ಮೀರಠ್ (ಉತ್ತರ ಪ್ರದೇಶ): ಸಮಾಜವಾದಿ ಪಕ್ಷದ ನಾಯಕ ಆಜಂ ಖಾನ್ ವಿರುದ್ಧ ವಾಗ್ದಾಳಿ ನಡೆಸಿರುವ ಮಾಜಿ ಸಂಸದೆ ಜಯಪ್ರದಾ, ಖಾನ್ ಅವರ ತಪ್ಪಿಗೆ ಸರಿಯಾಗಿ ಶಿಕ್ಷೆಯಾಗುತ್ತಿದೆ. ಮಾಡಿದ ಪಾಪಕ್ಕೆ ಅವರು ಬೆಲೆ ತೆರಲೇಬೇಕು ಎಂದು ಹೇಳಿದ್ದಾರೆ.
ಭಾನುವಾರ ಇಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ರಾಜಕಾರಣದಲ್ಲಿ ರಾಜಕೀಯ ಪಕ್ಷಗಳೊಂದಿಗೆ ಭಿನ್ನಾಭಿಪ್ರಾಯಗಳು ಸಹಜ, ಆದರೆ ಮಹಿಳೆಯರಿಗೆ ಗೌರವ ನೀಡುವುದನ್ನೇ ಮರೆಯುವಷ್ಟು ಮತ್ತು ಬಡವರು, ದುರ್ಬಲರಿಗೆ ಅನ್ಯಾಯ ಮಾಡುವಷ್ಟು ಅಧಿಕಾರದ ದುರಹಂಕಾರ ಇರಬಾರದು’ ಎಂದು ಹೇಳಿದರು.
‘ಆಜಂ ಖಾನ್ ಮತ್ತು ಅವರ ಮಗ ಅಬ್ದುಲ್ಲಾ ಆಜಂ ಅವರಿಗೆ ಮಹಿಳೆಯರಿಗೆ ಗೌರವ ನೀಡುವುದೇ ಗೊತ್ತಿಲ್ಲ. ಆಜಂ ಖಾನ್ ಅವರ ಕೃತ್ಯಕ್ಕೆ ಸರಿಯಾಗಿ ಶಿಕ್ಷೆಯಾಗುತ್ತಿದೆ. ಅವರ ಆಟ ಮುಗಿದಿದೆ. ಇಬ್ಬರೂ ಮಾಡಿದ ಪಾಪಕ್ಕೆ ಬೆಲೆ ತೆರಲೇಬೇಕು’ ಎಂದು ಹೇಳಿದರು.
ಜಯಪ್ರದಾ ಮತ್ತು ಆಜಂಖಾನ್ ದೀರ್ಘಕಾಲದಿಂದ ಪರಸ್ಪರ ದ್ವೇಷ ಹೊಂದಿದ್ದಾರೆ. ಜಯಪ್ರದಾ ವಿರುದ್ಧ ‘ಖಾಕಿ ಚಡ್ಡಿ’ ಹೇಳಿಕೆ ನೀಡಿದ್ದ ಆಜಂ ಖಾನ್ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು.
2019ರ ಲೋಕಸಭಾ ಚುನಾವಣೆ ವೇಳೆ ದ್ವೇಷ ಭಾಷಣ ಮಾಡಿದ ಪ್ರಕರಣದಲ್ಲಿ ಆಜಂ ಖಾನ್ ಅವರಿಗೆ ನ್ಯಾಯಾಲಯವು ಮೂರು ವರ್ಷ ಜೈಲು ಶಿಕ್ಷೆ ವಿಧಿಸಿದೆ. ಹೀಗಾಗಿ ಅವರನ್ನು ರಾಂಪುರ ಕ್ಷೇತ್ರದ ಶಾಸಕ ಸ್ಥಾನದಿಂದ ಅನರ್ಹಗೊಳಿಸಲಾಗಿದೆ.
2008ರಲ್ಲಿ ಅಕ್ರಮವಾಗಿ ಚುನಾವಣೆಗೆ ಸ್ಪರ್ಧಿಸಿದ ಪ್ರಕರಣದಲ್ಲಿ ಅವರ ಮಗ ಅಬ್ದುಲ್ಲಾ ಆಜಂ ಅವರಿಗೆ ನ್ಯಾಯಾಲಯವು ಎರಡು ವರ್ಷ ಜೈಲು ಶಿಕ್ಷೆ ವಿಧಿಸಿದೆ. ಹೀಗಾಗಿ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.