ADVERTISEMENT

ಮಂದಿರದತ್ತ ಮೊದಲ ಹೆಜ್ಜೆ: ಬಿಜೆಪಿ

ವಿವಾದವಿಲ್ಲದ ಸ್ಥಳ ರಾಮ ಜನ್ಮಭೂಮಿ ನ್ಯಾಸಕ್ಕೆ ಹಸ್ತಾಂತರಿಸಲು ಕೇಂದ್ರದ ಸಿದ್ಧತೆ

ಪಿಟಿಐ
Published 29 ಜನವರಿ 2019, 20:15 IST
Last Updated 29 ಜನವರಿ 2019, 20:15 IST
   

ನವದೆಹಲಿ: ಅಯೋಧ್ಯೆಯ ವಿವಾದಿತ ಸ್ಥಳದ ಸುತ್ತಲಿನ ವಿವಾದವಿಲ್ಲದ ಸ್ಥಳವನ್ನು ರಾಮ ಜನ್ಮಭೂಮಿ ನ್ಯಾಸಕ್ಕೆ ನೀಡಲು ಅವಕಾಶ ಕೊಡುವಂತೆ ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟನ್ನು ಕೋರಿದ್ದು ರಾಮ ಮಂದಿರ ನಿರ್ಮಾಣದತ್ತ ಮೊದಲ ಹೆಜ್ಜೆ ಎಂದು ಬಿಜೆಪಿ ಬಣ್ಣಿಸಿದೆ.

ಕೇಂದ್ರ ಸರ್ಕಾರವು ಮಹತ್ವದ ತೀರ್ಮಾನ ಕೈಗೊಂಡಿದೆ. ಸರ್ಕಾರದ ವಶದಲ್ಲಿರುವ ಸ್ಥಳವನ್ನು ಅದರ ಮೂಲ ಮಾಲೀಕರಾದ ರಾಮ ಜನ್ಮಭೂಮಿ ನ್ಯಾಸಕ್ಕೆ ಹಸ್ತಾಂತರಿಸಲು ಮುಂದಾಗಿದೆ. ನ್ಯಾಸವು ಅಲ್ಲಿ ರಾಮಮಂದಿರ ನಿರ್ಮಿಸಲು ಬಯಸಿದೆ ಎಂದು ಕೇಂದ್ರ ಸಚಿವ ಪ್ರಕಾಶ್‌ ಜಾವಡೇಕರ್‌ ಹೇಳಿದ್ದಾರೆ.

ವಿವಾದವಿರುವ ನಿವೇಶನವನ್ನು ಸರ್ಕಾರ ಮುಟ್ಟುವುದೇ ಇಲ್ಲ ಎಂದು ಜಾವಡೇಕರ್‌ ಸ್ಪಷ್ಟಪಡಿಸಿದ್ದಾರೆ.

ADVERTISEMENT

ಲೋಕಸಭೆ ಚುನಾವಣೆ ಹತ್ತಿರವಾಗುತ್ತಿರುವುದರಿಂದ ಕೇಂದ್ರ ಈ ನಿರ್ಧಾರ ಕೈಗೊಂಡಿದೆ ಎಂಬ ಕಾಂಗ್ರೆಸ್‌ ಪಕ್ಷದ ಟೀಕೆಯನ್ನು ಅವರು ಅಲ್ಲಗಳೆದಿದ್ದಾರೆ. ‘ರಾಮನ ಅಸ್ತಿತ್ವವನ್ನೇ ಕಾಂಗ್ರೆಸ್‌ ಒಪ್ಪಿಕೊಳ್ಳುವುದಿಲ್ಲ. ರಾಮ ಸೇತು ಕಾಲ್ಪನಿಕ ಎಂದು ಸುಪ್ರೀಂ ಕೋರ್ಟ್‌ಗೆ ಆ ಪಕ್ಷದ ನೇತೃತ್ವದ ಸರ್ಕಾರ ಪ್ರಮಾಣಪತ್ರ ಕೊಟ್ಟಿತ್ತು’ ಎಂದು ಅವರು ಹೇಳಿದ್ದಾರೆ.

ವಿವಾದ ಇರುವುದು 0.313 ಎಕರೆ ನಿವೇಶನದ ಬಗ್ಗೆ ಮಾತ್ರ. ಈ ನಿವೇಶನದ ಬಗ್ಗೆ ಸರ್ಕಾರ ಯಾವ ನಿರ್ಧಾರವನ್ನೂ ಕೈಗೊಂಡಿಲ್ಲ ಎಂದು ಅವರು ಪುನರುಚ್ಚರಿಸಿದರು.

