ADVERTISEMENT

ಪೀಠದ ಸೂಚನೆ: ‘ಜನ್ಮಸ್ಥಳ’ದ ನಕ್ಷೆ ಹರಿದ ಧವನ್‌

ಪಿಟಿಐ
Published 16 ಅಕ್ಟೋಬರ್ 2019, 19:46 IST
Last Updated 16 ಅಕ್ಟೋಬರ್ 2019, 19:46 IST
   

ನವದೆಹಲಿ: ಹಿಂದೂ ಕಕ್ಷಿದಾರರು ಸಲ್ಲಿಸಿದ ನಕ್ಷೆಯ ಪ್ರತಿಯನ್ನು ಮುಸ್ಲಿಂ ಕಕ್ಷಿದಾರರ ವಕೀಲ ರಾಜೀವ್‌ ಧವನ್‌ ಅವರು ಹರಿದು ಹಾಕಿದ ಪ್ರಸಂಗ ಸುಪ್ರೀಂ ಕೋರ್ಟ್‌ನಲ್ಲಿ ನಡೆಯಿತು. ಶ್ರೀರಾಮ ಜನಿಸಿದ್ದ ನಿಖರ ಸ್ಥಳವನ್ನು ಗುರುತಿಸಿ ಹಿಂದೂ ಮಹಾಸಭಾದ ವಕೀಲರು ಈ ನಕ್ಷೆಯನ್ನು
ನೀಡಿದ್ದರು.

ಈಗ ಧ್ವಂಸವಾಗಿರುವ ಬಾಬರಿ ಮಸೀದಿಯ ಮಧ್ಯದ ಗುಮ್ಮಟದ ಕೆಳ ಭಾಗವೇ ಶ್ರೀರಾಮನ ಜನ್ಮಸ್ಥಳ ಎಂಬುದು ಹಿಂದೂ ಮಹಾಸಭಾದ ವಾದ. ಅದನ್ನು ಪುಷ್ಟೀಕರಿಸಲು ಭಾರತದ ಮತ್ತು ವಿದೇಶದ ಲೇಖಕರು ಬರೆದ ಪುಸ್ತಕ ಮತ್ತು ನಕ್ಷೆಯನ್ನುಸಲ್ಲಿಸಲಾಗಿತ್ತು. ಈಗ, ಇಂತಹ ನಕ್ಷೆಗಳ ಮೇಲೆ ಅವಲಂಬಿತವಾಗಲು ಸಾಧ್ಯವಿಲ್ಲ. ಜನ್ಮಸ್ಥಾನದ ವಿಚಾರವನ್ನು ಅಲಹಾಬಾದ್‌ ಹೈಕೋರ್ಟ್‌ ಬೇರೆ ದಾಖಲೆ ಆಧಾರದಲ್ಲಿ ಚರ್ಚಿಸಿದೆ ಎಂದು ಧವನ್‌ ಹೇಳಿದರು. ಮಹಾಸಭಾದ ವಕೀಲ ವಿಕಾಸ್‌ ಸಿಂಗ್‌ ವಾದಕ್ಕೆ ಧವನ್‌ ಬಲವಾದ ಆಕ್ಷೇಪ ವ್ಯಕ್ತಪಡಿಸಿದರು. ಈ ನಕ್ಷೆಯನ್ನು ದಾಖಲೆಯಾಗಿ ಪರಿಗಣಿಸಬೇಕು ಎಂದು ಒತ್ತಾಯಿಸುವುದಿಲ್ಲ ಎಂದು ಸಿಂಗ್‌ ಹೇಳಿದರು.

ಹಾಗಾದರೆ ಈ ನಕ್ಷೆಯನ್ನು ಏನು ಮಾಡಲಿ ಎಂದು ಧವನ್‌ ಕೇಳಿದರು. ‘ಹರಿದು ಹಾಕಿ’ ಎಂದು ಪೀಠವು ಹೇಳಿತು. ಧವನ್‌ ನಕ್ಷೆಯನ್ನು ಹರಿದು ಹಾಕಿದರು. ಈ ಪ್ರಹಸನ ಅಲ್ಲಿಗೆ ಮುಗಿಯಲಿಲ್ಲ. ‘ನಕ್ಷೆ ಹರಿದು ಹಾಕಿರುವುದು ನ್ಯಾಯಾಲಯದ ಹೊರಗೆ ಭಾರಿ ಸಂಚಲನ ಸೃಷ್ಟಿಸಿದೆ’ ಎಂದು ಭೋಜನ ವಿರಾಮದ ಬಳಿಕ ಕಲಾಪ ಆರಂಭವಾದಾಗ ಧವನ್‌ ಹೇಳಿದರು.

