ವಿಶ್ವ ಕ್ಯಾನ್ಸರ್ ದಿನ ಪ್ರಯುಕ್ತನಟ ಆಯುಷ್ಮಾನ್ ಖುರಾನಾ ಪತ್ನಿ ತಾಹಿರಾ ಕಶ್ಯಪ್ ತನ್ನದೇ ಚಿತ್ರವೊಂದನ್ನು ಹಂಚಿಕೊಂಡಿದ್ದಾರೆ. ಬೋಳಿಸಿದ ತಲೆ, ತೆರೆದಬೆನ್ನು ತೋರಿಸಿರುವ ಚಿತ್ರದಲ್ಲಿ ಬೆನ್ನಿನ ಕೆಳಗೆ ಗೆರೆ ಎಳೆದಂತೆ ಕಾಣುವ ಗಾಯದ ಗುರಿತು ಕಣ್ಣಿಗೆ ನಾಟದೆ ಇರದು. ಸ್ತನ ಕ್ಯಾನ್ಸರ್ ವಿರುದ್ಧ ತಾನು ನಡೆಸಿದ ಹೋರಾಟವನ್ನು ಈ ಚಿತ್ರದ ಮೂಲಕ ತಾಹಿರಾ ಹೇಳಿಕೊಂಡಂತಿದೆ.
ಸಣ್ಣ ನೋವಿಗೆ ಕಾರಣ ತಿಳಿಯಲು ಆಯುಷ್ಮಾನ್ ಮತ್ತು ತಾಹಿರಾ ಆಸ್ಪತ್ರೆಗೆ ಹೋಗಿದ್ದರು. ಸ್ತನ ಕ್ಯಾನ್ಸರ್ ಮೊದಲ ಹಂತದಲ್ಲಿರುವುದು ಪತ್ತೆಯಾಗಿತ್ತು. ಶಸ್ತ್ರ ಚಿಕಿತ್ಸೆಯಿಂದ ಗುಣಮುಖರಾಗಬಹುದು ಎಂಬುದು ವೈದ್ಯರ ಭರವಸೆ. ದಂಪತಿಗಳಿಗೆ ಒತ್ತರಿಸಿ ಬರುತ್ತಿದ್ದ ಕಣ್ಣೀರು...ಇದಾಗಿ ವರ್ಷ ಕಳೆದಿದೆ. ಸ್ತನದ ಭಾಗಕ್ಕೆ ನಡೆಸುವ (ಮಾಸ್ಟೆಕ್ಟೊಮಿ) ಶಸ್ತ್ರಚಿಕಿತ್ಸೆಗೆ ತಾಹಿರಾ ಒಳಗಾಗಿ ಕ್ಯಾನ್ಸರ್ ವಿರುದ್ಧ ದಿಟ್ಟ ಹೋರಾಟ ನಡೆಸಿದ್ದಾರೆ. ಇಂದು ಚಿತ್ರಸಹಿತ ಪ್ರಕಟಿಸಿಕೊಂಡಿರುವ ಪೋಸ್ಟ್ ನಲ್ಲಿ ‘ಇಂದು ನನ್ನ ದಿನ! ಎಲ್ಲರಿಗೂ ವಿಶ್ವ ಕ್ಯಾನ್ಸರ್ ದಿನದ ಶುಭಾಶಯಗಳು...ಇದಕ್ಕೆ ಅಂಟಿಕೊಂಡಿರುವ ಅಪಮಾನಿಕಾರಿ ಧೋರಣೆಗಳನ್ನು ತೆಗೆಯೋಣ. ಜಾಗೃತಿ ಮೂಡಿಸೋಣ ಹಾಗೂ ನಮ್ಮನ್ನು ನಾವು ಪ್ರೀತಿಸೋಣ’ ಎಂದು ಬರೆದಿದ್ದಾರೆ.
