ADVERTISEMENT

ರಾಮನ ಪರ ಸುಗ್ರೀವಾಜ್ಞೆ

ಡಿಸೆಂಬರ್‌ 11ರ ಬಳಿಕ ನಿರ್ಧಾರ ಪ್ರಕಟ: ಸುಳಿವು ಕೊಟ್ಟ ಧರ್ಮಸಭೆ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2018, 20:43 IST
Last Updated 25 ನವೆಂಬರ್ 2018, 20:43 IST
ಅಯೋಧ್ಯೆಯಲ್ಲಿ ಭಾನುವಾರ ವಿಶ್ವ ಹಿಂದೂ ಪರಿಷತ್‌ ಏರ್ಪಡಿಸಿದ್ದ ‘ಧರ್ಮಸಭಾ’ ಕಾರ್ಯಕ್ರಮದಲ್ಲಿ ಘೋಷಣೆ ಕೂಗಿದ ಮಹಿಳೆಯರು – ಪಿಟಿಐ ಚಿತ್ರ
ಅಯೋಧ್ಯೆಯಲ್ಲಿ ಭಾನುವಾರ ವಿಶ್ವ ಹಿಂದೂ ಪರಿಷತ್‌ ಏರ್ಪಡಿಸಿದ್ದ ‘ಧರ್ಮಸಭಾ’ ಕಾರ್ಯಕ್ರಮದಲ್ಲಿ ಘೋಷಣೆ ಕೂಗಿದ ಮಹಿಳೆಯರು – ಪಿಟಿಐ ಚಿತ್ರ   

ಅಯೋಧ್ಯೆ: ವಿಶ್ವ ಹಿಂದೂ ಪರಿಷತ್‌ (ವಿಎಚ್‌ಪಿ) ಆಯೋಜಿಸಿದ್ದ, ದೇಶದಾದ್ಯಂತ ಭಾರಿ ಸಂಚಲನ ಮೂಡಿಸಿದ್ದ ‘ಧರ್ಮ ಸಭೆ’ಯು ರಾಮ ಮಂದಿರ ನಿರ್ಮಾಣಕ್ಕೆ ಬೇಕಾದ ಕ್ರಮ ಕೈಗೊಳ್ಳುವುದಕ್ಕೆ ಸರ್ಕಾರಕ್ಕೆ ಅಂತಿಮ ಎಚ್ಚರಿಕೆ ರವಾನಿಸುವುದರೊಂದಿಗೆ ಸಮಾಪನಗೊಂಡಿತು.

ಧರ್ಮ ಸಭೆಯಲ್ಲಿ ಯಾವುದೇ ಲಿಖಿತ ನಿರ್ಣಯ ಕೈಗೊಳ್ಳಲಾಗಿಲ್ಲ. ಆದರೆ, ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರವು ಡಿಸೆಂಬರ್‌ 11ರ ಬಳಿಕ ಮಂದಿರ ನಿರ್ಮಾಣಕ್ಕಾಗಿ ಸುಗ್ರೀವಾಜ್ಞೆ ಜಾರಿ ಮಾಡಬಹುದು ಎಂಬ ಸುಳಿವನ್ನು ನೀಡಿದೆ. ಮಂದಿರ ನಿರ್ಮಾಣ ಆರಂಭಿಸುವ ದಿನವನ್ನು ಘೋಷಿಸಲಾಗುವುದು ಎಂದು ವಿಎಚ್‌ಪಿ ಮುಖಂಡರು ಹಿಂದೆ ಹೇಳಿದ್ದರು. ಆದರೆ, ಧರ್ಮಸಭೆ ಅಂತಹ ಯಾವುದೇ ದಿನಾಂಕ ಪ್ರಕಟಿಸಲಿಲ್ಲ.

ಸಾವಿರಾರು ರಾಮಭಕ್ತರನ್ನು ಉದ್ದೇಶಿಸಿ ಸಾಧು–ಸಂತರು, ಮುಖಂಡರು ಮಾತನಾಡಿದರು. ಒಬ್ಬೊಬ್ಬರೂ ಸುಪ್ರೀಂ ಕೋರ್ಟ್‌ ನಿರ್ಧಾರವನ್ನು ಖಂಡಿಸಿದರು. ಮಂದಿರ ನಿರ್ಮಾಣ ವಿಚಾರದಲ್ಲಿ ಬಿಜೆಪಿ ತೋರುತ್ತಿರುವ ಅಸಡ್ಡೆಯನ್ನು ಟೀಕಿಸಿದರು. ಮಂದಿರ ಚಳವಳಿಯು ಇಡೀ ದೇಶವನ್ನು ವ್ಯಾಪಿಸಲಿದೆ ಎಂಬ ಎಚ್ಚರಿಕೆ ಕೊಟ್ಟರು.

