ನವದೆಹಲಿ: ಪ್ರತಿಸ್ಪರ್ಧಿ ಜಯಪ್ರದಾ ಕುರಿತು ನೀಡಿದ ‘ಖಾಕಿ ಚಡ್ಡಿ’ ಹೇಳಿಕೆಯಿಂದ ಸಮಾಜವಾದಿ ಪಕ್ಷದ ಅಭ್ಯರ್ಥಿ ಆಜಂ ಖಾನ್ ಮತ್ತೆ ವಿವಾದದಲ್ಲಿ ಸಿಲುಕಿದ್ದಾರೆ. ಆಜಂ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿರುವ ರಾಷ್ಟ್ರೀಯ ಮಹಿಳಾ ಆಯೋಗ ಅವರಿಗೆ ನೋಟಿಸ್ ಜಾರಿಗೊಳಿಸಿದೆ. ಅವರ ವಿರುದ್ಧ ಎಫ್‌ಐಆರ್ ಕೂಡಾ ದಾಖಲಾಗಿದೆ.
ಚುನಾವಣಾ ಪ್ರಚಾರದ ವೇಳೆ ಮಾತನಾಡಿದ್ದ ಆಜಂ ಖಾನ್ ‘ರಾಂಪುರದ ಜನ, ಉತ್ತರ ಪ್ರದೇಶ ಜನ, ಅಷ್ಟೇ ಏಕೆ, ಭಾರತದ ಜನರಿಗೆ ಆಕೆಯ ನೈಜ ಮುಖ ಅರ್ಥ ಮಾಡಿಕೊಳ್ಳಲು 17 ವರ್ಷಗಳೇ ಹಿಡಿಯಿತು. ಆದರೆ ಆಕೆ ಖಾಕಿ ಅಂಡರ್‌ವೇರ್ ಧರಿಸುತ್ತಾರೆ ಎಂಬುದು 17 ದಿನಗಳಲ್ಲೇ ನನಗೆ ತಿಳಿಯಿತು’ ಎಂದು ಹೇಳಿದ್ದರು. ಆದರೆ ಜಯಪ್ರದಾ ಹೆಸರನ್ನು ನೇರವಾಗಿ ಉಲ್ಲೇಖಿಸಿರಲಿಲ್ಲ.
ಆಜಂ ಹೇಳಿಕೆ ಅಸಭ್ಯವಾಗಿದ್ದು, ಮಹಿಳೆಯರ ಗೌರವಕ್ಕೆ ಧಕ್ಕೆ ತರುವಂತಿದೆ ಎಂದು ರಾಷ್ಟ್ರೀಯ ಮಹಿಳಾ ಆಯೋಗ ಟೀಕಿಸಿದೆ.
‘ಮಹಿಳೆಯರ ಘನತೆಯನ್ನು ಕುಂದಿಸುವ ಆಜಂ ಖಾನ್ ಹೇಳಿಕೆಯನ್ನು ಆಯೋಗ ಬಲವಾಗಿ ಖಂಡಿಸುತ್ತದೆ. ಈ ವಿಷಯದ ಕುರಿತು ಸೂಕ್ತ ವಿವರಣೆ ನೀಡಬೇಕು’ ಎಂದು ಆಯೋಗದ ಅಧೀನ ಕಾರ್ಯದರ್ಶಿ ಬರ್ನಾಲಿ ಶೋಮ್ ಅವರು ಅಜಂ ಖಾನ್‌ಗೆ ನೀಡಿರುವ ನೋಟಿಸ್‌ನಲ್ಲಿ ತಿಳಿಸಿದ್ದಾರೆ.
ಆಜಂ ಸ್ಪಷ್ಟನೆ:ಬೇರೊಬ್ಬ ವ್ಯಕ್ತಿಯನ್ನು ಉಲ್ಲೇಖಿಸಿ ತಾವು ಖಾಕಿ ಹೇಳಿಕೆ ನೀಡಿದ್ದಾಗಿಖಾನ್ಸ್ಪಷ್ಟನೆ ನೀಡಿದ್ದಾರೆ. ‘150 ರೈಫಲ್‌ಗಳನ್ನು ತಂದಿದ್ದೇನೆ. ಒಂದು ವೇಳೆ ಖಾನ್ ಸಿಕ್ಕರೆ ಗುಂಡಿಟ್ಟು ಸಾಯಿಸುತ್ತೇನೆ ಎಂದು ಆ ವ್ಯಕ್ತಿ ಹೇಳಿದ್ದ.ಆದರೆ ಆತ ಖಾಕಿ ಪ್ಯಾಂಟ್ ಧರಿಸಿದ್ದ ಎಂಬ ವಿಷಯ ಈಗಬಯಲಾಗಿದೆ’ ಎಂದು ಆಜಂ ಖಾನ್ ತಮ್ಮ ಹೇಳಿಕೆಗೆ ಸಮರ್ಥನೆ ನೀಡಿದ್ದಾರೆ.
ಈ ಹಿಂದೆ ಸಮಾಜವಾದಿ ಪಕ್ಷದಿಂದ ರಾಂಪುರವನ್ನು ಪ್ರತಿನಿಧಿಸಿದ್ದ ಜಯಪ್ರದಾ ಜೊತೆ ಆಜಂ ಖಾನ್‌ಗೆ ಭಿನ್ನಾಭಿಪ್ರಾಯ ಇತ್ತು. ಅಮರ್ ಸಿಂಗ್ ಬೆಂಬಲಿತ ಜಯಪ್ರದಾ ಅವರು ಪಕ್ಷದಲ್ಲಿರುವುದು ಖಾನ್‌ಗೆ ಇಷ್ಟವಿರಲಿಲ್ಲ, ಹೀಗಾಗಿ ಅವರನ್ನು ಸತತವಾಗಿ ವಿರೋಧಿಸಿದ್ದರು. ಖಾನ್ ವಿರೋಧಿಯಾಗಿರುವ ಅಮರ್ ಸಿಂಗ್ ಕೂಡಾ ಈಗ ಸಮಾಜವಾದಿ ಪಕ್ಷದಲ್ಲಿಲ್ಲ. ಅವರು ಬಿಜೆಪಿಯನ್ನು ಬೆಂಬಲಿಸುತ್ತಿದ್ದಾರೆ.
