ADVERTISEMENT

ಅಯೋಧ್ಯೆಯಲ್ಲಿ ಭೂ ಹಗರಣ ನಡೆದಿದೆ: ಅಖಿಲೇಶ್‌ ಯಾದವ್‌ ಆರೋಪ

ಪಿಟಿಐ
Published 10 ಜುಲೈ 2024, 13:05 IST
Last Updated 10 ಜುಲೈ 2024, 13:05 IST
ಅಖಿಲೇಶ್‌ ಯಾದವ್‌
ಅಖಿಲೇಶ್‌ ಯಾದವ್‌   

ಲಖನೌ: ಅಯೋಧ್ಯೆಯ ಭೂಮಿಯನ್ನು ದೊಡ್ಡ ಪ್ರಮಾಣದಲ್ಲಿ ಹೊರಗಿನವರಿಗೆ ಮಾರಾಟ ಮಾಡಲಾಗಿದೆ ಎಂದು ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್‌ ಯಾದವ್‌, ಇದರಲ್ಲಿ ಕೋಟ್ಯಂತರ ರೂಪಾಯಿ ಭೂ ಹಗರಣ ನಡೆದಿದೆ ಎಂದು ಆರೋಪಿಸಿದ್ದಾರೆ.

ಈ ಭೂ ವ್ಯವಹಾರಗಳ ಕುರಿತು ಸಮಗ್ರ ತನಿಖೆ ನಡೆಯಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಅರುಣಾಚಲ ಪ್ರದೇಶದ ಉಪ ಮುಖ್ಯಮಂತ್ರಿ, ಉತ್ತರ ಪ್ರದೇಶದ ವಿಶೇಷ ಕಾರ್ಯಪಡೆಯ ಮುಖ್ಯಸ್ಥ, ಸಂಸದ ಕರಣ್‌ಭೂಷಣ್‌  ಸೇರಿದಂತೆ ಪಕ್ಷಾತೀತವಾಗಿ ರಾಜಕಾರಣಿಗಳು ಅಯೋಧ್ಯೆಯ ಭೂಮಿಯ ಮೇಲೆ ಸವಾರಿ ಮಾಡುತ್ತಿದ್ದಾರೆ ಎಂದು ಪತ್ರಿಕೆಯೊಂದರ ವರದಿಯನ್ನು ಉಲ್ಲೇಖಿಸಿ ಅಖಿಲೇಶ್‌ ಯಾದವ್‌ ಅವರು ‘ಎಕ್ಸ್‌’ನಲ್ಲಿ ಪ್ರತಿಕ್ರಿಯಿಸಿದ್ದಾರೆ.

ADVERTISEMENT

ಬಿಜೆಪಿ ಆಡಳಿತದಲ್ಲಿ, ಅಯೋಧ್ಯೆಯ ಹೊರಗಿನವರು ಇಲ್ಲಿನ ಹೆಚ್ಚಿನ ಭೂಮಿಯನ್ನು ಖರೀದಿಸಿ, ಅದನ್ನು ಮಾರಾಟ ಮಾಡಿ ಲಾಭ ಮಾಡಿಕೊಂಡಿದ್ದಾರೆ ಎಂಬ ಸತ್ಯಾಂಶವು ಈ ವರದಿಯಿಂದ ಹೊರಬಿದ್ದಿದೆ ಎಂದು ಅವರು ಹೇಳಿದ್ದಾರೆ.

ಬಿಜೆಪಿ ಏಳು ವರ್ಷಗಳಿಂದ ಮಾರ್ಗಸೂಚಿ ದರವನ್ನು ಏರಿಸದೇ ಇರುವುದನ್ನು ಗಮನಿಸಿದರೆ, ಸ್ಥಳೀಯ ಜನರ ಮೇಲೆ ಅದು ಆರ್ಥಿಕ ಷಡ್ಯಂತ್ರ ರೂಪಿಸಿದೆ ಎಂಬುದು ಮನದಟ್ಟಾಗುತ್ತದೆ ಎಂದಿರುವ ಅವರು, ಈ ಮೂಲಕ ಕೋಟ್ಯಂತರ ರೂಪಾಯಿಯ ಭೂ ಹಗರಣ ನಡೆದಿದೆ ಎಂದು ಅವರು ದೂರಿದ್ದಾರೆ.

‘ಅಯೋಧ್ಯೆಯಲ್ಲಿ ಭೂ ಮಾಫಿಯಾದವರು ಭೂಮಿ ಖರಿಸಿದ್ದಾರೆ. ಇದರಿಂದ ಅಯೋಧ್ಯೆ– ಫೈಜಾಬಾದ್‌ ಮತ್ತು ಸುತ್ತಲಿನ ಜನರಿಗೆ ಯಾವುದೇ ಪ್ರಯೋಜನವಾಗಿಲ್ಲ’ ಎಂದು ಅವರು ವಿವರಿಸಿದ್ದಾರೆ. 

‘ಬಡವರು ಮತ್ತು ರೈತರ ಜಮೀನನ್ನು ಕಡಿಮೆ ಬೆಲೆಗೆ ಖರೀದಿಸುವುದು ಒಂದು ರೀತಿಯ ಭೂಕಬಳಿಕೆಯೇ ಆಗಿದೆ. ಅಯೋಧ್ಯೆಯಲ್ಲಿ ಅಭಿವೃದ್ಧಿ ಹೆಸರಿನಲ್ಲಿ ನಡೆದಿರುವ ಭೂ ವ್ಯವಹಾರಗಳ ಸಂಪೂರ್ಣ ತನಿಖೆ ಆಗಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.