ಅಯೋಧ್ಯೆ: ರಾಮನ ಊರಿನ ಎಲ್ಲ ಬೀದಿಗಳು, ಗಲ್ಲಿಗಳು ಹೂವುಗಳಿಂದ ಅಲಂಕೃತಗೊಂಡಿವೆ. ಬಿಲ್ಲು–ಬಾಣ ಹಿಡಿದಿರುವ ರಾಮನ ಚಿತ್ರವನ್ನು, ರಾಮಚರಿತಮಾನಸದ ಸಾಲುಗಳನ್ನು ನಗರದ ಗೋಡೆಗಳ ಮೇಲೆ ಬರೆಯಲಾಗಿದೆ. ರಾಮಚರಿತಮಾನಸದ ಸಾಲುಗಳ ಪಠಣವು ಇಲ್ಲಿನ ಅಂಗಡಿಗಳು, ದೇವಸ್ಥಾನಗಳು ಹಾಗೂ ಮನೆಗಳಿಗೆ ಅಳವಡಿಸಲಾಗಿರುವ ಧ್ವನಿವರ್ಧಕಗಳಿಂದ ಕೇಳಿಸುತ್ತಿದೆ. ಸೋಮವಾರ ನಡೆಯಲಿರುವ ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಅಯೋಧ್ಯೆಯು ಸಡಗರದಿಂದ ಸಜ್ಜಾಗಿದೆ. ಸಂಭ್ರಮ ಮನೆ ಮಾಡಿದೆ.
ಪ್ರಧಾನಿ ನರೇಂದ್ರ ಮೋದಿ, ಸಾಧುಸಂತರು, ಪ್ರಮುಖ ಕೈಗಾರಿಕೋದ್ಯಮಿಗಳು, ಬಾಲಿವುಡ್ ತಾರೆಯರು ಸೇರಿದಂತೆ ಸರಿಸುಮಾರು ಎಂಟು ಸಾವಿರ ಮಂದಿ ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
ಇಡೀ ಅಯೋಧ್ಯೆಯು ರಾಮ ಭಕ್ತಿಯಲ್ಲಿ ಮುಳುಗಿರುವಂತೆ ಕಾಣುತ್ತಿದೆ. ದೇಶದ ವಿವಿಧೆಡೆಗಳಿಂದ ಬಂದಿರುವ ಸಾಧುಗಳು ಹಾಗೂ ಭಕ್ತರು ಭಜನೆ ಹಾಡುತ್ತ, ತುಳಸೀದಾಸರು ಬರೆದ ರಾಮಚರಿತಮಾನಸದ ಸಾಲುಗಳನ್ನು ಹೇಳುತ್ತ ನರ್ತಿಸುತ್ತಿರುವ ದೃಶ್ಯ ಇಲ್ಲಿನ ಬೀದಿಗಳಲ್ಲಿ ಕಾಣಿಸುತ್ತಿದೆ.
‘ಮಂಗಲ ಭವನ ಅಮಂಗಲ ಹಾರಿ, ದ್ರವಹು ಸುದಸರಥ ಅಜಿರ ವಿಹಾರಿ’ (ನನಗೆ ಯಾವ ಕೆಡುಕೂ ಆಗದಂತೆ ಶ್ರೀರಾಮ ಮಾತ್ರ ನೋಡಿಕೊಳ್ಳಬಲ್ಲ... ಅವನ ಆಶೀರ್ವಾದ ಕೋರಿ ಪ್ರಾರ್ಥಿಸುತ್ತೇನೆ) ಎಂದು ನೆರೆಯ ಅಂಬೇಡ್ಕರ್ ನಗರ ಜಿಲ್ಲೆಯ ಹರೇಂದ್ರ ಮಿಶ್ರಾ ಹೇಳುತ್ತಾರೆ. ಇಲ್ಲಿ ರಾಮ ಭಕ್ತರು ಶ್ರೀರಾಮನ ಸ್ಮರಣೆಯಲ್ಲಿ ಅದೆಷ್ಟು ಮಗ್ನರಾಗಿದ್ದಾರೆಂದರೆ, ತಮ್ಮನ್ನು ಉದ್ದೇಶಿಸಿ ಕೇಳಿದ ಪ್ರಶ್ನೆಗೆ ಈ ದ್ವಿಪದಿಯನ್ನು ಉಲ್ಲೇಖಿಸಿ ಉತ್ತರಿಸಿದ್ದಾರೆ.
