ADVERTISEMENT

ಕಾಂಗ್ರೆಸ್‌ ಸೋಲಿಗೆ ‘ಬಿ–ಡಿ’ ಬಣ ಕಾರಣ:ಹರಿಯಾಣ ಚುನಾವಣಾ ವೈಫಲ್ಯಕ್ಕೆ ನಾಯಕರ ಕಿಡಿ

ಹರಿಯಾಣ ಚುನಾವಣಾ ವೈಫಲ್ಯಕ್ಕೆ ನಾಯಕರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2024, 15:48 IST
Last Updated 9 ಅಕ್ಟೋಬರ್ 2024, 15:48 IST
ಕಾಂಗ್ರೆಸ್‌
ಕಾಂಗ್ರೆಸ್‌   

ನವದೆಹಲಿ: ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸೋತ ಬೆನ್ನಲ್ಲೇ ‘ಬಿ–ಡಿ (ಭೂಪಿಂದರ್‌ ಹೂಡಾ ಮತ್ತು ಅವರ ಮಗ ದೀಪಿಂದರ್‌) ಬಣ’ದ ವಿರುದ್ಧ ಪಕ್ಷದ ನಾಯಕರಲ್ಲಿ ಆಕ್ರೋಶ ವ್ಯಕ್ತವಾಗಿದೆ.

ಪಕ್ಷದ ರಾಜ್ಯ ಉಸ್ತುವಾರಿ ದೀಪಕ್‌ ಬಬಾರಿಯಾ ಅವರ ಪಕ್ಷಪಾತ ಧೋರಣೆ ಮತ್ತು ಹೂಡಾ ಅವರಿಗೆ ಹೈಕಮಾಂಡ್‌ ಪೂರ್ಣ ಸ್ವಾತಂತ್ರ್ಯ ನೀಡಿದ್ದನ್ನು ನಾಯಕರು ಪ್ರಶ್ನಿಸತೊಡಗಿದ್ದಾರೆ.

ಹರಿಯಾಣದಲ್ಲಿ 2004ರಿಂದ 2009ರವರೆಗೆ ಪಕ್ಷದ ಉಸ್ತುವಾರಿಯಾಗಿದ್ದ ಮಾರ್ಗರೆಟ್‌ ಆಳ್ವಾ ಅವರು, ‘ವೈಯಕ್ತಿಕ ಆಕಾಂಕ್ಷೆಗಳು ಮತ್ತು ಪಕ್ಷದ ಒಳಿತಿನ ನಡುವೆ ಸಮತೋಲನ ಸಾಧಿಸುವಲ್ಲಿ ಕಾಂಗ್ರೆಸ್‌ ವಿಫಲವಾಗಿದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.

ADVERTISEMENT

ರಾಜ್ಯದಲ್ಲಿ ಎರಡು ಬಾರಿ ಕಾಂಗ್ರೆಸ್‌ ಗೆದ್ದಾಗ ಉಸ್ತುವಾರಿಯಾಗಿದ್ದ ಮಾರ್ಗರೆಟ್‌ ಆಳ್ವಾ ಅವರು, ‘ತಟಸ್ಥ ಧೋರಣೆಯಿಂದ ಪಕ್ಷವನ್ನು ಒಗ್ಗೂಡಿಸುವುದು ಬಹಳ ಮುಖ್ಯ. ಅಲ್ಲದೆ ವೈಯಕ್ತಿಕ ಆಶಯ ಮತ್ತು ಪಕ್ಷದ ಒಳಿತುಗಳ ನಡುವೆ ಸಮತೋಲನ ಕಾಯ್ದುಕೊಳ್ಳುವ ಅಗತ್ಯವೂ ಇದೆ’ ಎಂದು ಪ್ರತಿಕ್ರಿಯಿಸಿದ್ದಾರೆ.

