ADVERTISEMENT

ಶಬರಿಮಲೆ: ಮಹಿಳೆಯರಿಗೆ ಸಿಗದ ಪ್ರವೇಶ

ಮೂವರನ್ನು ವಾಪಸ್‌ ಕಳುಹಿಸಿದ ಪೊಲೀಸರು: ಸರ್ಕಾರದ ನಿಲುವಿಗೆ ಟೀಕೆ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2019, 22:37 IST
Last Updated 16 ನವೆಂಬರ್ 2019, 22:37 IST
ಅಯ್ಯಪ್ಪ ದರ್ಶನಕ್ಕಾಗಿ ಶನಿವಾರ ಬಂದಿದ್ದ ಭಕ್ತರು –ಪಿಟಿಐ ಚಿತ್ರ
ಅಯ್ಯಪ್ಪ ದರ್ಶನಕ್ಕಾಗಿ ಶನಿವಾರ ಬಂದಿದ್ದ ಭಕ್ತರು –ಪಿಟಿಐ ಚಿತ್ರ   

ತಿರುವನಂತಪುರ: ಶಬರಿಮಲೆ ದೇವಸ್ಥಾನದ ಬಾಗಿಲನ್ನು ಶನಿವಾರ ಸಂಜೆ 5 ಗಂಟೆಗೆ ತೆರೆಯಲಾಗಿದೆ. ಮೊದಲ ದಿನವೇ ದೇಗುಲ ಪ್ರವೇಶಕ್ಕಾಗಿ ಬಂದಿದ್ದ 10 ರಿಂದ 50 ವರ್ಷದೊಳಗಿನ ಕನಿಷ್ಠ ಮೂವರು ಮಹಿಳೆಯರನ್ನು ಪೊಲೀಸರು ತಡೆದು, ವಾಪಸ್‌ ಕಳುಹಿಸಿದ್ದಾರೆ.

ಆ ಮೂಲಕ ಶಬರಿಮಲೆ ವಿಚಾರದಲ್ಲಿ ತನ್ನ ನಿಲುವು ಬದಲಾಗಿದೆ ಎಂಬುದನ್ನು ಕೇರಳ ಸರ್ಕಾರವು ಸೂಚಿಸಿದಂತಾಗಿದೆ. ಎಲ್ಲಾ ವಯೋಮಾನದ ಮಹಿಳೆಯರಿಗೆ ದೇವಸ್ಥಾನದೊಳಗೆ ಪ್ರವೇಶ ನೀಡುವುದಕ್ಕೆ ಸಂಬಂಧಿಸಿದ ತೀರ್ಪಿನ ಮರು ಪರಿಶೀಲನಾ ಅರ್ಜಿಯನ್ನು ಸುಪ್ರೀಂ ಕೋರ್ಟ್‌ನ ಐವರು ಸದಸ್ಯರ ಪೀಠವು ವಿಸ್ತೃತ ಪೀಠಕ್ಕೆ ವರ್ಗಾಯಿಸಿದೆ. ಈ ಕುರಿತ ಅಂತಿಮ ತೀರ್ಪು ಬರುವವರೆಗೆ 10ರಿಂದ 50 ವರ್ಷದೊಳಗಿನ ಮಹಿಳೆಯರಿಗೆ ಪ್ರವೇಶ ನೀಡದಿರಲು ಕೇರಳ ಸರ್ಕಾರ ತೀರ್ಮಾನಿಸಿದೆ.

ಆಂಧ್ರ ಪ್ರದೇಶದ ವಿಜಯವಾಡದಿಂದ ಬಂದಿದ್ದ 40 ಮಂದಿ ಭಕ್ತರ ತಂಡದಲ್ಲಿದ್ದ ಕೆಲವು ಮಹಿಳೆಯರನ್ನು ಶನಿವಾರ ವಾಪಸ್‌ ಕಳುಹಿಸಲಾಗಿದೆ.

ADVERTISEMENT

ದೇವಸ್ಥಾನದಿಂದ ಸುಮಾರು 5 ಕಿ.ಮೀ. ದೂರ, ಪಂಪಾನದಿಯ ಬಳಿ ಇವರನ್ನು ಮಹಿಳಾ ಪೊಲೀಸರು ತಡೆದು, ವಯಸ್ಸಿನ ಪ್ರಮಾಣಪತ್ರ ತೋರಿಸುವಂತೆ ಸೂಚಿಸಿದರು. ಅವರಲ್ಲಿ ಮೂವರು ಮಹಿಳೆಯರು 10ರಿಂದ 50 ವರ್ಷದೊಳಗಿನವರು ಎಂದು ಪತ್ತೆಯಾಗಿದೆ. ಆ ಮಹಿಳೆಯರಿಗೆ ಮುಂದೆ ಪ್ರಯಾಣ ಬೆಳೆಸಲು ಅವಕಾಶ ನಿರಾಕರಿಸಿದ ಪೊಲೀಸರು, ಹಿಂತಿರುಗಿ ಹೋಗುವಂತೆ ಸೂಚಿಸಿದರು. ಪೊಲೀಸರ ಕ್ರಮಕ್ಕೆ ಯಾವುದೇ ವಿರೋಧ ವ್ಯಕ್ತಪಡಿಸದೆ ಅವರು ಮರಳಿದ್ದಾರೆ.