ಅಯೋಧ್ಯೆಯ ಹಲವು ಕಡೆಗಳಲ್ಲಿ ಸ್ವಾಗತ ಕಮಾನುಗಳನ್ನು ಅಳವಡಿಸಲಾಗಿದೆ. ಇವು ‘ಜೈ ಸಿಯಾ ರಾಮ್’ ಬರಹದೊಂದಿಗೆ ಜನರನ್ನು ಸ್ವಾಗತಿಸುತ್ತಿವೆ. ‘ಜೈಶ್ರೀರಾಮ್’ ಘೋಷಣೆಯು ಎಲ್ಲೆಡೆ ಕೇಳಿಸುತ್ತಿದೆ. ಅಲ್ಲಲ್ಲಿ ಬೇರೆ ಬೇರೆ ಬಣ್ಣಗಳನ್ನು ಬಳಸಿ ರಂಗೋಲಿ ಬರೆಯಲಾಗಿದೆ. ಇಲ್ಲಿನ ಮನೆಗಳು, ದೇವಸ್ಥಾನಗಳು ಹಾಗೂ ಮಠಗಳ ಮೇಲೆ ಬಣ್ಣಬಣ್ಣದ ದೀಪಗಳನ್ನು ಅಳವಡಿಸಲಾಗಿದ್ದು, ಇಲ್ಲಿ ಈಗ ದೀಪಾವಳಿ ಆಚರಣೆ ನಡೆದಿದೆಯೇನೋ ಅನಿಸುವಂತಿದೆ.
ನಂಬಿಕೆಗಳ ಪ್ರಕಾರ, ವನವಾಸ ಮುಗಿಸಿದ ಶ್ರೀರಾಮ ಅಯೋಧ್ಯೆಗೆ ಮರಳುವ ಸಂದರ್ಭದಲ್ಲಿ ಇಲ್ಲಿನ ಜನ ಹಣತೆಗಳನ್ನು ಹಚ್ಚಿದ್ದರಂತೆ. ಆ ದಿನವನ್ನು ದೀಪಾವಳಿಯಾಗಿ ಆಚರಿಸಲಾಗುತ್ತದೆ. ‘ವನವಾಸವನ್ನು ಪೂರ್ಣಗೊಳಿಸಿದ ಶ್ರೀರಾಮನು ಸೀತಾ ಮಾತೆ ಹಾಗೂ ಸಹೋದರ ಲಕ್ಷ್ಮಣನೊಂದಿಗೆ ಅಯೋಧ್ಯೆಗೆ ಮರಳಿಬರುತ್ತಿದ್ದಾನೆ ಅನಿಸುವಂತಿದೆ... ಇಲ್ಲಿನ ಜನ ಆಗ ಶ್ರೀರಾಮನನ್ನು ಇದೇ ಬಗೆಯಲ್ಲಿ ಸ್ವಾಗತಿಸಿರಬೇಕು... ಇದನ್ನು ನಾವು ರಾಮಾಯಣದಲ್ಲಿ ಓದಿ ತಿಳಿದಿದ್ದೆವು... ಈಗ ನಾವು ಅದನ್ನು ಅನುಭವಿಸಿ ನೋಡಬಹುದು’ ಎಂದು ಸೂರಜ್ ದಾಸ್ ಎನ್ನುವ ಸಾಧು ಹೇಳಿದರು.
ಶ್ರೀರಾಮನು ಅಯೋಧ್ಯೆಗೆ ಮರಳಿದ ಸಂದರ್ಭದಲ್ಲಿ ಅಲ್ಲಿನ ಜನ ಹೇಗೆ ಸ್ವಾಗತಿಸಿದ್ದರು ಎಂಬುದನ್ನು ರಾಮಚರಿತಮಾನಸದಲ್ಲಿ ಹೇಳಿರುವಂತೆ ‘ಚಿನ್ನದ ಕಳಶಗಳಿಗೆ ಅಲಂಕಾರ ಮಾಡಿ ಜನರು ಅವುಗಳನ್ನು ತಮ್ಮ ಮನೆಗಳ ಬಾಗಿಲ ಬಳಿ ಇರಿಸಿದ್ದರು. ಮನೆಗಳ ಗೋಡೆಯ ಮೇಲೆ ಬಣ್ಣ ಬಣ್ಣ ಧ್ವಜ ಹಾಗೂ ಆಲಂಕಾರಿಕ ಚಿತ್ರಗಳನ್ನು ಅಳವಡಿಸಿದ್ದರು’ ಎಂದು ಅವರು ವಿವರಿಸಿದರು.
ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಕಾರ್ಯ ನಡೆಯಲಿರುವ ರಾಮಜನ್ಮಭೂಮಿ ಸಂಕೀರ್ಣದಲ್ಲಿ ಭಾನುವಾರ ಅಂತಿಮ ಹಂತದ ಕೆಲವು ಕೆಲಸಗಳು ನಡೆದಿದ್ದವು. ಪ್ರಾಣ ಪ್ರತಿಷ್ಠಾಪನೆಗೂ ಮೊದಲಿನ ಧಾರ್ಮಿಕ ವಿಧಿ ವಿಧಾನಗಳು ಭಾನುವಾರ ಕೊನೆಗೊಂಡವು. ಬಾಲರಾಮನ ಸಿಂಹಾಸನವನ್ನು 114 ಕಳಶಗಳಲ್ಲಿ ಇದ್ದ ಪವಿತ್ರ ನೀರಿನಿಂದ ಶುದ್ಧೀಕರಿಸಲಾಯಿತು. ಗಂಗೆ, ಸರಯೂ ಸೇರಿದಂತೆ ದೇಶದ ವಿವಿಧ ಪವಿತ್ರ ನದಿಗಳಿಂದ ಈ ನೀರನ್ನು ತರಲಾಗಿತ್ತು.
ನಿತ್ಯಪೂಜೆ, ಹವನ, ಪರಿಕ್ರಮ, ಔಷಧೀಯ ಮಹತ್ವದ ಸಸ್ಯಗಳನ್ನು ಇರಿಸಿದ್ದ ನೀರಿನಿಂದ ವಿಗ್ರಹವನ್ನು ಶುಚಿಗೊಳಿಸುವ ಕೆಲಸ ಭಾನುವಾರ ನಡೆದಿದೆ ಎಂದು ಅರ್ಚಕರು ತಿಳಿಸಿದರು.
ಶೈವ, ವೈಷ್ಣವ, ಗಾಣಪತ್ಯ, ಸಿಖ್, ಬೌದ್ಧ, ಜೈನ, ರಾಮನಂದಿ, ರಾಮಾನುಜ, ನಿಂಬಾರ್ಕ, ಗರೀಬದಾಸಿ, ಕಬೀರಪಂಥಿ, ಶಂಕರದೇವ ಹಾಗೂ ಇತರ ಪಂಥಗಳ ಪ್ರತಿನಿಧಿಗಳು ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ.
ಕೋಮುಸೌಹಾರ್ದ ಹಾಗೂ ಭ್ರಾತೃತ್ವ ಕಾಪಾಡಲು ಎಲ್ಲರೂ ತಮ್ಮದೇ ಆದ ಬಗೆಯಲ್ಲಿ ಪ್ರಾರ್ಥನೆ ಸಲ್ಲಿಸಬೇಕು. ಎಲ್ಲ ಮತಧರ್ಮಗಳ ಜನರೂ ಪ್ರಾಣ ಪ್ರತಿಷ್ಠಾಪನೆಯಲ್ಲಿ ಭಾಗಿಯಾಗಬೇಕು.–ಹಿಮಂತ ಬಿಸ್ವ ಶರ್ಮ, ಅಸ್ಸಾಂ ಮುಖ್ಯಮಂತ್ರಿ
ಇಂದಿನ ಕಾರ್ಯಕ್ರಮಗಳು
ಪ್ರಾಣ ಪ್ರತಿಷ್ಠಾಪನೆಯ ಶುಭ ಮುಹೂರ್ತ ಇರುವುದು 84 ಸೆಕೆಂಡುಗಳಷ್ಟು ಮಾತ್ರ. ಅದು 12 ಗಂಟೆ 29 ನಿಮಿಷ 8 ಸೆಕೆಂಡುಗಳಿಂದ 12 ಗಂಟೆ 30 ನಿಮಿಷ 32 ಸೆಕೆಂಡುಗಳವರೆಗೆ ಇರಲಿದೆ
ಪ್ರಾಣ ಪ್ರತಿಷ್ಠಾಪನೆಗೆ ಸಂಬಂಧಿಸಿದ ಕಾರ್ಯಕ್ರಮವು 12.20ರಿಂದ 12.45ರವರೆಗೆ ನಡೆಯಲಿದೆ.