ADVERTISEMENT

ಮಂದಿರ ನಿರ್ಮಾಣ ಆಗದಿದ್ದರೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ರಾಮಭಕ್ತರು ಮೂಲೆಗುಂಪು ಮಾಡಲಿದ್ದಾರೆ. ರಾಮ ಮಂದಿರ ಚಳವಳಿಯೇ ಬಿಜೆಪಿಯನ್ನು ಬೆಳೆಸಿದೆ ಎಂಬುದನ್ನು ಆ ಪಕ್ಷ ಮರೆಯಬಾರದು ಎಂದು ಮಹಾಂತ ಪರಮಾನಂದ ದಾಸ ಎಚ್ಚರಿಸಿದರು.

ಹಿಂದೂಗಳಿಗೆ ಬೇಕಿರುವುದು ರಾಮನ ಜನ್ಮಸ್ಥಳ ಮಾತ್ರ ಅಲ್ಲ. ವಿವಾದಿತ ನಿವೇಶನ ಪೂರ್ಣವಾಗಿ ಬೇಕು. ಸುನ್ನಿ ವಕ್ಫ್ ಮಂಡಳಿಯು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಅರ್ಜಿಯನ್ನು ವಾಪಸ್‌ ಪಡೆಯಬೇಕು ಎಂದು ವಿಎಚ್‌ಪಿ ಅಂತರರಾಷ್ಟ್ರೀಯ ಉಪಾಧ್ಯಕ್ಷ ಚಂಪತ್‌ ರಾಯ್‌ ಹೇಳಿದರು.

ಸುಪ್ರೀಂ ಕೋರ್ಟ್‌ನ ಬಗ್ಗೆ ಭಾರಿ ಗೌರವ ಇದೆ. ಆದರೆ, ಧರ್ಮದ ವಿಚಾರಗಳನ್ನು ನ್ಯಾಯಾಲಯದ ಮೂಲಕ ಪರಿಹರಿಸಿಕೊಳ್ಳುವುದು ಸಾಧ್ಯವಿಲ್ಲ ಎಂದು ಕೆಲವು ಸಂತರು ಅಭಿಪ್ರಾಯಪಟ್ಟರು.

**

ಹಿರಿಯ ಸಚಿವರ ಭರವಸೆ

ರಾಮ ಮಂದಿರ ವಿಚಾರದಲ್ಲಿ ಕೇಂದ್ರ ಸರ್ಕಾರವು ಗಟ್ಟಿ ಕ್ರಮ ಕೈಗೊಳ್ಳಲಿದೆ ಎಂದು ಕೇಂದ್ರದ ಅಧಿಕಾರ ಸರಣಿಯಲ್ಲಿ ಎರಡನೇ ಸ್ಥಾನದಲ್ಲಿರುವ ಸಚಿವರೊಬ್ಬರು ತಮಗೆ ಭರವಸೆ ನೀಡಿದ್ದಾರೆ ಎಂದು ಪ್ರಮುಖ ಸಂತ ಸ್ವಾಮಿ ರಾಮಭದ್ರಾಚಾರ್ಯ ಹೇಳಿದರು.

‘ಡಿಸೆಂಬರ್‌ 11ರ ಬಳಿಕ ಈ ನಿರ್ಧಾರ ಪ್ರಕಟವಾಗಲಿದೆ. ಬಾಬರಿ ಮಸೀದಿ ಧ್ವಂಸವಾದ ಡಿಸೆಂಬರ್‌ ಆರರಂದೇ ಈ ನಿರ್ಧಾರ ಘೋಷಿಸುವ ಯೋಚನೆ ಇತ್ತು. ಆದರೆ, ರಾಜ್ಯ ವಿಧಾನಸಭೆಗಳ ಚುನಾವಣೆಯಿಂದಾಗಿ ನೀತಿ ಸಂಹಿತೆ ಜಾರಿಯಲ್ಲಿದೆ. ಹಾಗಾಗಿ ಡಿಸೆಂಬರ್‌ 11ರ ಬಳಿಕ ಪ್ರಕಟಿಸಲು ನಿರ್ಧರಿಸಲಾಗಿದೆ’ ಎಂದು ಸ್ವಾಮಿ ಹೇಳಿದರು. ಆದರೆ, ಭರವಸೆ ಕೊಟ್ಟ ಸಚಿವ ಯಾರು ಎಂಬುದನ್ನು ಅವರು ತಿಳಿಸಲಿಲ್ಲ.

