ಅಯೋಧ್ಯೆ: ಖಲಿಸ್ತಾನಿ ಪ್ರತ್ಯೇಕತಾವಾದಿ ನಾಯಕ ಗುರುಪತ್ವಂತ್ ಸಿಂಗ್ ಪನ್ನೂ ಅಯೋಧ್ಯೆ ದೇಗುಲದ ಮೇಲೆ ದಾಳಿಮಾಡುವುದಾಗಿ ವಿಡಿಯೊ ಬೆದರಿಕೆ ಹಾಕಿರುವ ಹಿನ್ನೆಲೆಯಲ್ಲಿ ರಾಮಮಂದಿರ ವ್ಯಾಪ್ತಿಯಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ.
ನವೆಂಬರ್ 16–17ರಂದು ದಾಳಿ ನಡೆಸಲಾಗುವುದು ಎಂದು ಪನ್ನೂ ವಿಡಿಯೊದಲ್ಲಿ ಎಚ್ಚರಿಸಿದ್ದ. ನ.18ರಂದು ದೇಗುಲದಲ್ಲಿ ‘ರಾಮ ವಿವಾಹ’ ಕಾರ್ಯಕ್ರಮ ನಡೆಯಲಿದ್ದು, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರೂ ಭಾಗವಹಿಸುವರು.
ಬೆದರಿಕೆ ಹಿನ್ನೆಲೆಯಲ್ಲಿ ಹೆಚ್ಚಿನ ಸಿಬ್ಬಂದಿ ನಿಯೋಜಿಸಲಾಗಿದೆ. ಭಯೋತ್ಪಾದನಾ ನಿಗ್ರಹ ಪಡೆ (ಎಟಿಎಸ್) ಸಿಬ್ಬಂದಿಯನ್ನು ದೇಗುಲದ ಆಯಕಟ್ಟಿನ ಜಾಗದಲ್ಲಿ ನಿಯೋಜಿಸಲಾಗಿದೆ. ಕಣ್ಗಾವಲಿಡಲು ಸಿ.ಸಿ.ಟಿ.ವಿ ಕ್ಯಾಮೆರಾಗಳ ಜೊತೆಗೆ ಡ್ರೋನ್ ಕ್ಯಾಮೆರಾಗಳ ನೆರವನ್ನು ಪಡೆಯಲಾಗಿದೆ.
ಗುಪ್ತದಳ, ಭಯೋತ್ಪಾದನೆ ನಿಗ್ರಹ ಪಡೆ, ಬಾಂಬ್ ಶೋಧ ತಂಡಗಳಿಗೆ ಎಚ್ಚರಿಕೆಯಿಂದ ಇರಲು ಸೂಚಿಸಿದೆ. ಮಾಧ್ಯಮಗಳ ವರದಿ ಹಿನ್ನೆಲೆಯಲ್ಲಿ ನಾವು ಭದ್ರತೆ ಬಿಗಿಗೊಳಿಸಿದ್ದೇವೆ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಆರ್.ಕೆ.ನಯ್ಯರ್ ಅವರು ಸುದ್ದಿಸಂಸ್ಥೆಗೆ ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.