ADVERTISEMENT

ಅಯೋಧ್ಯೆ | ಮಳೆಗೆ ಗುಂಡಿ ಬಿದ್ದ ರಾಮಪಥ: 6 ಅಧಿಕಾರಿಗಳು ಅಮಾನತು

ಪಿಟಿಐ
Published 29 ಜೂನ್ 2024, 7:32 IST
Last Updated 29 ಜೂನ್ 2024, 7:32 IST
<div class="paragraphs"><p>ರಾಮಪಥ ಜಲಾವೃತಗೊಂಡಿರುವುದು</p></div>

ರಾಮಪಥ ಜಲಾವೃತಗೊಂಡಿರುವುದು

   

– ಪಿಟಿಐ ಚಿತ್ರ

ಅಯೋಧ್ಯೆ: ಇಲ್ಲಿ ಹೊಸದಾಗಿ ನಿರ್ಮಿಸಲಾದ ರಾಮಪಥದಲ್ಲಿ ಗುಂಡಿ ಬಿದ್ದ ಹಾಗೂ ಜಲಾವೃತಗೊಂಡ ಪ್ರಕರಣ ಸಂಬಂಧ ಪಾಲಿಕೆಯ ಆರು ಅಧಿಕಾರಿಗಳನ್ನು ಉತ್ತರ ಪ್ರದೇಶ ಸರ್ಕಾರ ಅಮಾನತುಗೊಳಿಸಿದೆ. ನಿರ್ಲಕ್ಷ್ಯದ ಕಾರಣ ನೀಡಿ ಅಮಾನತು ಮಾಡಲಾಗಿದೆ.

ADVERTISEMENT

ಜೂನ್ 23 ಹಾಗೂ 26ರಂದು ಸುರಿದ ಮಳೆಗೆ ರಾಮಪಥವು ಜಲಾವೃತಗೊಂಡಿತ್ತು. ಅಕ್ಕಪಕ್ಕದ ಮನೆಗಳಿಗೂ ನೀರು ನುಗ್ಗಿತ್ತು. ರಾಮ ಮಂದಿರಕ್ಕೆ ಸಂ‍ಪರ್ಕ ಕಲ್ಪಿಸುವ 14 ಕೀ.ಮಿ ಉದ್ದದ ರಸ್ತೆ ಇದಾಗಿದ್ದು, ಮಳೆಗೆ 12ಕ್ಕೂ ಹೆಚ್ಚು ಕಡೆಗಳಲ್ಲಿ ಗುಂಡಿ ಬಿದ್ದಿತ್ತು.

ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ಧ್ರುವ್ ಅಗರ್ವಾಲ್, ಸಹಾಯಕ ಎಂಜಿನಿಯರ್ ಅನುಜ್ ದೇಶ್ವಾಲ್, ಕಿರಿಯ ಎಂಜಿನಿಯರ್ ಪ್ರಭಾತ್ ಪಾಂಡೆ ಮತ್ತು ಉತ್ತರ ಪ್ರದೇಶ ಜಲ ನಿಗಮದ ಕಾರ್ಯನಿರ್ವಾಹಕ ಎಂಜಿನಿಯರ್ ಆನಂದ್ ಕುಮಾರ್ ದುಬೆ, ಸಹಾಯಕ ಎಂಜಿನಿಯರ್ ರಾಜೇಂದ್ರ ಕುಮಾರ್ ಯಾದವ್ ಹಾಗೂ ಕಿರಿಯ ಎಂಜಿನಿಯರ್‌ ಶಾಹಿದ್ ಮೊಹಮ್ಮದ್ ಅಮಾನತುಗೊಂಡ ಅಧಿಕಾರಿಗಳು.

ವಿಶೇಷ ಕಾರ್ಯದರ್ಶಿ ವಿನೋದ್ ಕುಮಾರ್ ಅವರ ಆದೇಶದ ಮೇರೆಗೆ ಅಗರ್ವಾಲ್ ಮತ್ತು ದೇಶ್ವಾಲ್ ಅವರನ್ನು ಅಮಾನತುಗೊಳಿಸಲಾಗಿದೆ. ಪಾಂಡೆ ಅವರ ಅಮಾನತು ಆದೇಶವನ್ನು ಲೋಕೋಪಯೋಗಿ ಇಲಾಖೆಯ ಮುಖ್ಯ ಎಂಜಿನಿಯರ್ ವಿಕೆ ಶ್ರೀವಾಸ್ತವ್ ಅವರು ಹೊರಡಿಸಿದ್ದಾರೆ.

ಉತ್ತರ ಪ್ರದೇಶದ ಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕ ರಾಕೇಶ್ ಕುಮಾರ್ ಮಿಶ್ರಾ ಅವರು ಮೂವರು ಎಂಜಿನಿಯರ್‌ಗಳನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

ಅಲ್ಲದೇ ಘಟನೆ ಸಂಬಂಧ ಅಹಮದಾಬಾದ್ ಮೂಲದ ಗುತ್ತಿಗೆದಾರ ಭುವನ್ ಇನ್‌ಫ್ರಾಕಾಮ್ ಪ್ರೈವೇಟ್ ಲಿಮಿಟೆಡ್‌ಗೆ ರಾಜ್ಯ ಸರ್ಕಾರ ನೋಟಿಸ್ ಜಾರಿ ಮಾಡಿದೆ.

ರಾಮಪಥ ನಿರ್ಮಾಣಗೊಂಡ ಕೆಲವೇ ದಿನಗಳಲ್ಲಿ ಅದರ ಮೇಲಿನ ಪದರವು ಹಾನಿಗೊಳಗಾಗಿದೆ. ಉತ್ತರ ಪ್ರದೇಶ ಸರ್ಕಾರ ಆದ್ಯತೆಯಡಿಯಲ್ಲಿ ಮಾಡಿದ ಕೆಲಸಗಳಲ್ಲಿ ಲೋಪ ಉಂಟಾಗಿದೆ. ಇದರಿಂದ ರಾಜ್ಯ ಸರ್ಕಾರದ ‍ಪ್ರತಿಷ್ಠೆಗೆ ಧಕ್ಕೆಯಾಗಿದೆ ಎಂದು ಎಂದು ಲೋಕೋಪಯೋಗಿ ಇಲಾಖೆಯ ಆದೇಶದಲ್ಲಿ ತಿಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.