ನವದೆಹಲಿ: ಅಯೋಧ್ಯೆಯಲ್ಲಿ ಇಂದು (ಸೋಮವಾರ) ನಡೆಯಲಿರುವ ರಾಮ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮವು ಐತಿಹಾಸಿಕ ಕ್ಷಣ. ಭಾರತೀಯ ಪರಂಪರೆ ಹಾಗೂ ಸಂಸ್ಕೃತಿಯನ್ನು ಮತ್ತಷ್ಟು ಶ್ರೀಮಂತಗೊಳಿಸುತ್ತದೆ. ದೇಶದ ಅಭಿವೃದ್ಧಿಯ ಪಥವನ್ನು ಹೊಸ ಆಯಾಮದತ್ತ ಕೊಂಡೊಯ್ಯುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರಾಮಮಂದಿರ ಉದ್ಘಾಟನೆ ಸಂಬಂಧ ಪ್ರಧಾನಿ ಮೋದಿಗೆ ಭಾನುವಾರ ಪತ್ರ ಬರೆದಿದ್ದರು. ಈ ನಡುವೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿರುವ ಪ್ರಧಾನಿ ಮೋದಿ, ರಾಮ ಮೂರ್ತಿ ಪ್ರತಿಷ್ಠಾಪನೆಯ ಈ ಶುಭ ಸಂದರ್ಭದಲ್ಲಿ ನಿಮ್ಮ ಹಾರೈಕೆಗಳಿಗೆ ಧನ್ಯವಾದಗಳು ಎಂದು ಹೇಳಿದ್ದಾರೆ.
ದೇಶದಾದ್ಯಂತ ಸಂಭ್ರಮಾಚರಣೆಯ ವಾತಾವರಣ ಮನೆ ಮಾಡಿದ್ದು, ಪುನರುತ್ಥಾನದಲ್ಲಿ ಹೊಸ ದಿಕ್ಸೂಚಿ ಆರಂಭವಾಗಿದೆ ಎಂದು ಮುರ್ಮು ಪತ್ರದಲ್ಲಿ ಉಲ್ಲೇಖಿಸಿದ್ದರು.
ಪ್ರಧಾನಿ ಮೋದಿಯನ್ನು ಅಭಿನಂದಿಸಿದ ಮುರ್ಮ
ಪ್ರಧಾನ ಮೋದಿ ಅವರು ಕೈಗೊಂಡ 11 ದಿನಗಳ ಕಠಿಣ ವ್ರತವನ್ನು ಉಲ್ಲೇಖಿಸಿರುವ ಮುರ್ಮು, ಇದು ಪವಿತ್ರ ಆಚರಣೆ ಮಾತ್ರವಲ್ಲ, ತ್ಯಾಗ ಹಾಗೂ ಭಗವಾನ್ ರಾಮನಿಗೆ ಸಲ್ಲಿಸುವ ಅತ್ಯುನ್ನತ ಆಧ್ಯಾತ್ಮಿಕ ಕ್ರಿಯೆಯಾಗಿದೆ ಎಂದು ಹೇಳಿದ್ದಾರೆ.
ದೇಶದಲ್ಲಿ ಹೊಸ ಯುಗ ಆರಂಭವಾಗುವುದನ್ನು ವೀಕ್ಷಿಸಲು ನಾವೆಲ್ಲರೂ ಅದೃಷ್ಟವಂತರು ಎಂದು ಮುರ್ಮು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.