ADVERTISEMENT

‘ನಾನು ಸ್ವ ಇಚ್ಛೆಯಿಂದ ನಕ್ಷೆ ಹರಿದು ಹಾಕಿದೆ ಎಂದು ಸುದ್ದಿಯಾಗುತ್ತಿದೆ’ ಎಂದರು.

‘ನಾನು ಈ ಹಾಳೆಗಳನ್ನು (ನಕ್ಷೆ) ಹರಿದುಹಾಕಬಹುದು ಎಂದು ಮುಖ್ಯ ನ್ಯಾಯಮೂರ್ತಿ ಹೇಳಿ
ದರು. ಆ ಆದೇಶವನ್ನು ಪಾಲಿಸಿದ್ದೇನೆ. ಇಂತಹ ವಿಚಾರಗಳಲ್ಲಿ ಅರವಿಂದ ದಾತಾರ್‌ ಅವರ ಸಲಹೆಯನ್ನು ಕೇಳುತ್ತೇನೆ. ಮುಖ್ಯ ನ್ಯಾಯಮೂರ್ತಿ ಹೇಳಿದ್ದು ಒಂದು ರೀತಿಯ ಮೌಖಿಕ ಆದೇಶ ಎಂದು ದಾತಾರ್‌ ಹೇಳಿದರು’ ಎಂದು ಧವನ್‌ ವಿವರಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ಮುಖ್ಯ ನ್ಯಾಯಮೂರ್ತಿ ‘ನಾನು ಹೇಳಿದ ರೀತಿಯಲ್ಲಿಯೇ ಧವನ್‌ ನಕ್ಷೆಯ ಪ್ರತಿ ಹರಿದರು. ಧವನ್‌ ಮಾಡಿರುವುದು ಸರಿಯಾಗಿಯೇ ಇದೆ. ಈ ಸ್ಪಷ್ಟೀಕರಣ ಕೂಡ ವ್ಯಾಪಕವಾಗಿ ವರದಿಯಾಗಲಿ’ ಎಂದರು.

ಮಸೀದಿ ಕೆಡವಿದ ದೃಶ್ಯ ತೋರಿಸಬೇಡಿ: ಸೂಚನೆ

lಅಯೋಧ್ಯೆ ಪ್ರಕರಣ ವರದಿ ಮಾಡುವಾಗ ಅತಿ ಹೆಚ್ಚಿನ ಎಚ್ಚರಿಕೆ ವಹಿಸಲು ಖಾಸಗಿ ಸುದ್ದಿ ವಾಹಿನಿಗಳಿಗೆ ಸುದ್ದಿ ಪ್ರಸಾರ ಮಾನದಂಡ ಪ್ರಾಧಿಕಾರದ (ಎನ್‌ಬಿಎಸ್‌ಎ) ಸೂಚನೆ

lಈ ಬಗ್ಗೆ ಮಾಧ್ಯಮಗಳಿಗೆ ಮಾರ್ಗಸೂಚಿ ಬಿಡುಗಡೆ

lಬಾಬರಿ ಮಸೀದಿ ಕೆಡವಿದ ಸಂದರ್ಭದ ದೃಶ್ಯಗಳನ್ನು ಪ್ರದರ್ಶಿಸುವುದಕ್ಕೆ ನಿಷೇಧ

lವಿವಾದಕ್ಕೆ ಸಂಬಂಧಿಸಿದಂತೆ ಪ್ರಚೋದನಕಾರಿ ಚರ್ಚೆಯಿಂದ ದೂರವಿರಿ, ಯಾವುದೇ ಊಹಾತ್ಮಕ ವರದಿ ಪ್ರಸಾರ ಮಾಡಬೇಡಿ

lಕಾರ್ಯಕ್ರಮವು ಯಾವುದೇ ಸಮುದಾಯದ ಪರ ಅಥವಾ ವಿರುದ್ಧ ಪಕ್ಷಪಾತ ಧೋರಣೆ ಅಥವಾ ಪೂರ್ವಗ್ರಹ ಹೊಂದಿದೆ ಎಂಬ ಭಾವನೆ ಬರುವಂತಿರಬಾರದು.

lವಿಜಯೋತ್ಸವ ಆಚರಿಸುವ ಅಥವಾ ಪ್ರತಿಭಟನೆ ನಡೆಸುವ ದೃಶ್ಯಗಳನ್ನೂ ಪ್ರಸಾರ ಮಾಡಬಾರದು

(ಎನ್‌ಬಿಎಸ್‌ಎ ಖಾಸಗಿ ಸುದ್ದಿ ವಾಹಿನಿಗಳ ಸ್ವಯಂ ನಿಯಂತ್ರಣ ಸಂಸ್ಥೆಯಾಗಿದ್ದು ಮುಂಚೂಣಿಯ 25 ಸಂಸ್ಥೆಗಳ 47 ವಾಹಿನಿಗಳು ಇದರ ಸದಸ್ಯತ್ವ ಹೊಂದಿವೆ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.