**

ಒಂದು ಮಸೀದಿಯೂ ಉಳಿಯದು...

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಆಗದೇ ಇದ್ದರೆ ದೇಶದಲ್ಲಿರುವ ಎಲ್ಲ ಮಸೀದಿಗಳನ್ನು ಧ್ವಂಸ ಮಾಡಲಾಗುವುದು ಎಂದು ಕೆಲವು ಭಾಷಣಕಾರರು ವ್ಯಗ್ರರಾದರು. ಮಂದಿರ ನಿರ್ಮಿಸಿ ‘ಅಮರರಾಗಿ’ ಎಂದು ಸಂತರೊಬ್ಬರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲಹೆ ಕೊಟ್ಟರು.

ರಾಮ ಮಂದಿರ ನಿರ್ಮಾಣಕ್ಕೆ ಅಬುಧಾಬಿಯ ದೊರೆಯ ಕೈಯಲ್ಲಿ ಶಿಲಾನ್ಯಾಸ ಮಾಡಿಸಿ ಎಂದು ಮತ್ತೊಬ್ಬರು ಹೇಳಿದರು. ‘ಅಬುಧಾಬಿಯಲ್ಲಿ ದೇವಾಲಯ ನಿರ್ಮಾಣವಾಗುವಂತೆ ಮಾಡಲು ಮೋದಿಗೆ ಸಾಧ್ಯವಿದೆ ಎಂದಾದರೆ, ಅಲ್ಲಿನ ದೊರೆಯ ಕೈಯಲ್ಲಿ ಶಿಲಾನ್ಯಾಸ ಮಾಡಿಸುವುದೂ ಸಾಧ್ಯವಾಗುತ್ತದೆ’ ಎಂದು ಅವರು ಅಭಿಪ್ರಾಯಪಟ್ಟರು.

**

ಧರ್ಮಸಭೆಯತ್ತ ಸುಳಿಯದ ಸ್ಥಳೀಯರು!

ಲಖನೌ: ಎರಡು ಲಕ್ಷಕ್ಕೂ ಹೆಚ್ಚು ರಾಮಭಕ್ತರು ಭಾಗವಹಿಸುತ್ತಾರೆ ಎಂದು ನಿರೀಕ್ಷಿಸಲಾಗಿದ್ದ ಧರ್ಮಸಭೆ ಸಭಾಂಗಣ ಖಾಲಿ, ಖಾಲಿಯಾಗಿರುವ ದೃಶ್ಯ ಭಾನುವಾರ ಕಂಡು ಬಂತು.

ರಾಷ್ಟ್ರದ ಗಮನ ಸೆಳೆದಿದ್ದ ಧರ್ಮಸಭೆಯತ್ತ ಸ್ಥಳೀಯರು ಯಾರೂ ಸುಳಿಯಲಿಲ್ಲ. ಹೊರಗಿನಿಂದ ಬಂದವರೇ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಇದು ಭಾರಿ ಚರ್ಚೆಗೆ ಗ್ರಾಸವಾಗಿದೆ.

ಸಮಾರಂಭದ ಬಗ್ಗೆ ಹೆಚ್ಚಿನ ಆಸಕ್ತಿ ತೋರದ ಸ್ಥಳೀಯರು ಎಂದಿನಂತೆ ತಮ್ಮ ಕಾರ್ಯಗಳಲ್ಲಿ ಮಗ್ನರಾಗಿದ್ದರು.

ಬಿಜೆಪಿ ಶಾಸಕರು ಮತ್ತು ಸಂಸದರು ನೂರಾರು ಬಸ್‌ ಮತ್ತು ಇತರ ವಾಹನಗಳಲ್ಲಿ ಜನರನ್ನು ಕರೆ ತಂದಿದ್ದರು. ಅದರ ಹೊರತಾಗಿಯೂ ಸಮಾರಂಭ ನಡೆಯುತ್ತಿದ್ದ ಮೈದಾನ ಖಾಲಿಯಾಗಿತ್ತು.

