ADVERTISEMENT

ಬಿಜೆಪಿಯು ಯಾರಿಗೂ ಭಕ್ತಿಯ ಪ್ರಮಾಣಪತ್ರ ನೀಡಲು ಸಾಧ್ಯವಿಲ್ಲ: ಸಚಿನ್ ಪೈಲಟ್

ಪಿಟಿಐ
Published 12 ಜನವರಿ 2024, 2:49 IST
Last Updated 12 ಜನವರಿ 2024, 2:49 IST
   

ರಾಯಪುರ: ನಿಜವಾದ ಭಕ್ತ ಯಾರು ಎಂಬುದರ ಬಗ್ಗೆ ಪ್ರಮಾಣಪತ್ರ ನೀಡಲು ಬಿಜೆಪಿಗೆ ಸಾಧ್ಯವಿಲ್ಲ ಎಂದು ಕಾಂಗ್ರೆಸ್‌ ನಾಯಕ ಸಚಿನ್ ಪೈಲಟ್ ಹೇಳಿದ್ದಾರೆ.

ಅಯೋಧ್ಯೆಯಲ್ಲಿ ನಿರ್ಮಾಣವಾಗಿರುವ ರಾಮ ಮಂದಿರದಲ್ಲಿ ನಡೆಯಲಿರುವ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಆಗಮಿಸುವಂತೆ ನೀಡಲಾಗಿದ್ದ ಆಹ್ವಾನವನ್ನು ಕಾಂಗ್ರೆಸ್‌ ತಿರಸ್ಕರಿಸಿರುವುದನ್ನು ಬಿಜೆಪಿ ಟೀಕಿಸಿದೆ. ಈ ಬಗ್ಗೆ ಸಚಿನ್‌ ಮಾಧ್ಯಮದವರೊಂದಿಗೆ ಮಾತನಾಡಿದ್ದಾರೆ.

ಪಕ್ಷದ ರಾಜ್ಯ ಉಸ್ತುವಾರಿಯಾಗಿ ನೇಮಕಗೊಂಡ ಬಳಿಕ ಮೊದಲ ಸಲ ಛತ್ತೀಸಗಢಕ್ಕೆ ಆಗಮಿಸಿರುವ ಸಚಿನ್‌, 'ಆಹ್ವಾನ ನೀಡಿದ್ದ ಸಂಘಟನೆ ಕಾಂಗ್ರೆಸ್‌ನ ಮೂವರನ್ನು ಸ್ವಾಗತಿಸಿತ್ತು. ಧಾರ್ಮಿಕ ಕಾರ್ಯಕ್ರಮವನ್ನು ರಾಜಕೀಯಗೊಳಿಸುವುದಕ್ಕೆ ಸಹಮತವಿಲ್ಲ ಎಂಬುದನ್ನು ನಮ್ಮ ಪಕ್ಷ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದೆ' ಎಂದಿದ್ದಾರೆ.

ADVERTISEMENT

ಧರ್ಮದ ಆಚರಣೆಯು ಪ್ರತಿಯೊಬ್ಬರ ವೈಯಕ್ತಿಕ ಆಯ್ಕೆ ಎಂದಿರುವ ಸಚಿನ್‌, 'ಯಾವುದೇ ರಾಜಕೀಯ ಪಕ್ಷವು ಭಕ್ತಿಯ ಬಗ್ಗೆ ಪ್ರಮಾಣ ಪತ್ರ ನೀಡಲು ಸಾಧ್ಯವಿಲ್ಲ. ಇಂತಹ (ಧಾರ್ಮಿಕ) ವಿಚಾರಗಳಲ್ಲಿ ಲಾಭ ಪಡೆಯಲು ನೋಡುವುದು ತಪ್ಪು ಎಂದು ನಾವು ಪರಿಗಣಿಸುತ್ತೇವೆ' ಎಂದು ಅಭಿಪ್ರಾಯಪಟ್ಟಿದ್ದಾರೆ.

'ಬಿಜೆಪಿಯು, ಯಾವುದೇ ವ್ಯಕ್ತಿಯ ಬಗ್ಗೆ ಈತ ಒಳ್ಳೆಯ ಹಿಂದೂ ಅಥವಾ ಕೆಟ್ಟ ಹಿಂದೂ ಎಂದು ಪ್ರಮಾಣಪತ್ರವನ್ನು ನೀಡಲು ಸಾಧ್ಯವಿಲ್ಲ. ಇಂತಹ ಕಾರ್ಯಕ್ರಮಗಳಿಗೆ ಯಾರ ಅನುಮತಿ ಅಥವಾ ಆಹ್ವಾನದ ಅಗತ್ಯವೇ ಇಲ್ಲ' ಎಂದು ಪ್ರತಿಪಾದಿಸಿದ್ದಾರೆ.