ಮಹಾವಿಷ್ಣುವಿನ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಶುರುವಾಗಲಿದೆ
ಪುರೋಹಿತರು ಮಂತ್ರಗಳ ಮೂಲಕ ಶ್ರೀರಾಮನನ್ನು ಆವಾಹನೆ ಮಾಡುತ್ತಾರೆ
ಗರ್ಭಗೃಹದಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನೆಗೆ ಸಂಬಂಧಿಸಿದ ವಿಧಿವಿಧಾನಗಳು ನಡೆಯುತ್ತವೆ
ಧಾರ್ಮಿಕ ವಿಧಿವಿಧಾನಗಳನ್ನು 121 ಮಂದಿ ವೈದಿಕ ವಿದ್ವಾಂಸರು, ಆಚಾರ್ಯ ಗಣೇಶ್ವರ ದ್ರಾವಿಡ್ ಮತ್ತು ಆಚಾರ್ಯ ಲಕ್ಷ್ಮೀಕಾಂತ ದ್ವಿವೇದಿ ಮಾರ್ಗದರ್ಶನದಲ್ಲಿ ನಡೆಸಲಿದ್ದಾರೆ
ಪ್ರಾಣ ಪ್ರತಿಷ್ಠಾಪನೆಯ ನಂತರದಲ್ಲಿ, ಅಯೋಧ್ಯೆಯಲ್ಲಿ ಸೋಮವಾರ ಸಂಜೆ ದೀಪೋತ್ಸವ ನಡೆಯಲಿದೆ. ಒಟ್ಟು ಹತ್ತು ಲಕ್ಷ ಹಣತೆಗಳನ್ನು ಬೆಳಗಿಸಲಾಗುತ್ತದೆ
ರಾಮಮಂದಿರ: ಹೋರಾಟದ ಹಾದಿ
ರಾಜಕೀಯ ಹೋರಾಟ
1981: ತಮಿಳುನಾಡಿನ ಮೀನಾಕ್ಷಿಪುರಂ ಎಂಬ ಹಳ್ಳಿಯಲ್ಲಿ ಹಲವು ಮಂದಿ ಸಾಮೂಹಿಕವಾಗಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡ ಘಟನೆ ನಡೆಯಿತು. ಅದರ ಬೆನ್ನಲ್ಲೇ ಆಗಿನ ಆರ್‌ಎಸ್‌ಎಸ್ ಮುಖ್ಯಸ್ಥ ಬಾಳಾಸಾಹೇಬ ದೇವರಸ್ ಅವರು ಅಯೋಧ್ಯೆಯಲ್ಲಿ ದೇವಾಲಯ ನಿರ್ಮಾಣಕ್ಕೆ ಬೆಂಬಲ ಗಿಟ್ಟಿಸಲು ಅಶೋಕ್ ಸಿಂಘಾಲ್ ಒಳಗೊಂಡಂತೆ ‘ಪ್ರಚಾರಕ’ನ್ನು ನಿಯೋಜಿಸಿದರು
1983: ಅಯೋಧ್ಯೆ, ಮಥುರಾ ಮತ್ತು ಕಾಶಿಯನ್ನು ಮರಳಿ ಪಡೆಯುವಂತೆ ಕರೆಕೊಟ್ಟ ಕಾಂಗ್ರೆಸ್ ನಾಯಕ ದಾವು ದಯಾಳ್ ಖನ್ನಾ
1984: ವಿಶ್ವ ಹಿಂದೂ ಪರಿಷತ್‌ನಿಂದ (ವಿಎಚ್‌ಪಿ) ದೆಹಲಿಯ ವಿಜ್ಞಾನ ಭವನದಲ್ಲಿ ಧರ್ಮ ಸಂಸತ್ತು ಆಯೋಜನೆ
1985: ರಾಮ ಮಂದಿರ ನಿರ್ಮಾಣಕ್ಕೆ ಜನ ಬೆಂಬಲ ಒಗ್ಗೂಡಿಸಲು 1985ರ ಅಕ್ಟೋಬರ್‌ನಲ್ಲಿ ವಿಎಚ್‌ಪಿಯಿಂದ ರಾಮ ರಥ ಯಾತ್ರೆ ಆರಂಭ
1986: ರಾಮಜನ್ಮಭೂಮಿ ಸ್ಥಳ ಮತ್ತು ಪಕ್ಕದ ಜಾಗವನ್ನು ಹಸ್ತಾಂತರಿಸುವಂತೆ ಆರ್‌ಎಸ್‌ಎಸ್ ರಾಷ್ಟ್ರೀಯ ಕಾರ್ಯಕಾರಿಣಿಯಿಂದ ಕೇಂದ್ರ ಸರ್ಕಾರದ ಮೇಲೆ ಒತ್ತಡ
