ADVERTISEMENT

ಸುಪ್ರೀಂಕೋರ್ಟ್‌ನ ಸಂವಿಧಾನ ಪೀಠದಿಂದ ಐತಿಹಾಸಿಕ ತೀರ್ಪು: ಸಮರಸದ ಸಂದೇಶ

ಒಂದೂವರೆ ಶತಮಾನದ ಅಯೋಧ್ಯೆ ವಿವಾದ: ಶಾಂತಿ ಸೌಹಾರ್ದದ ಮೂಲಕ ಸಾಮರಸ್ಯ ಮೆರೆದ ಜನ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2019, 1:32 IST
Last Updated 10 ನವೆಂಬರ್ 2019, 1:32 IST
ತೀರ್ಪು ಪ್ರಕಟವಾಗುತ್ತಿದ್ದಂತೆ ಸುಪ್ರೀಂ ಕೋರ್ಟ್‌ ಮುಂದೆ ಮುಸ್ಲಿಮರು ಹಾಗೂ ವಕೀಲ ಜತೆ ಸಂಭ್ರಮಿಸಿದ ಸಾಧು–ಸಂತರು  –ಪಿಟಿಐ ಚಿತ್ರ
ತೀರ್ಪು ಪ್ರಕಟವಾಗುತ್ತಿದ್ದಂತೆ ಸುಪ್ರೀಂ ಕೋರ್ಟ್‌ ಮುಂದೆ ಮುಸ್ಲಿಮರು ಹಾಗೂ ವಕೀಲ ಜತೆ ಸಂಭ್ರಮಿಸಿದ ಸಾಧು–ಸಂತರು –ಪಿಟಿಐ ಚಿತ್ರ   

ನವದೆಹಲಿ: ಒಂದೂವರೆ ಶತಮಾನದಿಂದ ಭಾರತದ ಸಾಮಾಜಿಕ, ಧಾರ್ಮಿಕ ಮತ್ತು ರಾಜಕೀಯ ವ್ಯವಸ್ಥೆಯ ಮೇಲೆ ಭಾರಿ ಪರಿಣಾಮ ಬೀರಿದ ಅಯೋಧ್ಯೆಯ ರಾಮಜನ್ಮಭೂಮಿ–ಬಾಬರಿ ಮಸೀದಿ ವಿವಾದದ ತೀರ್ಪನ್ನು ಸುಪ್ರೀಂ ಕೋರ್ಟ್‌ನ ಸಂವಿಧಾನ ಪೀಠವು ಶನಿವಾರ ಪ್ರಕಟಿಸಿದೆ.

ವಿವಾದಿತ 2.77 ಎಕರೆ ನಿವೇಶನವು ಸಂಪೂರ್ಣವಾಗಿ ರಾಮಲಲ್ಲಾಗೆ ಸೇರಿದ್ದು ಎಂದು ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯಿ ನೇತೃತ್ವದ ಪೀಠವು ಸರ್ವಾನುಮತದ ತೀರ್ಪು ನೀಡಿದೆ. ಈ ಮೂಲಕ, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ವೇದಿಕೆ ಸಿದ್ಧವಾಗಿದೆ.

ಕಳೆದ ಐವತ್ತು ವರ್ಷಗಳಲ್ಲಿ ಅಯೋಧ್ಯೆ ವಿವಾದವು ಹಲವು ಬಾರಿ ರಕ್ತಪಾತಕ್ಕೆ ಕಾರಣವಾಗಿತ್ತು. ಸುಪ್ರೀಂ ಕೋರ್ಟ್‌ ತೀರ್ಪು ಪ್ರಕಟವಾಗುವುದಕ್ಕೂ ಮುನ್ನ ದೇಶದಾದ್ಯಂತ ಭಾರಿ ಕಳವಳ ಸೃಷ್ಟಿಯಾಗಿತ್ತು.

ADVERTISEMENT

ಆದರೆ, ಭಾರತದ ಜನರು ತೀರ್ಪನ್ನು ಅತ್ಯಂತ ಪ್ರಬುದ್ಧವಾಗಿ ಸ್ವೀಕರಿಸಿದ್ದಾರೆ. ದೇಶದ ಯಾವುದೇ ಸ್ಥಳದಲ್ಲಿಯೂ ಅಹಿತಕರ ಘಟನೆಗಳು ನಡೆದಿಲ್ಲ. ಎಲ್ಲಕ್ಕಿಂತಲೂ ಶಾಂತಿ–ಸೌಹಾರ್ದವೇ ಮುಖ್ಯ ಎಂಬ ಸಂದೇಶವನ್ನು ಜನರು ನೀಡಿದ್ದಾರೆ.