ಕಾನೂನು ಮಾರ್ಗದ ಮೂಲಕವೇ ಮಂದಿರ ನಿರ್ಮಿಸಬೇಕು ಎಂಬುದು ಬಿಜೆಪಿಯ ನಿಲುವು. ಈಗ ಸರ್ಕಾರ ತೆಗೆದುಕೊಂಡಿರುವುದು ಕಾನೂನು ಬದ್ಧವಾದ ಹೆಜ್ಜೆಯಾಗಿದೆ. ವಿವಾದವಿಲ್ಲದ ಜಮೀನು ಹಸ್ತಾಂತರಕ್ಕೆ ಸುಪ್ರೀಂ ಕೋರ್ಟ್‌ ಬಹಳ ಬೇಗನೆ ಸಮ್ಮತಿಸುವ ವಿಶ್ವಾಸವಿದೆ ಎಂದು ಅವರು ಹೇಳಿದ್ದಾರೆ.

ರಾಜಕೀಯ ಸಂದೇಶ:ರಾಮ ಭಕ್ತರು ಮತ್ತು ಬಿಜೆಪಿ ಕಾರ್ಯಕರ್ತರಲ್ಲಿ ಇರುವ ಭಾರಿ ಅಸಮಾಧಾನವನ್ನು ತಣಿಸುವುದಕ್ಕಾಗಿಯೇ ಈ ನಿರ್ಧಾರವನ್ನು ಸರ್ಕಾರ ಕೈಗೊಂಡಿದೆ ಎಂದು ಬಿಜೆಪಿಯ ಹಿರಿಯ ಮುಖಂಡರೊಬ್ಬರು ಹೇಳಿದ್ದಾರೆ.

ಬಿಜೆಪಿಯ ರಾಷ್ಟ್ರೀಯ ಮಂಡಳಿಯ ಸಭೆಯಲ್ಲಿ ಅಧ್ಯಕ್ಷ ಅಮಿತ್‌ ಶಾ ಅವರು ರಾಮ ಮಂದಿರ ನಿರ್ಮಿಸಲು ಬಿಜೆಪಿ ಬದ್ಧ ಎಂದು ಹೇಳಿದ್ದಾಗ ಕಾರ್ಯಕರ್ತರು ಭಾರಿ ಕರತಾಡನ ಮಾಡಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರು ಅದೇ ಸಭೆಯಲ್ಲಿ ರಾಮ ಮಂದಿರದ ಬಗ್ಗೆ ಪ್ರಸ್ತಾಪಿಸಿದಾಗಲೂ ಕಾರ್ಯಕರ್ತರು ಜೋರು ಚಪ್ಪಾಳೆ ತಟ್ಟಿದ್ದರು.

ಹೀಗಾಗಿ ರಾಮ ಮಂದಿರ ವಿಚಾರವನ್ನು ಹಿನ್ನೆಲೆಗೆ ಸರಿಸಲು ಬಿಜೆಪಿಗೆ ಸಾಧ್ಯವೇ ಇಲ್ಲದ ಸ್ಥಿತಿ ನಿರ್ಮಾಣವಾಗಿದೆ. ಕಾರ್ಯಕರ್ತರು ಮತ್ತು ರಾಮ ಭಕ್ತರ ಭಾವನೆಗಳನ್ನು ನಿರ್ಲಕ್ಷಿಸುವುದು ಅಸಾಧ್ಯ. ರಾಮ ಮಂದಿರದ ಪರವಾಗಿರುವವರು ಸದಾ ಬಿಜೆಪಿಯನ್ನು ಬೆಂಬಲಿಸಿದ್ದಾರೆ. ಈ ಜನರ ಭಾವನೆಗಳಿಗೆ ಸರ್ಕಾರ ಎಷ್ಟೊಂದು ಮಹತ್ವ ನೀಡುತ್ತಿದೆ ಎಂಬ ರಾಜಕೀಯ ಸಂದೇಶ ನೀಡಲೇಬೇಕಾಗಿದೆ ಎಂದು ಈ ಮುಖಂಡ ಹೇಳಿದ್ದಾರೆ.