‘ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ’
ಆಜಂ ಖಾನ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಜಯಪ್ರದಾ, ‘ಇದು ನನಗೆ ಹೊಸದೇನಲ್ಲ. ನಾನು 2009ರಲ್ಲಿ ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿದ್ದೆ. ಆಗ ನನ್ನ ಬಗ್ಗೆ ಅವರು ನೀಡಿದ್ದ ಹೇಳಿಕೆಯನ್ನು ವಿರೋಧಿಸಲು ಯಾರೂ ನನ್ನ ಬೆಂಬಲಕ್ಕೆ ಬಂದಿರಲಿಲ್ಲ’ ಎಂದಿದ್ದಾರೆ.
‘ನಾನೊಬ್ಬ ಮಹಿಳೆಯಾಗಿ ಅವರು ಏನು ಹೇಳಿದ್ದಾರೋ ಅದನ್ನು ಮತ್ತೆ ಉಚ್ಚರಿಸಲು ಇಷ್ಟಪಡುವುದಿಲ್ಲ. ಇಂತಹ ಹೇಳಿಕೆಗಳನ್ನು ಗಮನಿಸಿದರೆ, ನಾನು ಅವರಿಗೆ ಏನು ಮಾಡಿದ್ದೇನೆ ಎಂಬುದೇ ತಿಳಿಯುತ್ತಿಲ್ಲ. ಒಂದು ವೇಳೆ ಚುನಾವಣೆಯಲ್ಲಿ ಇಂತಹ ವ್ಯಕ್ತಿ ಗೆದ್ದುಬಿಟ್ಟರೆ, ಪ್ರಜಾಪ್ರಭುತ್ವದ ಗತಿ ಏನಾಗಬಹುದು? ಮಹಿಳೆಯರಿಗೆ ಸಮಾಜದಲ್ಲಿ ಜಾಗವೇ ಇಲ್ಲದಂತಾಗಿಬಿಡುತ್ತದೆ. ಆಗ ನಾವು ಎಲ್ಲಿ ಹೋಗುವುದು? ನಾನು ಸತ್ತರೆ ನಿಮಗೆ ತೃಪ್ತಿಯಾಗುತ್ತದೆಯೇ? ಭಯದಿಂದ ನಾನು ರಾಂಪುರ ಬಿಟ್ಟು ಹೊರನಡೆಯುತ್ತೇನೆ ಎಂದು ನೀವು ಭಾವಿಸಿದ್ದೀರಾ?’ ಎಂದು ಜಯಪ್ರದಾ ಪ್ರಶ್ನಿಸಿದ್ದಾರೆ.
***
ನಾನು ತಪ್ಪು ಮಾಡಿರುವುದು ಸಾಬೀತಾದರೆ ಸ್ಪರ್ಧೆಯಿಂದ ಹಿಂದೆ ಸರಿಯುತ್ತೇನೆ. ಯಾರ ಹೆಸರನ್ನೂ ಹೇಳಿಲ್ಲ, ಯಾರಿಗೂ ಅಪಮಾನ ಮಾಡಿಲ್ಲ. ನಾನು ಏನು ಹೇಳಿದ್ದೇನೆಂಬ ಅರಿವು ನನಗಿದೆ
-ಆಜಂ ಖಾನ್,ಸಮಾಜವಾದಿ ಪಕ್ಷದ ಅಭ್ಯರ್ಥಿ
ಅವಹೇಳನಕಾರಿ ಹೇಳಿಕೆ ನೀಡಿದ ಆಜಂ ಖಾನ್ ಅವರನ್ನು ಚುನಾವಣಾ ಸ್ಪರ್ಧೆಯಿಂದ ನಿರ್ಬಂಧಿಸಬೇಕು
-ಜಯಪ್ರದಾ,ಬಿಜೆಪಿ ಅಭ್ಯರ್ಥಿ
ರಾಂಪುರದಲ್ಲಿ ದ್ರೌಪದಿಯ ವಸ್ತ್ರಾಪಹರಣ ನಡೆಯುತ್ತಿದೆ. ಮುಲಾಯಂ ಅವರೇ, ಪಕ್ಷದ ಸ್ಥಾಪಕರಾಗಿರುವ ನೀವು ಭೀಷ್ಮನ ರೀತಿ ಕಣ್ಮುಚ್ಚಿ ಕುಳಿತುಕೊಳ್ಳಬೇಡಿ
-ಸುಷ್ಮಾ ಸ್ವರಾಜ್,ಕೇಂದ್ರ ಸಚಿವೆ
ಮಹಿಳೆಯರ ಬಗ್ಗೆ ಆಜಂ ಪದೇ ಪದೇ ಕೀಳಾಗಿ ಮಾತನಾಡುತ್ತಿದ್ದಾರೆ. ಚುನಾವಣೆಯಲ್ಲಿ ಅವರು ಸ್ಪರ್ಧಿಸದಂತೆ ಚುನಾವಣಾ ಆಯೋಗತಡೆ ಒಡ್ಡಬೇಕು
-ರೇಖಾ ಶರ್ಮಾ,ರಾಷ್ಟ್ರೀಯ ಮಹಿಳಾ ಆಯೋಗದ ಮುಖ್ಯಸ್ಥೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.