‘ಈ ಚುನಾವಣೆಯಲ್ಲಿ ನಾವು ಸಮತೋಲನ ಕಾಯ್ದುಕೊಳ್ಳುವಲ್ಲಿ ವಿಫಲರಾದೆವು. ದೊಡ್ಡ ಪ್ರಮಾಣದಲ್ಲಿ ಬಂಡಾಯವೆದ್ದ ಅಭ್ಯರ್ಥಿಗಳ ಕೋಪ ಶಮನಗೊಳಿಸುವಲ್ಲಿಯೂ ವಿಫಲರಾದೆವು. ಈ ನಿಟ್ಟಿನಲ್ಲಿ ಪಕ್ಷದ ನಿರ್ವಹಣೆ ಸರಿಯಿರಲಿಲ್ಲ’ ಎಂದು ಅವರು ಹೇಳಿದ್ದಾರೆ. ಅಲ್ಲದೆ ನಾಯಕರ ನಡುವಿನ ಕ್ಷುಲ್ಲಕ ಜಗಳಗಳು ಸಮಾಜದ ಹಲವು ವಿಭಾಗಗಳಲ್ಲಿ ಅಸುರಕ್ಷಿತ ಭಾವನೆ ಮೂಡಿಸಿದ್ದರಿಂದ ಈ ಸೋಲುಂಟಾಗಿದೆ ಎಂದು ಅವರು ವಿಶ್ಲೇಷಿಸಿದ್ದಾರೆ. 

ಸೆಲ್ಜಾ ಬೆಂಬಲಿಗರ ಆಕ್ರೋಶ:

‘ಹರಿಯಾಣದ ಜನರು ಕಾಂಗ್ರೆಸ್‌ ಅನ್ನು ಬಯಸಿದ್ದರು. ಆದರೆ ಸೋಲಾಯಿತು. ಇದು ಕಾಂಗ್ರೆಸ್‌ಗಾದ ಸೋಲಲ್ಲ, ಬದಲಿಗೆ ಬಿ–ಡಿ ಬಣಕ್ಕಾದ ಸೋಲು. ಈ ಬಣದವರು ಬೇರೆಯವರಿಗಾಗಿ ಖೆಡ್ಡಾ ತೋಡುತ್ತಿದ್ದರು. ಇದೀಗ ಅವರೇ ಅದರಲ್ಲಿ ಸಿಲುಕಿದ್ದಾರೆ’ ಎಂದು ಕುಮಾರಿ ಸೆಲ್ಜಾ ಅವರ ನಿಷ್ಠಾವಂತ ಮತ್ತು ಅಂಬಾಲ ಕಂಟೋನ್ಮೆಂಟ್‌ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಪರ್ವಿಂದರ್‌ ಪಾಲ್‌ ಪರಿ ಬೇಸರ ವ್ಯಕ್ತಪಡಿಸಿದ್ದಾರೆ.

ಸೆಲ್ಜಾ ಅವರ ಮತ್ತೊಬ್ಬ ನಿಷ್ಠಾವಂತರಾದ ಶಂಶೇರ್‌ ಸಿಂಗ್‌ ಗೋಗಿ, ‘ಸೆಲ್ಜಾ ಅವರನ್ನು ಪಕ್ಷ ಅವಮಾನಿಸಿದೆ ಎಂಬ ಭಾವನೆ ದಲಿತರಲ್ಲಿ ಮೂಡಿದ ಕಾರಣಕ್ಕೆ, ಅವರು ನಮಗೆ ಮತ ಹಾಕಿಲ್ಲ. ಇದು ಸ್ಪಷ್ಟವಾಗಿ ಹೂಡಾ ಬಣಕ್ಕಾದ ಸೋಲು’ ಎಂದು ಬಣ್ಣಿಸಿದ್ದಾರೆ.

ಹರಿಯಾಣದಲ್ಲಿ ಇಂಡಿಯಾ ಮೈತ್ರಿಯೊಂದಿಗೆ ಎಎಪಿಯನ್ನು ಕರೆದೊಯ್ಯಲು ರಾಹುಲ್‌ ಗಾಂಧಿ ಬಯಸಿದ್ದರು. ಆದರೆ ರಾಜ್ಯದ ಕಾಂಗ್ರೆಸ್‌ ನಾಯಕರು ಅದಕ್ಕೆ ಅವಕಾಶ ನೀಡಲಿಲ್ಲ. ಅಲ್ಲದೆ ಇತರ ನಾಯಕರನ್ನು ಸಂಪೂರ್ಣವಾಗಿ ಕಡೆಗಣಿಸಿ, ಹೂಡಾ ಅವರಿಗಷ್ಟೇ ಮಣೆ ಹಾಕಲಾಗಿತ್ತು. ಜಾಟ್‌ ಅಲ್ಲದ ಸಮುದಾಯವನ್ನು ಕಡೆಗಣಿಸಲಾಗಿದೆ ಎಂಬ ಸಂದೇಶ ಜನರಿಗೆ ಹೋದದ್ದು, ಚುನಾವಣೆಯ ಸೋಲಿಗೆ ಕಾರಣವಾಯಿತು ಎಂದು ಕೆಲ ನಾಯಕರು ವಿವರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.