'ಬಿಜೆಪಿ ಆಡಳಿತದಲ್ಲಿ ಹೆಚ್ಚಿದ ಸಂಕಷ್ಟ'
ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೇರಿದ ನಂತರ ಕಳೆದ 10 ವರ್ಷಗಳಲ್ಲಿ ಶ್ರೀಮಂತರು ಮತ್ತು ಬಡವರ ನಡುವಿನ ಅಂತರ ಹೆಚ್ಚಾಗಿದೆ. ದೇಶದ ಆಸ್ತಿಗಳನ್ನು ಖಾಸಗಿಯವರ ಕೈಗೆ ಒಪ್ಪಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ದೇಶದ ರೈತರ ವಿರುದ್ಧ ಮೂರು ಕೃಷಿ ಕಾನೂನುಗಳನ್ನು ತರಲಾಯಿತು. ಅಗ್ನಿವೀರ್ ಸೇನಾ ನೇಮಕಾತಿ ಹೆಸರಿನಲ್ಲಿ ಯುವಕರನ್ನು ವಂಚಿಸಲಾಗಿದೆ. ನೋಟು ರದ್ದತಿ ಮತ್ತು ಜಿಎಸ್‌ಟಿಯಿಂದಾಗಿ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಕೇಂದ್ರದ ವಿರುದ್ಧ ಕಿಡಿಕಾರಿದ್ದಾರೆ.

'ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಮತ'
ಕಾಂಗ್ರೆಸ್‌ ಪಕ್ಷವು ಜನರ ಸಮಸ್ಯೆಗಳಿಗಾಗಿ ಹೋರಾಟ ನಡೆಸುತ್ತಿದೆ. ಆದರೆ, ಬಿಜೆಪಿಯು ಭಾವನಾತ್ಮಕ ವಿಚಾರಗಳ ಆಧಾರದಲ್ಲಿ ಮತಗಳಿಸಲು ನೋಡುತ್ತಿದೆ. ಹಾಗಾಗಿ, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆಲ್ಲಲಿದೆ ಎಂದು ಸಚಿನ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

2023ರ ನವೆಂಬರ್‌ನಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಎದುರು ಸೋಲು ಕಂಡಿದ್ದರೂ, ಛತ್ತೀಸಗಢದಲ್ಲಿ ಕಾಂಗ್ರೆಸ್‌ನ ಉತ್ಸಾಹ ಕಡಿಮೆಯಾಗಿಲ್ಲ ಎಂದು ಹೇಳಿಕೊಂಡಿದ್ದಾರೆ.

'ಕಾಂಗ್ರೆಸ್‌ ಪಕ್ಷವು ಪ್ರತಿಯೊಂದು ತಾಲ್ಲೂಕು ಮತ್ತು ವಿಭಾಗಗಳಲ್ಲಿ ಇದೆ. ನಾವು ವಿಧಾನಸಭೆ ಚುನಾವಣೆಯಲ್ಲಿ ಸೋತಿರಬಹುದು, ಆದರೆ, ಲೋಕಸಭೆಯಲ್ಲಿ ಉತ್ತಮ ಪ್ರದರ್ಶನ ನೀಡಲಿದ್ದೇವೆ. ಕಾಂಗ್ರೆಸ್‌ ಕಾರ್ಯಕರ್ತರು ಮತ್ತು ನಾಯಕರು ಸಂಪೂರ್ಣ ಸಾಮರ್ಥ್ಯದೊಂದಿಗೆ ಹೋರಾಡುವ ವಾಗ್ದಾನ ನೀಡಿದ್ದಾರೆ' ಎಂದೂ ಹೇಳಿದ್ದಾರೆ.

ಕಾಂಗ್ರೆಸ್‌ ನೇತೃತ್ವದ ಇಂಡಿಯಾ ಮೈತ್ರಕೂಟವು ಬಿಜೆಪಿ ಪಾಲಿಗೆ ಕಳವಳವನ್ನುಂಟುಮಾಡಿದೆ. ಏಕೆಂದರೆ, ಈ ಮೈತ್ರಿಕೂಟದಲ್ಲಿರುವ ಪಕ್ಷಗಳು 2019ರ ಲೋಕಸಭೆ ಚುನಾವಣೆಯಲ್ಲಿ ಮೂರನೇ ಎರಡರಷ್ಟು ಮತ ಗಳಿಸಿದ್ದವು ಎಂದು ಪ್ರತಿಪಾದಿಸಿದ್ದಾರೆ.

ಆಹ್ವಾನ ತಿರಸ್ಕರಿಸಿದ್ದ ಕಾಂಗ್ರೆಸ್‌
ಅಯೋಧ್ಯೆಯಲ್ಲಿ ಜನವರಿ 22ರಂದು ನಡೆಯಲಿರುವ ಕಾರ್ಯಕ್ರಮಕ್ಕೆ ಆಗಮಿಸುವಂತೆ ವಿಶ್ವ ಹಿಂದೂ ಪರಿಷತ್‌ (ವಿಎಚ್‌ಪಿ) ನೀಡಿದ್ದ ಆಹ್ವಾನವನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪಕ್ಷದ ನಾಯಕರಾದ ಸೋನಿಯಾ ಗಾಂಧಿ ಮತ್ತು ಅಧೀರ್ ರಂಜನ್‌ ಚೌಧರಿ ಅವರು ಬುಧವಾರ ತಿರಸ್ಕರಿಸಿದ್ದರು.

ಚುನಾವಣಾ ಲಾಭಕ್ಕಾಗಿ ಬಿಜೆಪಿ ಮತ್ತು ಆರ್‌ಎಸ್‌ಎಸ್‌, ಈ ಕಾರ್ಯಕ್ರಮವನ್ನು 'ರಾಜಕೀಯ ಯೋಜನೆ'ಯಾಗಿ ಮಾಡಿಕೊಂಡಿವೆ ಎಂದು ಕಾಂಗ್ರೆಸ್‌ ಆರೋಪಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.