ತೀರ್ಪಿನಲ್ಲಿ ಕೂಡ ಸಾಮರಸ್ಯದ ವಿಚಾರ ಪ್ರಸ್ತಾಪ ಆಗಿದೆ.‘ವಿವಿಧ ಧರ್ಮಗಳ ನಂಬಿಕೆಯ ನಡುವೆ ತಾರತಮ್ಯಕ್ಕೆ ಸಂವಿಧಾನದಲ್ಲಿ ಅವಕಾಶ ಇಲ್ಲ. ಎಲ್ಲ ರೀತಿಯ ನಂಬಿಕೆ, ಪೂಜೆ ಮತ್ತು ಪ್ರಾರ್ಥನೆಗಳೆಲ್ಲವೂ ಸಮಾನ’ ಎಂದು ಪೀಠ ಹೇಳಿದೆ.

ಸ್ಥಿರಾಸ್ತಿಗೆ ಸಂಬಂಧಿಸಿದ ವಿವಾದ ಇದು. ಈ ವಿವಾದವನ್ನು ಧರ್ಮ ಅಥವಾ ನಂಬಿಕೆಯ ಆಧಾರದಲ್ಲಿ ನಿರ್ಧರಿಸುವುದು ಸಾಧ್ಯವಿಲ್ಲ. ಸಾಕ್ಷ್ಯಗಳ ಆಧಾರದಲ್ಲಿ ಮಾತ್ರ ತೀರ್ಪು ನೀಡಲು ಸಾಧ್ಯ ಎಂದೂ ಪೀಠ ಹೇಳಿದೆ.

ಪ್ರಕರಣದ ವಾದ–ಪ್ರತಿವಾದವು ಸತ್ಯಾಂಶ, ಸಾಕ್ಷ್ಯ ಮತ್ತು ಮೌಖಿಕ ವಾದಗಳ ಮೂಲಕ ಹಾದು, ಇತಿಹಾಸ, ಪುರಾತತ್ವಶಾಸ್ತ್ರ, ಧರ್ಮ ಮತ್ತು ಕಾನೂನುಗಳನ್ನು ಮಥಿಸಿದೆ. ಇತಿಹಾಸ, ಸಿದ್ಧಾಂತ ಮತ್ತು ಧರ್ಮಕ್ಕೆ ಸಂಬಂಧಿಸಿದ ರಾಜಕೀಯ ತಕರಾರುಗಳಿಗಿಂತ ಕಾನೂನು ಬೇರೆಯಾಗಿಯೇ ಇರಬೇಕು ಎಂದು ಪೀಠ ಪ್ರತಿಪಾದಿಸಿದೆ.

2010ರಲ್ಲಿ ಅಲಹಾಬಾದ್‌ ಹೈಕೋರ್ಟ್‌ ನೀಡಿದ್ದ ತೀರ್ಪು ಜಾರಿಯೋಗ್ಯವಲ್ಲ ಎಂಬ ಅಭಿಪ್ರಾಯವನ್ನೂ ಪೀಠ ವ್ಯಕ್ತಪಡಿಸಿದೆ.

ರಾಮಲಲ್ಲಾ, ಸುನ್ನಿ ವಕ್ಫ್‌ ಮಂಡಳಿ ಮತ್ತು ನಿರ್ಮೋಹಿ ಅಖಾಡಕ್ಕೆ ವಿವಾದಿತ ಜಮೀನನ್ನು ಸಮಾನವಾಗಿ ಹಂಚಿ ಹೈಕೋರ್ಟ್‌ ತೀರ್ಪು ನೀಡಿತ್ತು. ಈ ಪರಿಹಾರವು ಕಾರ್ಯಸಾಧು ಅಲ್ಲ. ವಿವಾದಿತ ಜಮೀನನ್ನು ವಿಭಜಿಸಿ ನೀಡುವುದು ಯಾವುದೇ ಕಕ್ಷಿದಾರರ ಹಿತಾಸಕ್ತಿಗೆ ಪೂರಕವಲ್ಲ. ಅಷ್ಟೇ ಅಲ್ಲ, ಇದರಿಂದ ಶಾಶ್ವತ ಶಾಂತಿ ಮತ್ತು ಸೌಹಾರ್ದ ಸಾಧ್ಯವೂ ಇಲ್ಲ ಎಂದು ಪೀಠ ಹೇಳಿದೆ.

