ತಗುಲಿದ 3–5 ಕ್ಷಣಗಳಲ್ಲೇ ಗುಂಡು ಹುಲಿಯ ದೇಹವನ್ನು ಹೊಕ್ಕಿದೆ. ಚುಚ್ಚುಮದ್ದು ಹುಲಿಯ ಮೇಲೆ ಪರಿಣಾಮ ಬೀರಿದೆಯೇ ಎಂಬುದನ್ನು ತಿಳಿದುಕೊಳ್ಳುವ ವ್ಯವಧಾನವೂ ಇಲ್ಲದೆ ಗುಂಡು ಹಾರಿಸಲಾಗಿದೆ. ಇದು ಸಾಮಾನ್ಯ ಕಾರ್ಯನಿರ್ವಹಣಾ ಪ್ರಕ್ರಿಯೆಯ ಉಲ್ಲಂಘನೆ’ ಎಂದು ಹೇಳಲಾಗಿದೆ.
‘ಅಸ್ಗರ್ ಅಲಿ ಖಾನ್ ಅವರು ಬಳಸಿದ್ದ ಬಂದೂಕಿನ ಪರವಾನಗಿ ಇರುವುದು ಅವರ ತಂದೆ ಶಫತ್ ಅಲಿ ಖಾನ್ ಅವರ ಹೆಸರಿನಲ್ಲಿ. ಕಾರ್ಯಾಚರಣೆ ತಂಡದಲ್ಲಿ ಶಫತ್ ಅವರು ಇರಲಿಲ್ಲ. ತಮ್ಮ ಅನುಪಸ್ಥಿತಿಯಲ್ಲಿ ತಮ್ಮ ಬಂದೂಕನ್ನು ಬಳಸಲು ಅವರು ಅಸ್ಗರ್ ಅವರಿಗೆ ಅನುಮತಿ ಪತ್ರವನ್ನೂ ನೀಡಿರಲಿಲ್ಲ. ಈ ಪ್ರಕಾರ ಅಸ್ಗರ್ ಅವರು ಅನಧಿಕೃತ ಬಂದೂಕು ಬಳಸಿ ಹುಲಿಗೆ ಗುಂಡು ಹಾರಿಸಿದ್ದಾರೆ’ ಎಂದು ವರದಿಯಲ್ಲಿ ವಿವರಿಸಲಾಗಿದೆ.
‘ಹುಲಿಯನ್ನು ಜೀವಂತವಾಗಿ ಸೆರೆಹಿಡಿಯಲು ಅರಣ್ಯ ಇಲಾಖೆ ಹರಸಾಹಸಪಟ್ಟಿದೆ. ಆದರೆ ತರಬೇತಿ ಇಲ್ಲದ ಸಿಬ್ಬಂದಿಯನ್ನು ಬಳಸಿಕೊಂಡು ಅವೈಜ್ಞಾನಿಕ ವಿಧಾನಗಳನ್ನು ಅನುಸರಿಸಿ ಕಾರ್ಯಾಚರಣೆ ನಡೆಸಿದ್ದರಿಂದಲೇ ಹುಲಿಯನ್ನು ಹಿಡಿಯಲು ಒಂದು ವರ್ಷ ಒದ್ದಾಡಬೇಕಾಯಿತು. ಕೊನೆಗೆ ಹುಲಿಯನ್ನು ಕೊಂದು ಕಾರ್ಯಾಚರಣೆಯನ್ನು ಮುಗಿಸಲಾಗಿದೆ’ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.