ನವದೆಹಲಿ: ಜಿ-23 ನಾಯಕ ಗುಲಾಂ ನಬಿ ಆಜಾದ್ ಶುಕ್ರವಾರ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಿದ್ದಾರೆ. ಭೇಟಿ ವೇಳೆ, ಪಕ್ಷವನ್ನು ಬಲಪಡಿಸಲು ಬೇಕಾದ ಅಗತ್ಯ ಸಲಹೆಗಳನ್ನು ಕಾಂಗ್ರೆಸ್ ಅಧ್ಯಕ್ಷರಿಗೆ ನೀಡಿರುವುದಾಗಿ ಅವರು ಹೇಳಿದ್ದಾರೆ.
ಸೋನಿಯಾ ಗಾಂಧಿ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಆಜಾದ್, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಎದುರಾಳಿ ಪಕ್ಷಗಳನ್ನು ಎದುರಿಸಲು ಹೇಗೆ ಸಿದ್ಧತೆ ಮಾಡಿಕೊಳ್ಳಬೇಕು ಮತ್ತು ಒಗ್ಗಟ್ಟಿನಿಂದ ಹೋರಾಡಬೇಕು ಎಂಬುದರ ಕುರಿತು ಚರ್ಚೆ ನಡೆಸಲಾಗಿದೆ. ಕಾಂಗ್ರೆಸ್ ಅಧ್ಯಕ್ಷರೊಂದಿಗಿನ ಸಭೆ ಉತ್ತಮವಾಗಿತ್ತು ಎಂದು ಅವರು ಹೇಳಿದ್ದಾರೆ.
‘ನಾನು ಸೋನಿಯಾ ಗಾಂಧಿಯವರನ್ನು ಭೇಟಿ ಮಾಡಿದ್ದು, ನಿಮಗೆ ಸುದ್ದಿಯಾಗಿರಬಹುದು. ಆದರೆ, ನಾವು ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಚರ್ಚಿಸಲು ಆಗಾಗ್ಗೆ ಕಾಂಗ್ರೆಸ್ ಅಧ್ಯಕ್ಷರನ್ನು ಭೇಟಿಯಾಗುತ್ತೇವೆ’ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.
‘ಸೋನಿಯಾ ಗಾಂಧಿಯವರು ಪಕ್ಷದ ಸಂಘಟನೆಯನ್ನು ಬಲಪಡಿಸಲು ನಾಯಕರ ಜೊತೆ ನಿರಂತರ ಚರ್ಚೆ ನಡೆಸುತ್ತಿದ್ದಾರೆ. ಕೆಲವು ದಿನಗಳ ಹಿಂದೆ ನಡೆದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಹೇಗೆ ಬಲಪಡಿಸಬೇಕು ಮತ್ತು ಸೋಲಿಗೆ ಕಾರಣಗಳೇನು (ಐದು ವಿಧಾನಸಭಾ ಚುನಾವಣೆಗಳಲ್ಲಿ) ಎಂದು ಕೇಳಿದ್ದರು. ನಾನೂ ಸಹ ನನ್ನ ಸಲಹೆಗಳನ್ನು ನೀಡಿದ್ದೆ’ ಎಂದು ಅವರು ಹೇಳಿದ್ಧಾರೆ.
ಪಕ್ಷದಲ್ಲಿ ಸಂಘಟನೆ ಬಲಪಡಿಸಲು ಬದಲಾವಣೆಗೆ ಒತ್ತಾಯಿಸಿ ಜಿ–23ಸದಸ್ಯರು ಬುಧವಾರ ಮತ್ತು ಗುರುವಾರ ಸರಣಿ ಸಭೆಗಳನ್ನು ನಡೆಸಿದ್ದರು.
‘ಸಾಮೂಹಿಕ ನಾಯಕತ್ವ’ದ ಬಗ್ಗೆ ಜಿ–23 ಸದಸ್ಯರಿಂದ ಒತ್ತಾಯ ಕೇಳಿ ಬಂದ ಬಳಿಕ ಗುರುವಾರ, ಹರಿಯಾಣದ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ಜೊತೆ ಕಾಂಗ್ರೆಸ್ ಪಕ್ಷದ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಮಾತುಕತೆ ನಡೆಸಿದ್ದರು. ಉಭಯ ನಾಯಕರು ಭಿನ್ನಮತೀಯರ ಪ್ರಮುಖ ಬೇಡಿಕೆಯಾದ ಪಕ್ಷದ ಸಂಘಟನೆಯ ಪುನಶ್ಚೇತನದ ಬಗ್ಗೆ ಚರ್ಚಿಸಿದ್ದಾರೆ ಎಂದು ತಿಳಿದುಬಂದಿದೆ.
ಐದು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋತ ನಂತರ ನಾಯಕತ್ವದ ವಿಷಯದಲ್ಲಿ ಹೆಚ್ಚು ಧ್ವನಿ ಎತ್ತುತ್ತಿರುವ ಜಿ-23 ಬಣದ ಜೊತೆ ಗಾಂಧಿ ಕುಟುಂಬವು ಮಾತುಕತೆಗೆ ಮುಂದಾಗಿದೆ.
ಶುಕ್ರವಾರದಂದು, ಆಜಾದ್ ಅವರು ಹಿರಿಯ ಕಾಂಗ್ರೆಸ್ ನಾಯಕ ಕರಣ್ ಸಿಂಗ್ ಅವರನ್ನು ಭೇಟಿಯಾದರು. ಹೋಳಿ ಹಬ್ಬದ ಹಿನ್ನೆಲೆಯಲ್ಲಿ ಸಿಂಗ್ ಅವರಿಗೆ ಶುಭಾಶಯ ತಿಳಿಸಲು ಬಂದಿರುವುದಾಗಿ ಅವರು ಹೇಳಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.