ಪ್ರಕರಣದ ಕಕ್ಷಿದಾರ ಸುನ್ನಿ ವಕ್ಫ್‌ ಮಂಡಳಿಗೆ ಮಸೀದಿ ನಿರ್ಮಾಣಕ್ಕಾಗಿ ಅಯೋಧ್ಯೆಯ ಪ್ರಮುಖ ಪ್ರದೇಶದಲ್ಲಿ 5 ಎಕರೆ ಜಮೀನು ನೀಡಬೇಕು. 16ನೇ ಶತಮಾನದಲ್ಲಿ ನಿರ್ಮಾಣವಾದ ಬಾಬರಿ ಮಸೀದಿಯನ್ನು 1992ರಲ್ಲಿ ಒಡೆದು ಹಾಕಿದ್ದು ತಪ್ಪು. ಈ ತಪ್ಪನ್ನು ಸರಿಪಡಿಸಬೇಕಿದೆ. ಆ ತಪ್ಪಿಗೆ ಪರಿಹಾರವಾಗಿ ಜಮೀನು ನೀಡಬೇಕು ಎಂದು ಪೀಠ ಹೇಳಿದೆ.

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವು ಬಿಜೆಪಿಯ ಪ್ರಮುಖ ಕಾರ್ಯಸೂಚಿಗಳಲ್ಲಿ ಒಂದು. ಕಳೆದ ಹಲವು ಚುನಾವಣಾ ಪ್ರಣಾಳಿಕೆಗಳಲ್ಲಿ ಅಯೋಧ್ಯೆಯ ರಾಮ ಮಂದಿರ ನಿರ್ಮಾಣವನ್ನು ಮುಖ್ಯ ಭರವಸೆಯಾಗಿ ಬಿಜೆಪಿ ಇರಿಸಿಕೊಂಡಿತ್ತು.

ಬಿಜೆಪಿ ಅಧಿಕಾರದಲ್ಲಿದ್ದಾಗಲೇ ಈ ತೀರ್ಪು ಬಂದಿದೆ. ಹಾಗಾಗಿ, ಆಡಳಿತ ಪಕ್ಷವು ಪ್ರಮುಖ ಭರವಸೆಯೊಂದನ್ನು ಈಡೇರಿಸಲು ಸಾಧ್ಯವಾದ ಸನ್ನಿವೇಶ ಸೃಷ್ಟಿಯಾಗಿದೆ.

ಎಐಎಂಪಿಎಲ್‌ಬಿ: ಮೇಲ್ಮನವಿ ಗೊಂದಲ
ಸುಪ್ರೀಂ ಕೋರ್ಟ್ ತೀರ್ಪು ತೃಪ್ತಿ ತಂದಿಲ್ಲ, ಮೇಲ್ಮನವಿ ಸಲ್ಲಿಸುವ ಬಗ್ಗೆ ಶೀಘ್ರ ತೀರ್ಮಾನ ಕೈಗೊಳ್ಳಲಾಗುವುದು ಎಂದು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (ಎಐಎಂಪಿಎಲ್‌ಬಿ) ಮತ್ತು ಮುಸ್ಲಿಮರನ್ನು ಪ್ರತಿನಿಧಿಸುವ ಇತರ ಸಂಘಟನೆಗಳು ಹೇಳಿವೆ.ಆದರೆ, ಸುಪ್ರೀಂ ಕೋರ್ಟ್‌ ತೀರ್ಪನ್ನು ಸ್ವಾಗತಿಸುತ್ತೇವೆ. ತೀರ್ಪನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸುವ ಯೋಚನೆ ಇಲ್ಲ ಎಂದು ಸುನ್ನಿ ಕೇಂದ್ರ ವಕ್ಫ್‌ ಮಂಡಳಿ ಹೇಳಿದೆ.

