ಲಖನೌ: ರಾಮಮಂದಿರ ನಿರ್ಮಾಣವಾಗುತ್ತಿರುವ ಅಯೋಧ್ಯೆಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಇಂದು ಭೇಟಿ ನೀಡಿದ್ದು, ಭಗವಾನ್ ರಾಮನಿಲ್ಲದೆ ಅಯೋಧ್ಯೆಯು ಏನೂ ಅಲ್ಲ ಎಂದು ಹೇಳಿದ್ದಾರೆ.
ರಾಮನಿಲ್ಲದೆ ಅಯೋಧ್ಯೆಯು ಅಯೋಧ್ಯೆಯಾಗಿರುವುದಿಲ್ಲ. ರಾಮ ಇರುವಲ್ಲಿಯೇ ಅಯೋಧ್ಯೆ ಅಸ್ತಿತ್ವದಲ್ಲಿರುತ್ತದೆ. ಈ ನಗರದಲ್ಲಿ ಭಗವಾನ್ ರಾಮನು ಶಾಶ್ವತವಾಗಿ ನೆಲೆಸಿದ್ದಾನೆ, ಆದ್ದರಿಂದ ನಿಜವಾದ ಅರ್ಥದಲ್ಲಿ ಈ ಸ್ಥಳವು ಅಯೋಧ್ಯೆಯಾಗಿದೆ' ಎಂದು ಅಲ್ಲಿ ರಾಮಾಯಣ ಕಥನವನ್ನು ಉದ್ಘಾಟಿಸಿ ಮಾತನಾಡಿದರು.
2019 ರಲ್ಲಿ ಸುಪ್ರೀಂ ಕೋರ್ಟ್ ನೀಡಿದ ಐತಿಹಾಸಿಕ ತೀರ್ಪಿನ ನಂತರ ಇದೇ ಮೊದಲ ಬಾರಿಗೆ ರಾಷ್ಟ್ರಪತಿಗಳು ರಾಮ ಮಂದಿರ ನಿರ್ಮಾಣವಾಗುತ್ತಿರುವ ಅಯೋಧ್ಯೆಗೆ ಭೇಟಿ ನೀಡಿದ್ದಾರೆ.
'ನನ್ನ ಕುಟುಂಬದ ಸದಸ್ಯರು ನನಗೆ ರಾಮನಾಥ ಕೋವಿಂದ ಎಂದು ಹೆಸರಿಟ್ಟಾಗ, ಅವರು ರಾಮ ಕಥಾ ಮತ್ತು ಭಗವಾನ್ ರಾಮನ ಬಗ್ಗೆ ಗೌರವ ಮತ್ತು ಪ್ರೀತಿಯ ಭಾವನೆಯನ್ನು ಹೊಂದಿದ್ದರು, ಇದು ಸಾಮಾನ್ಯವಾಗಿ ಬಹುತೇಕ ಸಾರ್ವಜನಿಕರಲ್ಲಿ ಕಂಡುಬರುತ್ತದೆ' ಎಂದು ತಿಳಿಸಿದರು.
ಅಯೋಧ್ಯೆಯ ಕುರಿತು ಇನ್ನಷ್ಟು ವಿವರಿಸಿದ ರಾಷ್ಟ್ರಪತಿಗಳು, 'ಯುದ್ಧಮಾಡಿ ಜಯಿಸಲುಸಾಧ್ಯವೇ ಇಲ್ಲದ ಪ್ರದೇಶ ಎಂಬುದುʼಅಯೋಧ್ಯೆʼಯ ನಿಜವಾದ ಅರ್ಥ. ರಘುವಂಶಿ ರಾಜರಾದ ರಘು, ದಿಲೀಪ್, ಅಜ್, ದಶರಥ ಮತ್ತು ರಾಮ ಅವರ ಧೈರ್ಯ ಮತ್ತು ಶಕ್ತಿಯಿಂದಾಗಿ ಅವರನ್ನು ಯಾರೊಬ್ಬರೂ ಜಯಿಸಲಾಗದು ಎಂದು ಪರಿಗಣಿಸಲಾಗಿದೆ. ಆದ್ದರಿಂದ, ಅಯೋಧ್ಯೆ ಎಂಬ ಈ ನಗರದ ಹೆಸರು ಎಂದೆಂದಿಗೂ ಪ್ರಸ್ತುತವಾಗಿ ಉಳಿಯುತ್ತದೆ' ಎಂದು ತಿಳಿಸಿದರು.
ಆದಿವಾಸಿಗಳ ಮೇಲೆ ಭಗವಾನ್ ರಾಮನಿಗಿರುವ ಪ್ರೀತಿಯ ಬಗ್ಗೆ ಮಾತನಾಡಿದ ಅವರು, 'ತನ್ನ ವನವಾಸದ ದಿನಗಳಲ್ಲಿ, ರಾಮನು ಅಯೋಧ್ಯೆ ಮತ್ತು ಮಿಥಿಲಾ ಸೈನ್ಯವನ್ನು ಯುದ್ಧಕ್ಕೆ ಕರೆಸಲಿಲ್ಲ. ಬದಲಿಗೆ ಕೋಲ್ಸ್, ಭೀಲ್ಸ್, ವಾನರರನ್ನು ಒಟ್ಟುಗೂಡಿಸಿ ತನ್ನ ಸೈನ್ಯವನ್ನು ರಚಿಸಿದರು. ಸೈನ್ಯಕ್ಕೆ 'ಜಟಾಯು' (ರಣಹದ್ದು) ವನ್ನು ಸೇರಿಸಿಕೊಂಡರು. ಆದಿವಾಸಿಗಳೊಂದಿಗೆ ಪ್ರೀತಿ ಮತ್ತು ಸ್ನೇಹವನ್ನು ಬಲಪಡಿಸಿದರು' ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ರಾಮಾಯಣ ಸಮ್ಮೇಳನದ ಪೋಸ್ಟಲ್ ಕವರ್ ಅನ್ನು ರಾಷ್ಟ್ರಪತಿಗಳು ಅನಾವರಣಗೊಳಿಸಿದರು.
ಉತ್ತರ ಪ್ರದೇಶದ ರಾಜ್ಯಪಾಲ ಆನಂದಿಬೆನ್ ಪಟೇಲ್, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಉಪಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯ ಹಾಗೂ ದಿನೇಶ್ ಶರ್ಮಾ ಮತ್ತು ಕೇಂದ್ರ ಸಚಿವರಾದ ದರ್ಶನ ವಿಕ್ರಮ್ ಜರ್ದೋಶ್ ಕಾರ್ಯಕ್ರಮದಲ್ಲಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.