‘ಈ ಹಿಂದೆ ಇಂತಹ ಬಹಳ ಕಾರ್ಯಕ್ರಮ ನೋಡಿದ್ದೇವೆ. ಯಾರಿಗೂ ರಾಮ ಮಂದಿರದ ಬಗ್ಗೆ ನೈಜ ಕಾಳಜಿ ಇಲ್ಲ. ಇದೆಲ್ಲವೂ ರಾಜಕೀಯ ಲಾಭಕ್ಕಾಗಿ ನಡೆಯುತ್ತಿರುವ ಪ್ರಹಸನ’ ಎನ್ನುವುದು ಬಹುತೇಕ ಸ್ಥಳೀಯರ ಅಭಿಪ್ರಾಯವಾಗಿದೆ.

**

ಸಮಾರಂಭಕ್ಕೆ ಬಂದವರೆಷ್ಟು?

ಸಭೆಯಲ್ಲಿ ಭಾಗವಹಿಸಿದ್ದ ಜನಸಮೂಹದ ಬಗ್ಗೆ ಆಯೋಜಕರು ಮತ್ತು ಪೊಲೀಸರು ನೀಡಿರುವ ಅಂಕಿ, ಸಂಖ್ಯೆಗಳು ವಿಭಿನ್ನವಾಗಿವೆ.

ಎರಡು ಲಕ್ಷಕ್ಕೂ ಹೆಚ್ಚು ರಾಮಭಕ್ತರು ಭಾಗವಹಿಸಿದ್ದರು ಎಂದು ವಿಶ್ವ ಹಿಂದೂ ಪರಿಷತ್‌ (ವಿಎಚ್‌ಪಿ) ಹೇಳಿಕೊಂಡಿದೆ. ಆದರೆ, ಆ ಸಂಖ್ಯೆ 70–75 ಸಾವಿರ ದಾಟಿಲ್ಲ. ಹೊರಗಿನಿಂದ ಬಂದವರ ಸಂಖ್ಯೆಯೇ 25 ಸಾವಿರದಷ್ಟಿತ್ತು ಎನ್ನುವುದು ಪೊಲೀಸರ ವಾದ.

ಸಮಾರಂಭ ನಡೆದ ಅಯೋಧ್ಯೆಯ ಬಡಾ ಭಕ್ತಮಲ್‌ ಬಗಿಯಾ ಮೈದಾನದಲ್ಲಿ ಟೆಂಟ್‌ ಇಲ್ಲದ ಕಾರಣ ಬಿಸಿಲಿನಿಂದ ಧಗೆಯಿಂದ ಪಾರಾಗಲು ಜನರು ಮೈದಾನದ ಹೊರಗಡೆ ಆಶ್ರಯ ಪಡೆದಿದ್ದರು ಎಂದು ವಿಎಚ್‌ಪಿ ಹೇಳಿದೆ.

ಐದು ಸಾವಿರಕ್ಕೂ ಹೆಚ್ಚು ಮುಸ್ಲಿಮರು ಧರ್ಮಸಭೆಯಲ್ಲಿ ಭಾಗವಹಿಸಿದ್ದರು ಎಂದು ವಿಎಚ್‌ಪಿ ಹೇಳಿದೆ. ಆದರೆ, ಹೆಚ್ಚಿನ ಮುಸ್ಲಿಮರು ಅಲ್ಲಿ ಕಾಣಲಿಲ್ಲ.

**

ಊರು ತೊರೆದ ಮುಸ್ಲಿಮರು

ಅಯೋಧ್ಯೆಗೆ ಬಂದ ರಾಮಭಕ್ತರ ಮೇಲೆ ಮುಸ್ಲಿಮರು ಹೂಮಳೆಗರೆದು ಸ್ವಾಗತ ನೀಡಿದ್ದಾರೆ. ಇದರ ಹೊರತಾಗಿಯೂ ಸ್ಥಳೀಯ ಕೆಲವು ಮುಸ್ಲಿಂ ಕುಟುಂಬಗಳು ಅಯೋಧ್ಯೆಯನ್ನು ತೊರೆದಿವೆ.

ಸ್ಥಳೀಯರಿಂದ ತಮಗೆ ಯಾವುದೇ ಅಪಾಯ ಇಲ್ಲ ಎಂದು ವಿಶ್ವಾಸದಲ್ಲಿರುವ ಮುಸ್ಲಿಮರಿಗೆ ಹೊರಗಿನಿಂದ ಬರುವವರ ಬಗ್ಗೆ ಆ ನಂಬಿಕೆ ಇಲ್ಲ.