ಬಾಬರಿ ಮಸೀದಿ ಇದ್ದ ಸ್ಥಳಕ್ಕೆ ಪರಿಹಾರವಾಗಿ ಬೇರೆ ಜಮೀನು ನೀಡುವುದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಎಐಎಂಪಿಎಲ್‌ಬಿ ಮತ್ತು ಜಮಾತ್‌ ಎ ಇಸ್ಲಾಮಿ ಹಿಂದ್‌ ಹೇಳಿವೆ. ಸುಪ್ರೀಂ ಕೋರ್ಟ್‌ ಬಗ್ಗೆ ಗೌರವ ಇದೆ, ಆದರೆ ತೀರ್ಪಿನ ಬಗ್ಗೆ ಒಪ್ಪಿಗೆ ಇಲ್ಲ. ಹಾಗಿದ್ದರೂ, ತೀರ್ಪಿನಲ್ಲಿ ಇರುವ ಕೆಲವು ಅಂಶಗಳು ದೇಶದ ಜಾತ್ಯತೀತ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸಲಿವೆ ಎಂದೂ ಹೇಳಿವೆ.ತೀರ್ಪಿನ ಅಧ್ಯಯನ ನಡೆಸಿ, ಕಾನೂನು ಪ್ರಕಾರ ಯಾವ ಕ್ರಮಗಳನ್ನು ಕೈಗೊಳ್ಳಬಹುದು ಎಂಬುದನ್ನು ಪರಿಶೀಲಿಸುತ್ತೇವೆ ಎಂದು ಎಐಎಂಪಿಎಲ್‌ಬಿ ಕಾರ್ಯದರ್ಶಿ ಜಫರ್‌ಯಾಬ್‌ ಜಿಲಾನಿ ಹೇಳಿದ್ದಾರೆ.

ಜಿಲಾನಿ ಅವರು ಸುನ್ನಿ ವಕ್ಫ್ ಮಂಡಳಿಯ ಪರ ವಕೀಲ. ಆದರೆ, ತಮ್ಮ ಹೇಳಿಕೆ ಆ ನೆಲೆಯಲ್ಲಿ ಅಲ್ಲ. ಎಐಎಂಪಿಎಲ್‌ಬಿಯ ಕಾರ್ಯದರ್ಶಿ ಎಂಬ ನೆಲೆಯಲ್ಲಿ, ತೀರ್ಪನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲಾಗುವುದು ಎಂದು ಹೇಳಿದ್ದಾಗಿ ಅವರು ತಿಳಿಸಿದ್ದಾರೆ.

ಮಂದಿರಕ್ಕೆ ಟ್ರಸ್ಟ್‌ ರಚನೆ: ಮೂರು ತಿಂಗಳ ದಡುವು
* ಅಯೋಧ್ಯೆಯ ವಿವಾದಾತ್ಮಕ 2.77 ಎಕರೆ ಸ್ಥಳವು ರಾಮಲಲ್ಲಾ ವಿರಾಜ್‌ಮಾನ್‌ಗೆ ಸೇರಬೇಕು, ನಿವೇಶನವನ್ನು ರಾಮಲಲ್ಲಾಗೆ ಹಸ್ತಾಂತರಿಸಬೇಕು

* ನಿವೇಶನವು ಕೇಂದ್ರ ಸರ್ಕಾರದ ರಿಸೀವರ್‌ ಸುಪರ್ದಿಯಲ್ಲಿ ಇರಬೇಕು. ಕಂದಾಯ ದಾಖಲೆಗಳ ಪ್ರಕಾರ, ವಿವಾದಿತ ನಿವೇಶನವು ಸರ್ಕಾರಿ ಭೂಮಿ

* ಸುನ್ನಿ ವಕ್ಫ್‌ ಮಂಡಳಿಗೆ ಅಯೋಧ್ಯೆಯ ಪ್ರಮುಖ ಸ್ಥಳದಲ್ಲಿಮಸೀದಿ ನಿರ್ಮಾಣಕ್ಕೆ 5 ಎಕರೆ ಜಮೀನು

* ಕೇಂದ್ರ ಸರ್ಕಾರವು ಮೂರು ತಿಂಗಳಲ್ಲಿ ಮಂದಿರ ನಿರ್ಮಾಣದ ಯೋಜನೆ ಸಿದ್ಧಪಡಿಸಬೇಕು, ಅದಕ್ಕಾಗಿ ಟ್ರಸ್ಟ್‌ ಒಂದನ್ನು ರೂಪಿಸಬೇಕು