‘ಗಾಯದ ಗುರುತುಗಳನ್ನು ನಾನು ಅಪ್ಪಿದ್ದೇನೆ, ಅವು ನನ್ನ ಗೌರವದ ಪ್ರತೀಕ. ನಿಮ್ಮನ್ನು ನೀವು ಸ್ವೀಕರಿಸುವುದರಲ್ಲಿಯೇ ಸಂತಸ ಅಡಗಿದೆ. ಈ ಚಿತ್ರವನ್ನು ಪ್ರಕಟಿಸುವ ನನ್ನ ನಿರ್ಧಾರ, ಕಾಯಿಲೆಯನ್ನು ಸಂಭ್ರಮಿಸಲು ಅಲ್ಲ; ನನ್ನೊಳಗಿನ ಚೈತ್ಯನದ ಅನುಭವ’ ಎಂದಿದ್ದಾರೆ. ಅತುಲ್ ಕಾಸ್ಬೇಕರ್ ಈ ಚಿತ್ರವನ್ನು ಕ್ಲಿಕ್ಕಿಸಿದ್ದಾರೆ.
ಇದನ್ನೂ ಓದಿ: ಕಷ್ಟದ ಮಳೆಯಲ್ಲಿ ಕಲ್ಲಾದ ಆಯುಷ್ಮಾನ್
’ಪಾ ಲೇ ತು ಐಸಿ ಫತೇ. ಸಮಂದರ್ ತೇರಿ ಪ್ಯಾಸ್ ಸೇ ಡರೇ’(ಇಂಥದೊಂದು ಗುರಿಯನ್ನು ನೀನು ಇಟ್ಟುಕೊ, ನಿನ್ನ ಅಭಿಲಾಷೆಗೆ ಸಮುದ್ರವೇ ಬೆಚ್ಚುವಂತೆ) –ಈ ಸಾಲುಗಳು ನಿನಗಾಗಿ ತಾಹಿರಾ. ನಿನ್ನ ಗಾಯದ ಗುರುತುಗಳು ಸುಂದರವಾಗಿದೆ. ಬದುಕಿನಿಂದ ಕಲಿತವಳು ನೀನು. ಲಕ್ಷಾಂತರ ಜನರ ವೈಯಕ್ತಿಕ ಹೋರಾಟಗಳನ್ನು ಎದುರಿಸಲು ಪ್ರೇರಣೆ ನೀಡುವುದನ್ನು ಮುಂದುವರಿಸು....’ ಎಂದು ಆಯುಷ್ಮಾನ್ ಖುರಾನಾ ಪತ್ನಿಗೆ ಬೆಂಬಲ ಮುಂದುವರಿಸಿದ್ದಾರೆ.
ಬಿಳಿಯ ಬಟ್ಟೆ ಧರಿಸಿ, ಬೋಳು ತಲೆಯಲ್ಲಿಯೇ ತಾಹಿರಾ ಭಾನುವಾರ ಲ್ಯಾಕ್‌ಮಿ ಫ್ಯಾಷನ್ ವೀಕ್‌ನ ರ್‍ಯಾಂಪ್ ಮೇಲೆ ಹೆಜ್ಜೆ ಹಾಕಿದ್ದರು. ಬೋಳು ತಲೆ ಚಿತ್ರವನ್ನು ಇತ್ತೀಚೆಗೆ ಪ್ರಕಟಿಸಿಕೊಂಡಿದ್ದ ತಾಹಿರಾ, ಕಿಮೊಥೆರಪಿ ನಂತದಲ್ಲಿ ಕೂದಲು ಉದುರುವಿಕೆಯಿಂದ ತಲೆಗೆ ವಿಗ್ ಬಳಸುವುದನ್ನು ರೂಢಿ ಮಾಡಿಕೊಳ್ಳುತ್ತಿದೆ. ಅದಕ್ಕಿಂತಲೂ ನಾನು ಇರುವಂತೆಯೇ ಕಾಣಲು ನಿರ್ಧರಿಸಿದೆ ಎಂದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.