**

ರಾಜಕೀಯ ಪ್ರೇರಿತ: ಕಾಂಗ್ರೆಸ್‌, ಸಿಪಿಎಂ

ಅಯೋಧ್ಯೆಯ ಬಾಬ್ರಿ ಮಸೀದಿ– ರಾಮಜನ್ಮಭೂಮಿಯ ವಿವಾದರಹಿತ ಜಾಗವನ್ನು ರಾಮ ಜನ್ಮಭೂಮಿ ನ್ಯಾಸ ಮತ್ತು ಮೂಲ ಮಾಲೀಕರಿಗೆ ಹಸ್ತಾಂತರಿಸಲು ಅನುಮತಿ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ಕಾಂಗ್ರೆಸ್‌ ಮತ್ತು ಸಿಪಿಎಂ ಟೀಕಿಸಿವೆ.

ಲೋಕಸಭಾ ಚುನಾವಣೆಗೆ ಇನ್ನೂ ಎರಡು ತಿಂಗಳು ಬಾಕಿ ಇರುವಾಗ ಕೇಂದ್ರ ಸರ್ಕಾರ ಈ ಅರ್ಜಿ ಸಲ್ಲಿಸಿರುವ ಹಿಂದಿರುವ ಕಾರಣ ಸ್ಪಷ್ಟವಾಗಿದೆ ಎಂದು ಕಾಂಗ್ರೆಸ್‌ ಪ್ರತಿಕ್ರಿಯಿಸಿದೆ.

ಅಯೋಧ್ಯೆ ವಿವಾದ ಸುಪ್ರೀಂ ಕೋರ್ಟ್ ನಲ್ಲಿರುವ ಕಾರಣ ಯಥಾಸ್ಥಿತಿ ಕಾಪಾಡುವಂತೆ ಸಿಪಿಎಂ ಪಾಲಿಟ್‌ಬ್ಯೂರೊ ಒತ್ತಾಯಿಸಿದೆ.

**

ಕಾಮಗಾರಿ ಆರಂಭಿಸಲು ಯೋಗಿ ಸಿದ್ಧ: ಮುಸ್ಲಿ‌ಮರ ವಿರೋಧ

ವಿವಾದ ಇಲ್ಲದ ಸ್ಥಳದಲ್ಲಿ ರಾಮ ಮಂದಿರ ನಿರ್ಮಾಣ ಕಾಮಗಾರಿ ಆರಂಭಿಸಲು ಅನುಮತಿ ಕೊಡಬೇಕು ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹೇಳಿದ್ದಾರೆ.

ಆದರೆ, ಮುಸ್ಲಿಂ ಸಮುದಾಯದ ಮುಖಂಡರು ಇದನ್ನು ವಿರೋಧಿಸಿದ್ದಾರೆ. ಸರ್ಕಾರವು ಸ್ವಾಧೀನ ಪಡಿಸಿಕೊಂಡಿರುವ ಜಮೀನಿನ ಯಾವುದೇ ಭಾಗವನ್ನು ಯಾರಿಗೂ ಕೊಡಬಾರದು. ಅಯೋಧ್ಯೆ ವಿವಾದವನ್ನು ಪರಿಹರಿಸುವುದು ಬಿಜೆಪಿಗೆಬೇಕಿಲ್ಲ. ಹಾಗಾಗಿ ವಿವಾದವನ್ನು ಇನ್ನಷ್ಟು ಸಂಕೀರ್ಣಗೊಳಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ವಿವಾದವಿಲ್ಲದ ಸ್ಥಳವನ್ನು ಹಸ್ತಾಂತರಿಸಿದ ಕೂಡಲೇ ಮಂದಿರ ನಿರ್ಮಾಣ ಕಾಮಗಾರಿ ಆರಂಭವಾಗಲಿದೆ ಎಂದು ಬಿಜೆಪಿ ಮುಖಂಡ ವಿನಯ ಕಟಿಯಾರ್‌ ಹೇಳಿದ್ದಾರೆ.

ಸರ್ಕಾರದ ನಿರ್ಧಾರವನ್ನು ನ್ಯಾಯಾಲಯದಲ್ಲಿ ವಿರೋಧಿಸಲಾಗುವುದು ಎಂದು ಸುನ್ನಿ ವಕ್ಫ್‌ ಮಂಡಳಿಯ ವಕೀಲ ಝಪರ್ಯಾಬ್‌ ಜಿಲಾನಿಹೇಳಿದ್ದಾರೆ.