* ಮುಂದಿನ ಕಾರ್ಯಚಟುವಟಿಕೆ ಮೇಲೆ ಕೇಂದ್ರ ಮತ್ತು ಉತ್ತರ ಪ್ರದೇಶ ಸರ್ಕಾರ ಜಂಟಿ ನಿಗಾ ಇರಿಸಬಹುದು

* ಇಡೀ ನಿವೇಶನದ ಮೇಲೆ ನಿಯಂತ್ರಣ ಕೋರಿದ್ದ ನಿರ್ಮೋಹಿ ಅಖಾಡದ ಅರ್ಜಿ ವಜಾ

* ಸರ್ಕಾರಕ್ಕೆ ಸೂಕ್ತ ಎಂದು ಕಂಡು ಬಂದರೆ ಟ್ರಸ್ಟ್‌ನಲ್ಲಿ ನಿರ್ಮೋಹಿ ಅಖಾಡಕ್ಕೆ ಪ್ರಾತಿನಿಧ್ಯ ನೀಡಬಹುದು

* 1992ರ ಡಿಸೆಂಬರ್‌ 6ರಂದು ಧ್ವಂಸವಾದ ಮಸೀದಿಯು ಖಾಲಿ ಸ್ಥಳದಲ್ಲಿ ನಿರ್ಮಾಣ ಆಗಿರಲಿಲ್ಲ

* ಬಾಬರಿ ಮಸೀದಿಯ ತಳದಲ್ಲಿ ಇದ್ದ ಕಟ್ಟಡವು ಮುಸ್ಲಿಂ ವಾಸ್ತುಶಿಲ್ಪದ್ದಲ್ಲ. ಆದರೆ, ಮಸೀದಿ ನಿರ್ಮಾಣಕ್ಕಾಗಿ ದೇವಾಲಯವನ್ನು ನಾಶ ಮಾಡಲಾಗಿದೆ ಎಂಬುದನ್ನು ಭಾರತದ ಪುರಾತತ್ವ ಸರ್ವೇಕ್ಷಣೆ ಸಂಸ್ಥೆಯು ಸ್ಥಿರೀಕರಿಸಿಲ್ಲ

* ವಿವಾದಿತ ನಿವೇಶನವು ಶ್ರೀರಾಮನ ಜನ್ಮಸ್ಥಾನ ಎಂದು ಹಿಂದೂಗಳು ನಂಬುತ್ತಾರೆ. ಮುಸ್ಲಿಮರೂ ಅದನ್ನು ಹೇಳುತ್ತಾರೆ. ಶ್ರೀರಾಮ ಇಲ್ಲಿ ಜನಿಸಿದ್ದ ಎಂಬ ಹಿಂದೂಗಳ ನಂಬಿಕೆ ವಿವಾದಾತೀತ

* ಸೀತಾ ರಸೋಯಿ, ರಾಮ ಛಬೂತರ ಮತ್ತು ಭಂಡಾರ ಗೃಹಗಳು ಇಲ್ಲಿ ಇವೆ ಎಂಬುದು ಇದೊಂದು ಧಾರ್ಮಿಕ ಸ್ಥಳ ಮತ್ತು ಹೊರ ಆವರಣ ಹಿಂದೂಗಳ ಸುಪರ್ದಿಯಲ್ಲಿ ಇತ್ತು ಎಂಬುದಕ್ಕೆ ಪುರಾವೆ

* ಮುಸ್ಲಿಮರು ಇಲ್ಲಿ ಶುಕ್ರವಾರದ ಪ್ರಾರ್ಥನೆ ಸಲ್ಲಿಸುತ್ತಿದ್ದರು ಎಂಬುದಕ್ಕೆ ಸಾಕ್ಷ್ಯಗಳಿವೆ. ಮುಸ್ಲಿಮರು ಈ ಸ್ಥಳದ ಸ್ವಾಧೀನ ಕಳೆದುಕೊಂಡಿರಲಿಲ್ಲ ಎಂಬುದನ್ನು ಇದು ಸೂಚಿಸುತ್ತದೆ

* ಪ್ರಾರ್ಥನೆ ಸಲ್ಲಿಸುವುದಕ್ಕೆ ಮುಸ್ಲಿಮರಿಗೆ ಅಡ್ಡಿಪಡಿಸಲಾಗಿದ್ದರೂ ಅವರು ಈ ಸ್ಥಳವನ್ನು ಬಿಟ್ಟು ಹೋಗಿರಲಿಲ್ಲ

