ನವದೆಹಲಿ: ಉತ್ತರ ಪ್ರದೇಶದ ಸರಯೂ ನದಿಯ ದಡದಲ್ಲಿರುವ ರಾಮನಗರಿ ಅಯೋಧ್ಯೆಯಲ್ಲಿ ಇಂದು (ಬುಧವಾರ) ಅದ್ಭುತ ದೀಪೋತ್ಸವವನ್ನು ಆಚರಿಸಲಾಗಿದೆ.
ಹೆಚ್ಚಿನ ಜನರು ಏಕಕಾಲದಲ್ಲಿ ಆರತಿ ಬೆಳಗುವ ಮೂಲಕ ಎರಡು ‘ಗಿನ್ನಿಸ್ ವಿಶ್ವ ದಾಖಲೆ’ಯನ್ನು ನಿರ್ಮಿಸಿದೆ. ಈ ಮೂಲಕ ನಗರದ ಹಿಂದಿನ 22.23 ಲಕ್ಷ ದೀಪಗಳ ದಾಖಲೆಯನ್ನು ಮುರಿದಿದೆ.
25 ಲಕ್ಷಕ್ಕೂ ಹೆಚ್ಚು ಮಣ್ಣಿನ ದೀಪಗಳನ್ನು ಒಟ್ಟಿಗೆ ಬೆಳಗಿಸುವುದರೊಂದಿಗೆ ಮತ್ತು 1,121 ವೇದಾಚಾರ್ಯರು (ಧಾರ್ಮಿಕ ಶಿಕ್ಷಕರು) ಏಕಕಾಲದಲ್ಲಿ ಆರತಿ ಮಾಡುವ ಮೂಲಕ ಎರಡು ದಾಖಲೆಗಳನ್ನು ನಿರ್ಮಿಸಿದ್ದಾರೆ.
ಗಿನ್ನೆಸ್ ವಿಶ್ವ ದಾಖಲೆಗಳ ತೀರ್ಪುಗಾರ ಪ್ರವೀಣ್ ಪಟೇಲ್ ಅವರು ಗಿನ್ನೆಸ್ ಸಲಹೆಗಾರ ನಿಶ್ಚಲ್ ಭರೋತ್ ಅವರೊಂದಿಗೆ ಅಯೋಧ್ಯೆಗೆ ಭೇಟಿ ನೀಡಿದ್ದರು. ಬುಧವಾರ ಸಂಜೆ ಹೊಸ ದಾಖಲೆಗಳನ್ನು ಪ್ರಕಟಿಸಿದ್ದಾರೆ.
ಹೆಚ್ಚಿನ ಜನರು ಏಕಕಾಲದಲ್ಲಿ ಆರತಿ ಬೆಳಗುವುದು ಮತ್ತು ದೀಪಗಳ ದೊಡ್ಡ ಪ್ರದರ್ಶನಕ್ಕಾಗಿ ಮಾರ್ಗಸೂಚಿಗಳ ಅನ್ವಯ ಒಂದಲ್ಲ ಎರಡಲ್ಲ ಗಿನ್ನೆಸ್ ವರ್ಲ್ಡ್ ರೆಕಾರ್ಡ್ ಪ್ರಶಸ್ತಿಗಳನ್ನು ಘೋಷಿಸುತ್ತಿರುವುದು ಅತ್ಯಂತ ಸಂತೋಷವಾಗಿದೆ ಎಂದು ಪಟೇಲ್ ಹೇಳಿದ್ದಾರೆ.
ಅಯೋಧ್ಯೆಯಲ್ಲಿ ದೀಪೋತ್ಸವ ಸಂಪ್ರದಾಯ 2017ರಲ್ಲಿ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರ ರಚನೆಯೊಂದಿಗೆ ಪ್ರಾರಂಭವಾಯಿತು. 2017ರಲ್ಲಿ 51 ಸಾವಿರ ದೀಪಗಳನ್ನು ಬೆಳಗುವ ಮೂಲಕ ಪ್ರಾರಂಭವಾಗಿ, 2019ರಲ್ಲಿ 4.10 ಲಕ್ಷಕ್ಕೆ ಏರಿತು. 2020ರಲ್ಲಿ 6 ಲಕ್ಷಕ್ಕೂ ಹೆಚ್ಚು ಮತ್ತು 2021ರಲ್ಲಿ 9 ಲಕ್ಷಕ್ಕೂ ಹೆಚ್ಚು ದೀಪ ಬೆಳಗಿ ಗಿನ್ನೆಸ್ ವಿಶ್ವ ದಾಖಲೆ ಬರೆದಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.