ಹೊರಗಿನಿಂದ ಬರುವ ಕೆಲವು ಕಿಡಿಗೇಡಿಗಳು ತೊಂದರೆ ನೀಡುವ ಭೀತಿಯಿಂದ ಮುಸ್ಲಿಮರು ಕುಟುಂಬ ಸದಸ್ಯರ ಸಮೇತ ನಗರ ತೊರೆದಿದ್ದಾರೆ ಎಂದು ಹೇಳಲಾಗಿದೆ.

ಮುಸ್ಲಿಮರು ನಗರ ತೊರೆದಿರುವ ಸುದ್ದಿಯನ್ನು ಸುಳ್ಳು ಎಂದು ಜಿಲ್ಲಾಡಳಿತ ತಳ್ಳಿ ಹಾಕಿದೆ. ಭದ್ರತಾ ವ್ಯವಸ್ಥೆಯ ಬಗ್ಗೆ ಬಾಬರಿ ಮಸೀದಿ ಪ್ರಕರಣದ ಫಿರ್ಯಾದುದಾರು ಇಕ್ಬಾಲ್‌ ಅನ್ಸಾರಿ ತೃಪ್ತಿ ವ್ಯಕ್ತಪಡಿಸಿದ್ದಾರೆ.

**

ಕಾಂಗ್ರೆಸ್‌ದ ಸಿಜೆಐಗೆ ಬೆದರಿಕೆ: ಮೋದಿ

ಅಲ್ವಾರ್:ಕಾಂಗ್ರೆಸ್‌ನ ಬೆದರಿಕೆ ಕಾರಣದಿಂದಲೇ ರಾಮಜನ್ಮಭೂಮಿ ವಿವಾದದ ವಿಚಾರಣೆ ವಿಳಂಬವಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ.

‘ಚುನಾವಣೆ ಮುಗಿಯುವವರೆಗೂ ವಿಚಾರಣೆ ನಡೆಸಬೇಡಿ ಎಂದು ಕಾಂಗ್ರೆಸ್ ನಾಯಕರೊಬ್ಬರು ಸುಪ್ರೀಂ ಕೋರ್ಟ್‌ಗೆ ನೇರವಾಗಿ ಹೇಳುತ್ತಾರೆ. ಅವರ ಮಾತನ್ನು ಕೇಳದಿದ್ದರೆ, ಮುಖ್ಯ ನ್ಯಾಯಮೂರ್ತಿ ವಿರುದ್ಧ ದೋಷಾರೋಪ ಹೊರಿಸುವ ಬೆದರಿಕೆ ಹಾಕುತ್ತಾರೆ. ಆದರೆ ಯಾವುದೇ ಬೆದರಿಕೆಗೂ ಮಣಿಯದೆ ನ್ಯಾಯಾಂಗವು ಕೆಲಸ ಮಾಡಬೇಕು ಎಂದು ನಾನು ಆಗ್ರಹಿಸುತ್ತಿದ್ದೇನೆ’ ಎಂದು ಮೋದಿ ಹೇಳಿದ್ದಾರೆ.

**

**

ರಾಮ ಮಂದಿರ ನಿರ್ಮಾಣದ ಬಗ್ಗೆ ಸಮಾಜದ ವಿವಿಧ ವರ್ಗಗಳ ಜನರಲ್ಲಿ ಎಷ್ಟೊಂದು ಆಕಾಂಕ್ಷೆ ಇದೆ ಎಂಬುದಕ್ಕೆ ಇಲ್ಲಿ ಸೇರಿರುವ ಜನಸ್ತೋಮವೇ ಸಾಕ್ಷಿ.

-ನೃತ್ಯ ಗೋಪಾಲದಾಸ, ರಾಮ ಜನ್ಮಭೂಮಿ ನ್ಯಾಸದ ಅಧ್ಯಕ್ಷ

**

2019ರಲ್ಲಿ ಪ್ರಯಾಗರಾಜ್‌ನಲ್ಲಿ ನಡೆಯಲಿರುವ ಕುಂಭಮೇಳದಲ್ಲಿ ಮಂದಿರ ನಿರ್ಮಾಣದ ದಿನಾಂಕ ಪ್ರಕಟಿಸುತ್ತೇವೆ. ಇದು ಕೆಲವೇ ದಿನಗಳ ವಿಚಾರ, ಎಲ್ಲರೂ ಸಹನೆ ತಂದುಕೊಳ್ಳಬೇಕು.

-ರಾಮ್‌ಜಿ ದಾಸ್‌, ನಿರ್ಮೋಹಿ ಅಖಾಡದ ಮುಖಂಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.