* 1856–57ರಲ್ಲಿ ಇಲ್ಲಿ ಕಬ್ಬಿಣದ ಬೇಲಿ ಹಾಕಲಾಗಿತ್ತು. ಹಿಂದೂಗಳು ಪೂಜೆ ಸಲ್ಲಿಸುತ್ತಿದ್ದುದಕ್ಕೆ ಇದು ಸಾಕ್ಷ್ಯ

* ಧರ್ಮ ಮತ್ತು ನಂಬಿಕೆಯ ಆಧಾರದಲ್ಲಿ ನಿವೇಶನ ವಿವಾದಕ್ಕೆ ಪರಿಹಾರ ಕೊಡುವುದು ಸಾಧ್ಯವಿಲ್ಲ, ಆದರೆ, ಇವು ಒಂದು ನಿರ್ಧಾರಕ್ಕೆ ಬರುವುದಕ್ಕೆ ಸೂಚಕಗಳು

* ವಿವಾದಿತ ಸ್ಥಳ ಸುಪರ್ದಿಯಲ್ಲಿ ಮಾತ್ರ ಇತ್ತು ಎಂಬುದಕ್ಕೆ ಸಾಕ್ಷ್ಯಗಳನ್ನು ಮುಸ್ಲಿಂ ಕಕ್ಷಿದಾರರು ಕೊಟ್ಟಿಲ್ಲ. ನಿವೇಶನದ ಹೊರ ಭಾಗವು ಅವರ ಸ್ವಾಧೀನದಲ್ಲಿ ಇರಲಿಲ್ಲ

* ತನ್ನ ವಾದವನ್ನು ಸಾಬೀತು ಮಾಡಲು ಸುನ್ನಿ ವಕ್ಫ್‌ ಮಂಡಳಿಯು ವಿಫಲವಾಗಿದೆ. ಆದರೆ, ವಿವಾದಿತ ನಿವೇಶನದ ಹೊರ ಆವರಣವು ತಮ್ಮ ಸ್ವಾಧೀನದಲ್ಲಿತ್ತು ಎಂಬುದನ್ನು ಸ್ಥಾಪಿಸಲು ಹಿಂದೂ ಕಕ್ಷಿದಾರರು ಯಶಸ್ವಿಯಾಗಿದ್ದಾರೆ

* ಬಾಬರಿ ಮಸೀದಿ ಧ್ವಂಸವು ಕಾನೂನಿನ ಉಲ್ಲಂಘನೆ

* 1949ರ ಡಿಸೆಂಬರ್‌ 22ರ ರಾತ್ರಿ ವಿವಾದಿತ ನಿವೇಶನದಲ್ಲಿ ಮೂರ್ತಿಯನ್ನು ಇರಿಸಿ, ಮಸೀದಿಯನ್ನು ಅಪವಿತ್ರ ಮಾಡಲಾಯಿತು. ಮುಸ್ಲಿಮರನ್ನು ಇಲ್ಲಿಂದ ಓಡಿಸುವ ಪ್ರಯತ್ನಕ್ಕೆ ಕಾನೂನುಬದ್ಧ ಪ್ರಾಧಿಕಾರದ ಅನುಮತಿ ಇರಲಿಲ್ಲ. ಮುಸ್ಲಿಮರಿಗೆ ಪ್ರಾರ್ಥನೆಯ ಹಕ್ಕು ನಿರಾಕರಿಸುವುದೇ ಇದರ ಉದ್ದೇಶವಾಗಿತ್ತು

**

ಪರ್ಯಾಯವಾಗಿ ನೀಡಲಾಗಿರುವ ಐದು ಎಕರೆ ಜಮೀನನ್ನು ಮುಸ್ಲಿಮರು ಸ್ವೀಕರಿಸುವುದಿಲ್ಲ. ಮಸೀದಿ ಇದ್ದ ಸ್ಥಳಕ್ಕೆ ಬದಲಾಗಿ ₹500 ಕೋಟಿ ಮೌಲ್ಯದ ಜಮೀನು ಕೊಟ್ಟರೂ ಬೇಡ.
ಕಮಾಲ್‌ ಫರೂಕಿ,ಎಐಎಂಪಿಎಲ್‌ಬಿ ಸದಸ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.