ಆದರೆ, ವಿವಾದವಿಲ್ಲದ ಸ್ಥಳವನ್ನು ನ್ಯಾಸಕ್ಕೆ ಹಸ್ತಾಂತರಿಸುವುದಕ್ಕೆ ಯಾವುದೇ ಆಕ್ಷೇಪ ಇಲ್ಲ ಎಂದು ಮೇಲ್ಮನವಿದಾರರಲ್ಲಿ ಒಬ್ಬರಾದ ಇಕ್ಬಾಲ್‌ ಅನ್ಸಾರಿ ಹೇಳಿದ್ದಾರೆ.

ನಿಜವಾದ ವಿವಾದ ಇರುವುದು 2.77 ಎಕರೆ ನಿವೇಶನದ ಬಗ್ಗೆ. ಅದು ಪರಿಹಾರವಾಗದೆ ವಿವಾದಕ್ಕೆ ಪರಿಹಾರ ಸಾಧ್ಯವಿಲ್ಲ ಎಂದು ತಾತ್ಕಾಲಿಕ ರಾಮಮಂದಿರದ ಪ್ರಧಾನ ಅರ್ಚಕ ಆಚಾರ್ಯ ಸತುವೇಂದ್ರ ದಾಸ ಹೇಳಿದ್ದಾರೆ.

**

ವಿವಾಧಿತ ಸ್ಥಳ: ಏನು–ಎತ್ತ?

ಸ್ವಾಧೀನ ಪಡಿಸಿಕೊಂಡಿರುವ ಜಮೀನನ್ನು ಅದರ ಮೂಲ ಮಾಲೀಕರಿಗೆ ಮರಳಿಸಲು ಕೇಂದ್ರ ಸರ್ಕಾರ ಬಯಸಿದರೆ ಹಾಗೆ ಮಾಡಬಹುದು ಎಂದು ಇಸ್ಮಾಯಿಲ್‌ ಫರೂಕಿ ಪ್ರಕರಣದ ವಿಚಾರಣೆ ಸಂದರ್ಭದಲ್ಲಿ 1994ರಲ್ಲಿ ಸುಪ್ರೀಂ ಕೋರ್ಟ್‌ ಅಭಿಪ್ರಾಯಪಟ್ಟಿತ್ತು ಎಂಬುದನ್ನು ಕೇಂದ್ರದ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

ವಿವಾದಾತ್ಮಕವಾದ 0.313 ಎಕರೆ ಜಮೀನನ್ನು ಹೊರತುಪಡಿಸಿದ ಉಳಿದ ಸ್ಥಳವನ್ನು ಮೂಲ ಮಾಲೀಕರಿಗೆ ನೀಡಲು ಅಡ್ಡಿ ಇಲ್ಲ ಎಂದು ಸಂವಿಧಾನ ಪೀಠ ಹೇಳಿತ್ತು ಎಂಬುದನ್ನು ಅರ್ಜಿಯಲ್ಲಿ ನೆನಪಿಸಲಾಗಿದೆ. ವಿವಾದ ಇರುವುದು 0.313 ಎಕರೆ ಜಮೀನು ಮಾತ್ರ ಎಂದು ಕೇಂದ್ರ ಹೇಳಿದೆ.

1991ರಲ್ಲಿ ಸ್ವಾಧೀನ ಮಾಡಿಕೊಳ್ಳಲಾದ ಈ ಹೆಚ್ಚುವರಿ ಜಮೀನನ್ನು ಹಿಂದಿರುಗಿಸುವಂತೆ ರಾಮ ಜನ್ಮಭೂಮಿ ನ್ಯಾಸವು (ರಾಮ ಮಂದಿರ ನಿರ್ಮಾಣಕ್ಕಾಗಿ ರಚಿಸಲಾದ ಟ್ರಸ್ಟ್‌) ಕೇಳಿದೆ. ಹೆಚ್ಚುವರಿ ಜಮೀನಿನಲ್ಲಿ 42 ಎಕರೆಯ ಮೂಲ ಮಾಲೀಕತ್ವ ರಾಮ ಜನ್ಮಭೂಮಿನ್ಯಾಸದ್ದಾಗಿದೆ.

ಸಂವಿಧಾನ ಪೀಠದ ತೀರ್ಪಿನ ಆಧಾರದಲ್ಲಿ ನ್ಯಾಸವು ಈ ಜಮೀನು ಹಸ್ತಾಂತರ ಕೋರಿ ಅರ್ಜಿ ಕೊಟ್ಟಿದೆ ಎಂದು ಸುಪ್ರೀಂ ಕೋರ್ಟ್‌ಗೆ ಕೇಂದ್ರ ಸಲ್ಲಿಸಿದ ಅರ್ಜಿಯಲ್ಲಿ ಹೇಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.