‘ಇಲ್ಲಿಗೆ ಬರುವ ಭಕ್ತರಿಗೆ ಶಬರಿಮಲೆಯ ಸಂಪ್ರದಾಯ ಮತ್ತು ನಂಬಿಕೆಗಳ ಬಗ್ಗೆ ತಿಳಿವಳಿಕೆ ಮೂಡಿಸಲಾಗುತ್ತಿದೆ. ಇಲ್ಲಿಗೆ ಎಲ್ಲಾ ವಯೋಮಾನದ ಮಹಿಳೆಯರಿಗೆ ಪ್ರವೇಶವಿಲ್ಲ ಎಂಬುದು ಹೆಚ್ಚಿನವರಿಗೆ ತಿಳಿದಿಲ್ಲ’ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ. ಮಹಿಳೆಯರಿಗೆ ದೇವಸ್ಥಾನದೊಳಗೆ ಪ್ರವೇಶಿಸಲು ಅವಕಾಶ ನೀಡದಿರುವ ಸರ್ಕಾರದ ಕ್ರಮವನ್ನು ಎಲ್‌ಡಿಎಫ್‌ನ ಅಂಗ ಸಂಸ್ಥೆಯೊಂದು ಟೀಕಿಸಿದೆ. ‘ಸರ್ಕಾರವು ತನ್ನ ನಿಲುವನ್ನು ಮೃದುಗೊಳಿಸಿದ್ದು, ಒಟ್ಟಾರೆ ಹೋರಾಟದ ಉದ್ದೇಶವನ್ನೇ ವಿಫಲಗೊಳಿಸಿದೆ’ ಎಂದಿದೆ.

ಕಳೆದ ವರ್ಷ ಬಿಂದು ಹಾಗೂ ಕನಕದುರ್ಗಾ ಎಂಬ ಇಬ್ಬರು ಮಹಿಳೆಯರು ಭಾರಿ ಹೋರಾಟ ನಡೆಸಿ ದೇವಾಲಯದೊಳಗೆ ಪ್ರವೇಶಿಸಿದ್ದರು. ಅವರಿಗೆ ಪೊಲೀಸ್‌ ಭದ್ರತೆಯನ್ನೂ ನೀಡಲಾಗಿತ್ತು. ‘ಈ ಬಾರಿ ಯಾರಿಗೂ ಭದ್ರತೆ ಒದಗಿಸುವುದಿಲ್ಲ’ ಎಂದು ಸರ್ಕಾರ ಘೋಷಿಸಿದೆ.

ಬಿಗಿ ಭದ್ರತೆ, ತಪಾಸಣೆ
ಶಬರಿಮಲೆಯ ಸುತ್ತ ಬಿಗಿ ಭದ್ರತಾ ವ್ಯವಸ್ಥೆ ಮಾಡಲಾಗಿದೆ. ಸುಮಾರು 10 ಸಾವಿರಕ್ಕೂ ಹೆಚ್ಚು ಪೊಲೀಸರು ಕಾವಲು ಕಾಯುತ್ತಿದ್ದಾರೆ. 10ರಿಂದ 50 ವರ್ಷದೊಳಗಿನ ಮಹಿಳೆಯರು ಬರುತ್ತಿಲ್ಲ ಎಂಬುದನ್ನು ಖಾತರಿಪಡಿಸಲು ಪೊಲೀಸರು ಶಬರಿಮಲೆಯತ್ತ ಬರುವ ಬಸ್‌ಗಳಲ್ಲಿ ತಪಾಸಣೆ ನಡೆಸುತ್ತಿರುವುದು ಶನಿವಾರ ಕಂಡುಬಂತು. ಪ್ರತಿ ವಾಹನದೊಳಗೂ ಪೊಲೀಸರು ಇಣುಕಿ ನೋಡುತ್ತಿದ್ದಾರೆ. ಮಹಿಳೆಯರ ಬ್ಯಾಗ್‌ಗಳ ತಪಾಸಣೆ ನಡೆಸುತ್ತಿರುವುದು ಸಹ ಕಂಡುಬಂದಿದೆ.

ತಮ್ಮ ಈ ಕ್ರಮವನ್ನು ಸಮರ್ಥಿಸಿಕೊಂಡಿರುವ ಪೊಲೀಸರು ‘ಚಳವಳಿಗಾರರು ಅಥವಾ ಗೊಂದಲ ಸೃಷ್ಟಿಸುವ ಉದ್ದೇಶ ಹೊಂದಿದವರು ದೇವಸ್ಥಾನದತ್ತ ಹೋಗುತ್ತಿಲ್ಲ ಎಂಬುದನ್ನು ಖಾತರಿಪಡಿಸಲು ಈ ಕ್ರಮ ಕೈಗೊಂಡಿದ್ದೇವೆ’ ಎಂದಿದ್ದಾರೆ.

‘ಮಹಿಳೆಯರಿಗೆ ದೇವಸ್ಥಾನದೊಳಗೆ ಪ್ರವೇಶ ನೀಡುವ ವಿಚಾರದಲ್ಲಿ ಪೊಲೀಸರಿಗೆ ನಾವು ಯಾವುದೇ ನಿರ್ದೇಶನ ನೀಡಿಲ್ಲ’ ಎಂದು ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ಅಧ್ಯಕ್ಷ ಎನ್‌. ವಾಸು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.