ನವದೆಹಲಿ: ‘ಆಯುಷ್ಮಾನ್ ಭಾರತ’ ಆರೋಗ್ಯ ವಿಮಾ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು 70 ವರ್ಷ ಹಾಗೂ ಅದಕ್ಕಿಂತ ಹೆಚ್ಚು ವಯಸ್ಸಾದ ಎಲ್ಲ ಹಿರಿಯ ನಾಗರಿಕರಿಗೆ ಮಂಗಳವಾರ ವಿಸ್ತರಿಸಲಿದ್ದಾರೆ. ಅಲ್ಲದೆ, ಸುಮಾರು ₹12,850 ಕೋಟಿ ಮೌಲ್ಯದ ವಿವಿಧ ಯೋಜನೆಗಳಿಗೆ ಹಸಿರು ನಿಶಾನೆ ತೋರಲಿದ್ದಾರೆ.
ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಈ ಮಹತ್ವದ ಯೋಜನೆಯ ವ್ಯಾಪ್ತಿಯನ್ನು ಆಯುರ್ವೇದ ದಿನಾಚರಣೆಯಂದು ಮೋದಿ ಅವರು ವಿಸ್ತರಿಸಲಿದ್ದಾರೆ. ಆಯುರ್ವೇದ ದಿನವು ಔಷಧಗಳ ದೇವ ಎಂದು ನಂಬಲಾಗಿರುವ ಧನ್ವಂತರಿಯ ಜನ್ಮದಿನವೂ ಹೌದು.
ಪ್ರತ್ಯೇಕ ಕಾರ್ಯಕ್ರಮವೊಂದ ರಲ್ಲಿ ಮೋದಿ ಅವರು ಕೇಂದ್ರ ಸರ್ಕಾರದ ಉದ್ಯೋಗ ಮೇಳದ ಭಾಗವಾಗಿ, 51 ಸಾವಿರ ಮಂದಿಗೆ ನೇಮಕಾತಿ ಪತ್ರ ವಿತರಿಸಲಿದ್ದಾರೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.
ರಾಷ್ಟ್ರ ರಾಜಧಾನಿ ನವದೆಹಲಿ ಯಲ್ಲಿ ಇರುವ ಅಖಿಲ ಭಾರತ ಆಯುರ್ವೇದ ಇನ್‌ಸ್ಟಿಟ್ಯೂಟ್‌ನ ಎರಡನೆಯ ಹಂತಕ್ಕೆ ಕೂಡ ಮೋದಿ ಅವರು ಚಾಲನೆ ನೀಡಲಿದ್ದಾರೆ. ಎರಡನೆಯ ಹಂತದಲ್ಲಿ ಪಂಚಕರ್ಮ ಆಸ್ಪತ್ರೆ, ಆಯುರ್ವೇದ ಔಷಧ ತಯಾ ರಿಕೆಗೆ ಔಷಧಾಲಯ, ಕೇಂದ್ರೀಯ ಗ್ರಂಥಾಲಯ ಸೌಲಭ್ಯ ಇರಲಿವೆ.
ಬೇರೆ ಬೇರೆ ಏಮ್ಸ್ ಸಂಸ್ಥೆಗಳಲ್ಲಿ ಹೆಚ್ಚಿನ ಸೌಲಭ್ಯಗಳನ್ನು ಅವರು ಉದ್ಘಾಟಿಸಲಿದ್ದಾರೆ. ಮಧ್ಯಪ್ರದೇಶದ ಶಿವಪುರಿ, ರತಲಾಂ, ಖಂಡವಾ, ರಾಜಗಢ, ಮಂದಸೌರ್‌ನಲ್ಲಿ ನರ್ಸಿಂಗ್ ಕಾಲೇಜುಗಳಿಗೆ ಅವರು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಕರ್ನಾಟಕ ಸೇರಿದಂತೆ ಒಟ್ಟು 21 ಕಡೆಗಳಲ್ಲಿ ಆರೈಕೆ ಘಟಕಗಳಿಗೆ ಅವರು ಶಂಕುಸ್ಥಾಪನೆ ನಡೆಸಲಿದ್ದಾರೆ.
ಕರ್ನಾಟಕದ ಬೊಮ್ಮಸಂದ್ರ ಮತ್ತು ನರಸಾಪುರದಲ್ಲಿ ಹಾಗೂ ಬೇರೆ ಬೇರೆ ರಾಜ್ಯಗಳಲ್ಲಿ ನಿರ್ಮಿಸಿರುವ ಇಎಸ್‌ಐಸಿ ಆಸ್ಪತ್ರೆ ಗಳನ್ನು ಉದ್ಘಾಟಿಸಲಿದ್ದಾರೆ.
11 ಸಂಸ್ಥೆಗಳಲ್ಲಿ ಆರೋಗ್ಯ ಸೇವೆಯನ್ನು ಒದಗಿಸಲು ಡ್ರೋನ್‌ಗಳ ಬಳಕೆಗೆ ಅವರು ಚಾಲನೆ ನೀಡಲಿದ್ದಾರೆ. ರಿಷಿಕೇಶದ ಏಮ್ಸ್‌ನಲ್ಲಿ ಹೆಲಿಕಾಪ್ಟರ್ ಮೂಲಕ ತುರ್ತು ವೈದ್ಯಕೀಯ ಸೇವೆ ಒದಗಿಸುವ ಸೌಲಭ್ಯವನ್ನು ಕೂಡ ಅವರು ಉದ್ಘಾಟಿಸಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.