ADVERTISEMENT

‘ಡಿಜಿಟಲ್ ಅರೆಸ್ಟ್‌’ನಂತಹ ಸೈಬರ್ ಅಪರಾಧಗಳಿಂದ ರಕ್ಷಣೆಗೆ ಜಾಗೃತಿ ಅಗತ್ಯ: ಮೋದಿ

ಪಿಟಿಐ
Published 27 ಅಕ್ಟೋಬರ್ 2024, 9:30 IST
Last Updated 27 ಅಕ್ಟೋಬರ್ 2024, 9:30 IST
ನರೇಂದ್ರ ಮೋದಿ
ನರೇಂದ್ರ ಮೋದಿ   

ನವದೆಹಲಿ: ‘ಡಿಜಿಟಲ್ ಅರೆಸ್ಟ್‌’ನಂತಹ ಸೈಬರ್ ಅಪರಾಧದ ಬಗ್ಗೆ ಮನ್ ಕಿ ಬಾತ್‌ನಲ್ಲಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, ಇದು ಈಗ ಸಮಾಜದ ಎಲ್ಲ ವಲಯಗಳನ್ನು ಆವರಿಸಿದೆ. ಅದನ್ನು ತಡೆಯಲು ಆ ಬಗ್ಗೆ ಯೋಚಿಸುವ ಮತ್ತು ಕಾರ್ಯಪ್ರವೃತ್ತರಾಗುವ ಮಂತ್ರವನ್ನು ಜನ ಅಳವಡಿಸಿಕೊಳ್ಳಬೇಕು ಎಂದಿದ್ದಾರೆ.

ಡಿಜಿಟಲ್ ಅರೆಸ್ಟ್‌ನಂತಹ ಸೈಬರ್ ಅಪರಾಧಗಳ ತಡೆಗೆ ತನಿಖಾ ಸಂಸ್ಥೆಗಳು ರಾಜ್ಯಗಳ ಜೊತೆಗೂಡಿ ಕೆಲಸ ಮಾಡುತ್ತಿವೆ. ಈ ಅಪರಾಧಗಳಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಜನರಲ್ಲಿ ಜಾಗೃತಿ ಮೂಡಿಸುವುದು ಅತ್ಯಂತ ಪ್ರಮುಖ ಎಂದಿದ್ದಾರೆ.

ವ್ಯಕ್ತಿಗಳ ಕುರಿತಾದ ಎಲ್ಲ ಮಾಹಿತಿ ಸಂಗ್ರಹಿಸಿದ ಬಳಿಕ ತನಿಖಾ ಸಂಸ್ಥೆಗಳ ಸೋಗಿನಲ್ಲಿ ಕ್ರಿಮಿನಲ್‌ಗಳು ಹೇಗೆ ವಂಚನೆ ಮಾಡುತ್ತಾರೆ ಎಂಬ ಕುರಿತಾದ ವಿವರವಾದ ವಿಡಿಯೊವನ್ನು ಮೋದಿ ಹಂಚಿಕೊಂಡಿದ್ದಾರೆ.

ADVERTISEMENT

‘ಡಿಜಿಟಲ್ ಅರೆಸ್ಟ್ ವಂಚನೆಗಳ ಬಗ್ಗೆ ಜಾಗರೂಕರಾಗಿರಿ. ಯಾವುದೇ ತನಿಖಾ ಸಂಸ್ಥೆಗಳು ನಿಮ್ಮನ್ನು ವಿಚಾರಣೆಗೆ ಒಳಪಡಿಸಲು ದೂರವಾಣಿ ಕರೆ ಅಥವಾ ವಿಡಿಯೊ ಕರೆ ಮಾಡುವುದಿಲ್ಲ’ಎಂದು ಹೇಳಿದ್ದಾರೆ.

ಅಂತಹ ಅಪರಾಧಗಳ ಸೂಚನೆ ಸಿಕ್ಕರೆ ರಾಷ್ಟ್ರೀಯ ಸೈಬರ್ ಅಪರಾಧಗಳ ಹೆಲ್ಪ್‌ಲೈನ್‌ 1930ಗೆ ಕರೆ ಮಾಡಿ. ಅಥವಾ ಜಾಲತಾಣದಲ್ಲಿ ಮಾಹಿತಿ ಹಂಚಿಕೊಳ್ಳಿ, ಪೊಲೀಸರಿಗೂ ದೂರು ನೀಡಿ ಎಂದಿದ್ದಾರೆ. ಅಲ್ಲದೆ, ಅಂತಹ ಕರೆಗಳ ಕುರಿತಾದ ಸಂಭಾಷಣೆಯನ್ನು ರೆಕಾರ್ಡ್ ಮಾಡಿಕೊಳ್ಳಬೇಕು ಮತ್ತು ಸ್ಕ್ರೀನ್‌ಶಾಟ್ ತೆಗೆದುಕೊಳ್ಳಬೇಕು ಎಂದಿದ್ದಾರೆ.

ಇದೇವೇಳೆ, ಆ್ಯನಿಮೇಶನ್ ಕ್ಷೇತ್ರದಲ್ಲಿ ದೇಶದ ಯುವಕರ ಪಾತ್ರವನ್ನು ಮೋದಿ ಕೊಂಡಾಡಿದ್ದಾರೆ. ಸೃಜನಶೀಲ ಶಕ್ತಿಯ ಅಲೆಯು ಭಾರತವನ್ನು ಆವರಿಸುತ್ತಿದೆ ಎಂದ ಅವರು, ಆ್ಯನಿಮೇಶನ್ ಜಗತ್ತಿನಲ್ಲಿ 'ಮೇಡ್ ಇನ್ ಇಂಡಿಯಾ' ಮತ್ತು 'ಮೇಡ್ ಬೈ ಇಂಡಿಯಾ' ಪ್ರಕಾಶಮಾನವಾಗಿ ಮಿಂಚುತ್ತಿದೆ ಎಂದು ಒತ್ತಿ ಹೇಳಿದರು.

ಛೋಟಾ ಭೀಮ್, ಕೃಷ್ಣ ಮತ್ತು ಮೋಟು ಪಟ್ಲು ಮುಂತಾದ ಭಾರತೀಯ ಆ್ಯನಿಮೇಶನ್ ಪಾತ್ರಗಳು ವ್ಯಾಪಕವಾಗಿ ಜನಪ್ರಿಯವಾಗಿವೆ ಎಂದು ಪ್ರಧಾನಿ ಹೇಳಿದರು. ಭಾರತದ ಕಂಟೆಂಟ್ ಮತ್ತು ಸೃಜನಶೀಲತೆಯನ್ನು ಜಗತ್ತಿನಾದ್ಯಂತ ಇಷ್ಟಪಡಲಾಗುತ್ತಿದೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.