ನವದೆಹಲಿ (ಪಿಟಿಐ): ಅಯೋಧ್ಯೆ ಭೂ ವಿವಾದ ಕುರಿತ ಪ್ರಕರಣದಲ್ಲಿ ಭಾರತೀಯ ಪ್ರಾಚ್ಯವಸ್ತು ಸರ್ವೇಕ್ಷಣ ಸಂಸ್ಥೆ (ಎಎಸ್ಐ) 2003ರಲ್ಲಿ ಸಲ್ಲಿಸಿದ್ದ ವರದಿ ಸತ್ಯಾಸತ್ಯತೆ ಪ್ರಶ್ನಿಸಿದ್ದಕ್ಕಾಗಿ ಮುಸ್ಲಿಂ ಪ್ರತಿನಿಧಿಗಳು ಗುರುವಾರ ಸುಪ್ರೀಂ ಕೋರ್ಟ್‌ನ ಕ್ಷಮೆ ಕೋರಿದರು.
‘ಪ್ರಶ್ನಿಸಿ ಕಲಾಪದ ಅವಧಿ ಹಾಳುಮಾಡಿದ್ದಕ್ಕೆ ಕ್ಷಮೆ ಕೋರುತ್ತೇವೆ. ವರದಿ ಖಚಿತತೆ ಪ್ರಶ್ನಿಸಲು ಹೋಗುವುದಿಲ್ಲ’ ಎಂದು ಹಿರಿಯ ವಕೀಲ ರಾಜೀವ್ ಧವನ್ ಅವರು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ನೇತೃತ್ವದ ಪಂಚ ಸದಸ್ಯರ ನ್ಯಾಯಪೀಠಕ್ಕೆ ತಿಳಿಸಿದರು.
‘ಪ್ರತಿ ಪುಟಕ್ಕೂ ಸಹಿ ಹಾಕಿರಬೇಕು ಎಂದು ಬಯಸುವುದು ಸರಿಯಲ್ಲ. ವರದಿ ಮತ್ತು ವರದಿಯ ಟಿಪ್ಪಣಿಯ ಖಚಿತತೆ ಪ್ರಶ್ನಿಸಲಾಗದು. ನಾವು ನಿಮ್ಮ ಸಮಯ ಹಾಳು ಮಾಡಿದ್ದರೆ, ಅದಕ್ಕಾಗಿ ಕ್ಷಮೆ ಕೊರುತ್ತೇವೆ’ ಎಂದು ವಕೀಲರು ಪೀಠಕ್ಕೆ ತಿಳಿಸಿದರು.
ಮುಸ್ಲಿಂ ಪ್ರತಿನಿಧಿಗಳ ಪರ ವಾದಿಸುತ್ತಿರುವ ಇನ್ನೊಬ್ಬ ಹಿರಿಯ ವಕೀಲರಾದ ಮೀನಾಕ್ಷಿ ಅರೋರಾ, ‘ವರದಿಯ ಪ್ರತಿ ವಿಭಾಗ ಬರೆದವರ ಉಲ್ಲೇಖ ಒಳಗೊಂಡಿರಬೇಕು. ಆದರೆ, ಟಿಪ್ಪಣಿಯಲ್ಲಿ ಯಾರದೇ ಹೆಸರಿನ ಉಲ್ಲೇಖವಿಲ್ಲ’ ಎಂದುಬುಧವಾರ ಪ್ರಶ್ನಿಸಿದ್ದರು.
‘ನಾನು ವರದಿ ಪ್ರಶ್ನಿಸುವ ಹಕ್ಕು ಕಳೆದುಕೊಳ್ಳುವುದಿಲ್ಲ. ಆದರೆ, ಕೋರ್ಟ್ ವರದಿಯನ್ನು ಮಾನ್ಯ ಮಾಡಿರುವಾಗ ಅದನ್ನು ಕಡೆಗಣಿಸಲಾಗದು’ ಎಂದೂ ಧವನ್ ಅವರು ಪೀಠಕ್ಕೆ ತಿಳಿಸಿದರು.
ನ್ಯಾಯಪೀಠ ಅಂತಿಮವಾಗಿ, ‘ಹಿಂದೂ ಮತ್ತು ಮುಸ್ಲಿಂನ ಉಭಯ ಗುಂಪುಗಳಿಗೆ ತನ್ನ ವಾದವನ್ನು ಪೂರ್ಣಗೊಳಿಸಲು ಅಗತ್ಯವಿರುವ ಕಾಲಾವಧಿ ಕುರಿತು ತಿಳಿಸಬೇಕು. ಅಕ್ಟೋಬರ್ 18ರ ಬಳಿಕ ಹೆಚ್ಚಿನ ಅವಧಿ ಸಿಗುವುದಿಲ್ಲ’ ಎಂದು ಸ್ಪಷ್ಟಪಡಿಸಿತು.
‘ಅಕ್ಟೋಬರ್ 18ರ ನಂತರ ಹೆಚ್ಚುವರಿ ದಿನ ಸಿಗುವುದಿಲ್ಲ. ನಾಲ್ಕು ವಾರಗಳಲ್ಲಿ ನಾವು ತೀರ್ಪು ನೀಡಿದ್ದೇ ಆದಲ್ಲಿ ಅದೊಂದು ಪವಾಡ’ ಎಂದು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ಈ ಸಂದರ್ಭದಲ್ಲಿ ಹೇಳಿದರು.
ಎಎಸ್‌ಐ ವರದಿ ಕುರಿತ ವಾದವನ್ನು ಪೂರ್ಣಗೊಳಿಸಲು ಮುಸ್ಲಿಂ ಪ್ರತಿನಿಧಿಗಳಿಗೆ ತಿಳಿಸಿದ ಪೀಠ, ‘ಅಕ್ಟೋಬರ್‌ನಲ್ಲಿ ರಜೆಗಳಿವೆ. ಹೀಗಾಗಿ ನಾಲ್ವರು ಹಿಂದೂ ಪ್ರತಿನಿಧಿಗಳ ಪರವಾಗಿ ಒಬ್ಬರು ವಕೀಲರಿಗಷ್ಟೇ ಪೂರಕ ವಾದ ಮಂಡಿಸಲು ಅವಕಾಶ ಇರಲಿದೆ’ ಎಂದು ಹೇಳಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.