ADVERTISEMENT

ಅಯೋಧ್ಯೆ ವಿವಾದ: ಸುಪ್ರೀಂ ತೀರ್ಪು ‘ಐತಿಹಾಸಿಕ‘ ಎಂದ ನಾಯಕರು 

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2019, 8:50 IST
Last Updated 9 ನವೆಂಬರ್ 2019, 8:50 IST
   

ನವದೆಹಲಿ: ಅಯೋಧ್ಯೆಯಲ್ಲಿನ ರಾಮ ಜನ್ಮಭೂಮಿ–ಬಾಬರಿ ಮಸೀದಿಗೆ ಸಂಬಂಧಿಸಿ ಸುಪ್ರೀಂ ಕೋರ್ಟ್‌ ನೀಡಿರುವತೀರ್ಪಿನಕುರಿತು ಹಲವು ನಾಯಕರು ಟ್ವಿಟರ್‌ನಲ್ಲಿಪ್ರತಿಕ್ರಿಯಿಸಿದ್ದಾರೆ.

‘ಸುಪ್ರೀಂ ಕೋರ್ಟ್‌ ನೀಡಿರುವ ಐತಿಹಾಸಿಕ ತೀರ್ಪನ್ನು ಸ್ವಾಗತಿಸೋಣ. ಇದು ಯಾರೊಬ್ಬರ ಗೆಲುವು ಅಥವಾ ಸೋಲು ಎಂದು ಭಾವಿಸಬೇಡಿ. ಉದ್ವೇಗಕ್ಕೆ ಒಳಗಾಗಬೇಡಿ. ಯಾರು ಕೂಡ ವಿಜೃಂಭಿಸಬೇಡಿ. ಸಮಾಜದ ಸಮರಸ್ಯ ಕದಡದೆ ಶಾಂತಿ ಕಾಪಾಡೋಣ’ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಟ್ವೀಟ್‌ ಮಾಡಿದ್ದಾರೆ.

ರಾಮ ಜನ್ಮ ಭೂವಿವಾದದ ತೀರ್ಪನ್ನು ಎಲ್ಲರೂ ಗೌರವಿಸೋಣ. ಶಾಂತಿ ಮತ್ತು ಅಹಿಂಸೆಯನ್ನು ಪ್ರತಿಪಾದಿಸಿದ ಈ ದೇಶದ ಸಿದ್ಧಾಂತವನ್ನು ಪಾಲಿಸೋಣ. ನಾವೆಲ್ಲರೂ ಎಂದಿನಂತೆ ಸಾಮರಸ್ಯದಿಂದ ಬದುಕುತ್ತಾ ಅಭಿವೃದ್ಧಿಯ ಕಡೆ ಚಿಂತಿಸೋಣ. ಅಂದಹಾಗೆ ‘ಅನ್ನ ದೇವರ ಮುಂದೆ ಇನ್ಯಾವ ದೇವರಿಲ್ಲ...’ರಾಮಮಂದಿರದ ಜೊತೆಗೆ ಅನ್ನದಾತನ ಬದುಕು ಕಟ್ಟಲು ಶ್ರಮಿಸೋಣ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಅಯೋದ್ಯೆ ಜಮೀನು ವಿವಾದ ಸಂಬಂಧ ಸುಪ್ರೀಂಕೋರ್ಟ್ ನೀಡಿರುವ ತೀರ್ಪನ್ನು ಕಾಂಗ್ರೆಸ್ ಸ್ವಾಗತಿಸುತ್ತದೆ. ಭಾರತದ ಸರ್ವಧರ್ಮ ಸಮ್ಮಾನದೊಂದಿಗೆ ಶಾಂತಿ ಸುವಸ್ಥೆ ಕಾಪಾಡುವಂತೆ ಎಲ್ಲಾ ಸಮುದಾಯಗಳಲ್ಲಿ ಮನವಿ ಮಾಡುತ್ತೇವೆ. ದೇಶದಲ್ಲಿಯ ಜಾತ್ಯತೀತತೆ, ಏಕತೆ, ಸೌಹಾರ್ದತೆಯನ್ನು ಕಾಪಾಡಿಕೊಳ್ಳುವುದು ಪ್ರತಿ ಭಾರತೀಯರ ಜವಾಬ್ದಾರಿ ಆಗಿದೆ ಎಂದು ಸ್ಪಷ್ಟಪಡಿಸಿದೆ.