1989, ನವೆಂಬರ್ 9: ರಾಮಮಂದಿರ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದ ಬಿಹಾರದ ಕಾಮೇಶ್ವರ್ ಚೌಪಾಲ್
1990: ಅಯೋಧ್ಯೆಯಲ್ಲಿ ವಿಎಚ್‌ಪಿಯಿಂದ ಕರಸೇವೆ ಆಯೋಜನೆ
1990 ಸೆಪ್ಟೆಂಬರ್: ಸೋಮನಾಥದಿಂದ ಅಯೋಧ್ಯೆಗೆ ರಾಮ ರಥ ಯಾತ್ರೆ ಕೈಗೊಂಡ ಎಲ್.ಕೆ.ಅಡ್ವಾಣಿ
1990 ಅಕ್ಟೋಬರ್: ಬಿಹಾರದ ಲಾಲು ಯಾದವ್ ಸರ್ಕಾರದಿಂದ ಸಮಷ್ಟಿಪುರದಲ್ಲಿ ಅಡ್ವಾಣಿ ಅವರ ಬಂಧನ. ವಿ.ಪಿ.ಸಿಂಗ್ ನೇತೃತ್ವದ ಕೇಂದ್ರ ಸರ್ಕಾರಕ್ಕೆ ನೀಡಿದ್ದ ಬೆಂಬಲ ವಾಪಸ್ ಪಡೆದ ಬಿಜೆಪಿ
1990 ಅಕ್ಟೋಬರ್: ಅಯೋಧ್ಯೆಗೆ ಕರಸೇವಕರ ಪ್ರವೇಶ, ಉತ್ತರ ಪ್ರದೇಶ ಪೊಲೀಸರಿಂದ ಗೋಲಿಬಾರ್
1992 ಡಿಸೆಂಬರ್ 6: ಕರಸೇವಕರಿಂದ ಬಾಬರಿ ಮಸೀದಿ ಧ್ವಂಸ. ಮಸೀದಿಯಿದ್ದ ಜಾಗದಲ್ಲಿ ತಾತ್ಕಾಲಿಕ ದೇವಾಲಯ ನಿರ್ಮಾಣ. ಬಿಜೆಪಿ ಆಡಳಿತವಿದ್ದ ಉತ್ತರ ಪ್ರದೇಶ, ಮಧ್ಯ ಪ್ರದೇಶ, ಹಿಮಾಚಲ ಪ್ರದೇಶ ಮತ್ತು ರಾಜಸ್ಥಾನ ಸರ್ಕಾರಗಳ ವಜಾ
1998: ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ. ರಾಮ ಮಂದಿರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸರ್ಕಾರದ ಮೇಲೆ ವಿಎಚ್‌ಪಿಯಿಂದ ಹೆಚ್ಚಿದ ಒತ್ತಡ
2002: ವಿಎಚ್‌ಪಿಯಿಂದ ಅಯೋಧ್ಯೆಯಲ್ಲಿ ‘ಶಿಲಾದಾನ’ ಕಾರ್ಯಕ್ರಮ ಆಯೋಜನೆ
2004 ಮೇ: ಕೇಂದ್ರದಲ್ಲಿ ಅಧಿಕಾರ ಕಳೆದುಕೊಂಡ ಅಟಲ್ ಬಿಹಾರಿ ವಾಜಪೇಯಿ ಸರ್ಕಾರ
2020 ಆಗಸ್ಟ್ 5: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರಿಂದ ಭೂಮಿ ಪೂಜೆ
ಕಾನೂನು ಸಮರ
ಡಿಸೆಂಬರ್ 22, 1949: ಅಯೋಧ್ಯೆಯ ವಿವಾದಿತ ಜಾಗದಲ್ಲಿ ಬಾಲರಾಮನ ವಿಗ್ರಹ ಸ್ಥಾಪನೆ
1950: ಶ್ರೀರಾಮನ ಜನ್ಮಸ್ಥಳದ ಒಡೆತನ ಹಸ್ತಾಂತರಿಸುವಂತೆ ಕೋರಿ ಮಹಂತ ರಾಮಚಂದ್ರ ಪರಮಹಂಸ ದಾಸ್ ಅವರಿಂದ ಫೈಜಾಬಾದ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಕೆ
1959: ನಿರ್ಮೋಹಿ ಅಖಾಡದಿಂದ ಮತ್ತೊಂದು ಅರ್ಜಿ ಸಲ್ಲಿಕೆ
