ADVERTISEMENT

ರಷ್ಯಾದ ಸೇನೆಯಿಂದ 69 ಭಾರತೀಯರ ಬಿಡುಗಡೆಗೆ ಕಾಯಲಾಗುತ್ತಿದೆ: ಜೈಶಂಕರ್

ಪಿಟಿಐ
Published 9 ಆಗಸ್ಟ್ 2024, 7:40 IST
Last Updated 9 ಆಗಸ್ಟ್ 2024, 7:40 IST
ಜೈಶಂಕರ್
ಜೈಶಂಕರ್   

ನವದೆಹಲಿ: ರಷ್ಯಾ ಸೇನೆಯಲ್ಲಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ 69 ಮಂದಿ ಭಾರತೀಯರ ಬಿಡುಗಡೆಗೆ ಕೇಂದ್ರ ಸರ್ಕಾರ ಎದುರುನೋಡುತ್ತಿದೆ ಎಂದು ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ ಶುಕ್ರವಾರ ಹೇಳಿದ್ದಾರೆ.

ಲೋಕಸಭೆಯಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ಈ ಬಗ್ಗೆ ಮಾತನಾಡಿದ ಅವರು, ಹಲವು ಪ್ರಕರಣಗಳಲ್ಲಿ ಭಾರತದ ಯುವಕರಿಗೆ ಕೆಲಸದ ಆಮಿಷವೊಡ್ಡಿ ರಷ್ಯಾ ಸೇನೆಗೆ ವಾಮಮಾರ್ಗದಲ್ಲಿ ಸೇರಿಸಲಾಗಿದೆ ಎಂದು ಆಪಾದಿಸಿದ್ದಾರೆ. ರಷ್ಯಾ ಸೇನೆಗೆ ಭಾರತೀಯರ ನೇಮಕ ಹಾಗೂ ಸೈಬರ್‌ ಅಪರಾಧಗಳ ಮೂಲಕ ಆಗ್ನೇಯ ಏಷ್ಯಾ ರಾಷ್ಟ್ರಗಳಿಗೆ ಮಾನವ ಕಳ್ಳಸಾಗಣೆ ಮಾಡುತ್ತಿರುವ ವಿಚಾರಗಳನ್ನು ಕೇಂದ್ರ ಸರ್ಕಾರವು ಗಂಭೀರವಾಗಿ ಪರಿಗಣಿಸಿದೆ ಎಂದು ಹೇಳಿದ್ದಾರೆ.

‘ಈವರೆಗೆ ಭಾರತದ 91 ಮಂದಿ ರಷ್ಯಾ ಸೇನೆಗೆ ಸೇರಿದ್ದಾರೆ. ಅವರಲ್ಲಿ 8 ಮಂದಿ ಮೃತಪಟ್ಟಿದ್ದು, 14 ಮಂದಿಯನ್ನು ವಾಪಸು ಕಳುಹಿಸಲಾಗಿದೆ. ಉಳಿದ 69 ಮಂದಿಯ ಬಿಡುಗಡೆಗೆ ಎದುರುನೋಡುತ್ತಿದ್ದು, ಈ ಸಂಬಂಧ ರಷ್ಯಾದ ವಿದೇಶಾಂಗ ಸಚಿವರೊಂದಿಗೆ ಹಲವು ಬಾರಿ ಚರ್ಚಿಸಿದ್ದೇನೆ. ಪ್ರಧಾನಿ ಮೋದಿ ರಷ್ಯಾಗೆ ಕಳೆದ ತಿಂಗಳು ಭೇಟಿ ನೀಡಿದ್ದಾಗಲೂ ಈ ವಿಷಯವನ್ನು ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್ ಅವರ ಗಮನಕ್ಕೆ ತಂದಿದ್ದಾರೆ’ ಎಂದರು.

ADVERTISEMENT

ಭಾರತೀಯರು ರಷ್ಯಾ ಸೇನೆಗೆ ಸೇರುವಾಗ ಒಪ್ಪಂದಪತ್ರಕ್ಕೆ ಸಹಿ ಹಾಕಿದ್ದಾರೆ. ರಷ್ಯಾದ ಅಧಿಕಾರಿಗಳು ಈ ವಿಚಾರವನ್ನು ಮುಂದಿಟ್ಟುಕೊಂಡು ಸಮರ್ಥಿಸಿಕೊಳ್ಳುತ್ತಿರುವುದರಿಂದ, ಸೇನೆಗೆ ಸೇರಿರುವ ಭಾರತೀಯರನ್ನು ಮರಳಿ ಕರೆತರುವುದು ವಿಳಂಬವಾಗುತ್ತಿದೆ ಎಂದು ಜೈಶಂಕರ್‌ ಹೇಳಿದ್ದಾರೆ.

ತಮ್ಮ ಸೇನೆಗೆ ಸೇರಿರುವ ‍ಪ್ರತಿಯೊಬ್ಬ ಭಾರತೀಯನನ್ನು ಸೇನೆಯಿಂದ ಬಿಡುಗಡೆಗೊಳಿಸುವುದಾಗಿ ರಷ್ಯಾದ ಅಧ್ಯಕ್ಷ ಪುಟಿನ್‌ ಅವರು ಪ್ರಧಾನಿ ಮೋದಿಗೆ ಖಚಿತ ಭರವಸೆ ನೀಡಿದ್ದಾರೆ ಎಂದು ಸಚಿವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.