ಸುಪ್ರೀಂ ಕೋರ್ಟ್‌ ತೀರ್ಪು ಎಲ್ಲರೂ ಗೌರವಿಸಿ. ಶಾಂತಿ ಕಾಪಾಡೋಣ ಎಂದು ಕೇಂದ್ರ ಸಚಿವ ನಿತಿನ್‌ ಗಡ್ಕರಿ ತಿಳಿಸಿದ್ದಾರೆ.

ಸುಪ್ರೀಂ ಕೋರ್ಟ್‌ ತೀರ್ಪು ಸ್ವಾಗತಾರ್ಹ. ಸಾಮಾಜಿಕ ಸಾಮರಸ್ಯ ಕದಡದ ರೀತಿಯಲ್ಲಿ ಶಾಂತಿ ಕಾಪಾಡೋಣ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಹೇಳಿದ್ದಾರೆ.

ಅಯೋಧ್ಯೆ ವಿವಾದಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್‌ ನೀಡಿದ ತೀರ್ಪು ಸ್ವಾಗತಾರ್ಹ ಎಂದಿರುವ ಸಚಿವ ಜಗದೀಶ್‌ ಶೆಟ್ಟರ್‌ 9/11/19 ಐತಿಹಾಸಿಕ ದಿನ ಎಂದು ಹೇಳಿದ್ದಾರೆ.

ಸೌಹಾರ್ದತೆ ಕಾಪಾಡೋಣ ಎಂದು ಸಚಿವ ಎಸ್‌.ಸುರೇಶ್‌ಕುಮಾರ್ ಕರೆ ನೀಡಿದ್ದಾರೆ.

‘ಹಲವು ವರ್ಷಗಳಿಂದ ಇಡೀ ದೇಶದ ಜನರು ಜಾತಿ ಮತ ಭೇದ ಬಿಟ್ಟು ಕಾಯುತ್ತಿದ್ದರು. ಇವತ್ತು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ಕೊಟ್ಟಿದೆ.. ನಮಗೆ ಸಂತೋಷವಾಗಿದೆ. ಇದರಲ್ಲಿ ಯಾರಿಗೂ ಸೋಲು – ಗೆಲುವು ಅನ್ನೊದಿಲ್ಲ. ನೂರಾರು ವರ್ಷಗಳಿಂದ ಇದ್ದ ಸಂಘರ್ಷಕ್ಕೆ ಅಂತ್ಯ ಬಿದ್ದಂತಾಗಿದೆ. ಕೇಂದ್ರ ಸಚಿವನಾಗಿ ತೀರ್ಪನ್ನು ಸ್ವಾಗತಿಸುತ್ತೇನೆ ಎಂದು ಡಿ.ವಿ. ಸದಾನಂದ ಗೌಡ ಪ್ರತಿಕ್ರಿಯಿಸಿದ್ದಾರೆ.

ಐದು ಶತಮಾನದ ಹೋರಾಟ ಇದು. ಶ್ರೀರಾಮ ಹುಟ್ಟಿದ ಜಾಗದಲ್ಲಿ ಮಂದಿರ ಆಗಬೇಕು ಎನ್ನುವ ಹೋರಾಟ ಇತ್ತು. ಜನ ಜಾತಕ ಪಕ್ಷಿಯಂತೆ ಈ ದಿನಕ್ಕಾಗಿ ಕಾಯುತ್ತಿದ್ದರು. ಇದೊಂದು ಐತಿಹಾಸಿಕ ತೀರ್ಪು ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.

ಇನ್ನಷ್ಟು...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.