1961: ಬಾಬರಿ ಮಸೀದಿ ಮತ್ತು ಅಕ್ಕಪಕ್ಕದ ಪ್ರದೇಶವು ಖಬರಸ್ತಾನ ಎಂದು ವಾದಿಸಿ ಸುನ್ನಿ ವಕ್ಫ್ ಬೋರ್ಡ್‌ನಿಂದ ಅರ್ಜಿ ಸಲ್ಲಿಕೆ
1986 ಫೆಬ್ರುವರಿ 1: ಮಸೀದಿಯ ಬೀಗ ತೆಗೆಯಲು ಫೈಜಾಬಾದ್ ಜಿಲ್ಲಾ ನ್ಯಾಯಾಧೀಶರಿಂದ ಆದೇಶ
1993 ಜನವರಿ: ವಿವಾದಿತ ಸ್ಥಳದ ಸುತ್ತ 67 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಂಡ ಆಗಿನ ಪ್ರಧಾನಿ ಪಿ.ವಿ. ನರಸಿಂಹರಾವ್ ನೇತೃತ್ವದ ಸರ್ಕಾರ
1994: ಬಾಬರಿ ಮಸೀದಿ– ರಾಮಜನ್ಮಭೂಮಿ ವಿವಾದಕ್ಕೆ ಸಂಬಂಧಿಸಿದ ನ್ಯಾಯ ನಿರ್ಣಯ ತೆಗೆದುಕೊಳ್ಳುವಂತೆ ಅಲಹಾಬಾದ್ ಹೈಕೋರ್ಟ್‌ನ ಲಖನೌ ಪೀಠಕ್ಕೆ ಸೂಚಿಸಿದ ಸುಪ್ರೀಂ ಕೋರ್ಟ್
2002: ವಿವಾದಿತ ಜಾಗದ ಸಮೀಕ್ಷೆಗೆ ಅಲಹಾಬಾದ್ ಹೈಕೋರ್ಟ್ ಆದೇಶ
2003: ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯಿಂದ (ಎಎಸ್‌ಐ) ಉತ್ಖನನ
2010: ಅಯೋಧ್ಯೆಯ ವಿವಾದಿತ ಪ್ರದೇಶವನ್ನು ಮೂರು ಭಾಗಗಳನ್ನಾಗಿ ವಿಭಾಗಿಸಿ ಆದೇಶ ನೀಡಿದ ಅಲಹಾಬಾದ್ ಹೈಕೋರ್ಟ್. ಮೂರು ಭಾಗಗಳನ್ನು ಕ್ರಮವಾಗಿ ನಿರ್ಮೋಹಿ ಅಖಾಡ, ಶ್ರೀರಾಮ ಲಲ್ಲಾ (ಬಾಲರಾಮ) ಹಾಗೂ ಉತ್ತರ ಪ್ರದೇಶದ ಸುನ್ನಿ ವಕ್ಫ್ ಬೋರ್ಡ್‌ಗೆ ಹಂಚಿಕೆ ಮಾಡಿದ ಹೈಕೋರ್ಟ್
2011: ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ
2019: ಅಯೋಧ್ಯೆ ವಿವಾದದ ವಿಚಾರಣೆಯನ್ನು ಪ್ರತಿ ದಿನ ನಡೆಸಲು ‘ಸುಪ್ರೀಂ’ ನಿರ್ಧಾರ
2019, ನವೆಂಬರ್ 9: ಐವರು ನ್ಯಾಯಮೂರ್ತಿಗಳನ್ನೊಳಗೊಂಡ ಸುಪ್ರೀಂ ಕೋರ್ಟ್ ಪೀಠದಿಂದ ಅಯೋಧ್ಯೆ ವಿವಾದದ ಅಂತಿಮ ತೀರ್ಪು ಪ್ರಕಟ. ವಿವಾದಿತ ಸ್ಥಳದಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಅವಕಾಶ ಕಲ್ಪಿಸಿದ ಸುಪ್ರೀಂ ಕೋರ್ಟ್. ಅಯೋಧ್ಯೆಯ ಪ್ರಮುಖವಾದ ಸ್ಥಳದಲ್ಲಿ ಮಸೀದಿ ನಿರ್ಮಿಸಿಕೊಳ್ಳಲು ಸುನ್ನಿ ವಕ್ಫ್ ಮಂಡಳಿಗೆ ಐದು ಎಕರೆ ಜಮೀನು ಕೊಡಬೇಕು ಎಂದೂ ತೀರ್ಪು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.