ADVERTISEMENT

ಅಯೋಧ್ಯೆ ರಾಮ ಮಂದಿರ: ಮ್ಯೂಸಿಯಂ, ಗುರುಕುಲ ನಿರ್ಮಾಣಕ್ಕೆ ಜನರಿಂದ ಸಲಹೆ ಆಹ್ವಾನ

ಏಜೆನ್ಸೀಸ್
Published 4 ನವೆಂಬರ್ 2020, 12:20 IST
Last Updated 4 ನವೆಂಬರ್ 2020, 12:20 IST
ಅಯೋಧ್ಯೆ ರಾಮ ಜನ್ಮಭೂಮಿ ಸ್ಥಳದಲ್ಲಿ ಭೂಮಿ ಪೂಜೆಯಲ್ಲಿ ಭಾಗಿಯಾದ ಪ್ರಧಾನಿ ನರೇಂದ್ರ ಮೋದಿ
ಅಯೋಧ್ಯೆ ರಾಮ ಜನ್ಮಭೂಮಿ ಸ್ಥಳದಲ್ಲಿ ಭೂಮಿ ಪೂಜೆಯಲ್ಲಿ ಭಾಗಿಯಾದ ಪ್ರಧಾನಿ ನರೇಂದ್ರ ಮೋದಿ   

ಅಯೋಧ್ಯೆ (ಉತ್ತರ ಪ್ರದೇಶ): ಇಲ್ಲಿ ರಾಮ ಮಂದಿರ ನಿರ್ಮಾಣದ ಕಾರ್ಯ ನಡೆಯುತ್ತಿದ್ದು, ಮಂದಿರದ ಸುತ್ತಲಿನ 70 ಎಕರೆ ಪ್ರದೇಶದಲ್ಲಿ ವಸ್ತು ಸಂಗ್ರಹಾಲಯ, ಗುರುಕುಲ ಸೇರಿದಂತೆ ಅಭಿವೃದ್ಧಿ ಪಡಿಸಲು ಉದ್ದೇಶಿಸಲಾಗಿರುವ ಕೇಂದ್ರಗಳ ವಿನ್ಯಾಸದ ಬಗ್ಗೆ ಸಲಹೆಗಳನ್ನು ಆಹ್ವಾನಿಸಲಾಗಿದೆ.

ಮಂದಿರದ ವಿನ್ಯಾಸ, ಮುಖ್ಯ ಕಟ್ಟಡವನ್ನು ಸಾಂಪ್ರದಾಯಿಕ ನಾಗರಾ ಶೈಲಿಯಲ್ಲಿ ತಜ್ಞರು ವಿನ್ಯಾಸಗೊಳಿಸಿದ್ದಾರೆ. ಮಂದಿರದ ಸುತ್ತಲಿನ ಪ್ರದೇಶದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿರುವ ಪುಷ್ಕರಣಿ, ಯಜ್ಞ ಮಂಟಪ, ಅನುಷ್ಠಾನ ಮಂಟಪ, ಕಲ್ಯಾಣ ಮಂಟಪ ಕಟ್ಟಡಗಳ ವಿನ್ಯಾಸ ಹಾಗೂ ರಾಮಜನ್ಮೋತ್ಸವ, ಹನುಮ ಜಯಂತಿ, ರಾಮಚರ್ಚಾ, ಸೀತಾ ವಿವಾಹದಂತಹ ಆಚರಣೆಗಳಿಗೆ ಸಂಬಂಧಿಸಿದಂತೆ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ ಜನರಿಂದ ಸಲಹೆಗಳನ್ನು ಆಹ್ವಾನಿಸಿದೆ.

ವಿನ್ಯಾಸಗಳು ವಾಸ್ತು ಶಾಸ್ತ್ರ ಅಥವಾ ಸ್ಥಾಪತ್ಯ ವೇದದ ಪ್ರಕಾರದಲ್ಲಿರಬೇಕು ಎಂದು ಟ್ರಸ್ಟ್‌ ಜಾಹೀರಾತು ಪ್ರಕಟಣೆಯಲ್ಲಿ ತಿಳಿಸಿರುವುದಾಗಿ ಎಎನ್‌ಐ ವರದಿ ಮಾಡಿದೆ. 51 ವಿದ್ಯಾರ್ಥಿಗಳು ಹಾಗೂ ಆಚಾರ್ಯರು ಅಭ್ಯಾಸ ಮಾಡಲು ಗುರುಕುಲ, ವಸತಿ ಸೌಲಭ್ಯಗಳಿಗಾಗಿಯೂ ವಿನ್ಯಾಸ ರೂಪಿಸಲು ಕೇಳಲಾಗಿದೆ.

ADVERTISEMENT

ಇದರೊಂದಿಗೆ ನಿತ್ಯ ಅಂದಾಜು 1 ಲಕ್ಷ ಜನರು ಭೇಟಿ ನೀಡಬಹುದು ಹಾಗೂ ವಿಶೇಷ ಸಂದರ್ಭಗಳಲ್ಲಿ 5 ಲಕ್ಷ ಜನರು ಭೇಟಿ ನೀಡಬಹುದು; ಅವರಿಗೆಲ್ಲ ಸೂಕ್ತ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲೂ ಟ್ರಸ್ಟ್‌ ಸಲಹೆಗಳಿಗೆ ಆಹ್ವಾನಿಸಿದೆ.

ಶ್ರೀರಾಮ ಡಿಜಿಟಲ್‌ ಗ್ರಂಥಾಲಯ ಮತ್ತು ಸಂಶೋಧನಾ ಕೇಂದ್ರ, ಮಲ್ಟಿಮೀಡಿಯಾ ವೇದಿಕೆಗಳನ್ನು ಬಳಸಿ ಪ್ರದರ್ಶನ ನೀಡುವ ಮ್ಯೂಸಿಯಂ, ವರ್ಚುವಲ್‌ ರಿಯಾಲಿಟಿ ಹಾಗೂ ಆಗ್ಮೆಂಟೆಡ್ ರಿಯಾಲಿಟಿ ಮೂಲಕ ರಾಮಾಯಣದ ಸಾರವನ್ನು ತಿಳಿಸುವುದು, 1,000–5,000 ಜನರು ಕೂರುವ ಸಾಮರ್ಥ್ಯದ ಆಡಿಟೋರಿಯಂ ಮತ್ತು ಕನ್ವೆಂಷನ್‌ ಸೆಂಟರ್‌ ನಿರ್ಮಾಣಕ್ಕೆ ಉದ್ದೇಶಿಸಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ಆಗಸ್ಟ್‌ 5ರಂದು ರಾಮ ಜನ್ಮಭೂಮಿ ಸ್ಥಳದಲ್ಲಿ ಭೂಮಿ ಪೂಜೆಯಲ್ಲಿ ಭಾಗಿಯಾಗಿದ್ದರು. ದೇವಾಲಯದ ನಿರ್ಮಾಣ ಮೇಲ್ವಿಚಾರಣೆಯ‌ನ್ನು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ ಗಮನಿಸುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.