ನವದೆಹಲಿ: ಅಲೋಪತಿ ಔಷಧಗಳ ಕುರಿತು ನೀಡಿದ್ದ ವಿವಾದಾತ್ಮಕ ಹೇಳಿಕೆಯನ್ನು ಯೋಗ ಗುರು ಬಾಬಾ ರಾಮ್‌ದೇವ್ ಭಾನುವಾರ ರಾತ್ರಿ ಹಿಂಪಡೆದುಕೊಂಡಿದ್ದಾರೆ.
‘ಅಲೋಪತಿ ಒಂದು ಅವಿವೇಕದ ವಿಜ್ಞಾನ. ಅಲೋಪತಿ ಔಷಧಿಗಳನ್ನು ತೆಗೆದುಕೊಂಡ ನಂತರ ಲಕ್ಷಾಂತರ ಜನರು ಮೃತಪಟ್ಟಿದ್ದಾರೆ’ ಎಂಬುದಾಗಿ ರಾಮ್‌ದೇವ್ ಹೇಳಿದ್ದರು.
ರಾಮ್‌ದೇವ್ ಹೇಳಿಕೆಗೆ ಭಾರತೀಯ ವೈದ್ಯಕೀಯ ಸಂಸ್ಥೆ (ಐಎಂಎ) ತೀವ್ರ ಆಕ್ರೋಶ ವ್ಯಕ್ತಪಡಿಸಿತ್ತು. ದೆಹಲಿ ವೈದ್ಯಕೀಯ ಸಂಘವು (ಡಿಎಂಎ) ದೆಹಲಿಯ ದರಿಯಾಗಂಜ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿತ್ತು.
ವಿವಾದದ ಹಿನ್ನೆಲೆಯಲ್ಲಿ ರಾಮ್‌ದೇವ್ ಅವರಿಗೆ ಪತ್ರ ಬರೆದಿದ್ದ ಆರೋಗ್ಯ ಸಚಿವ ಹರ್ಷವರ್ಧನ್ 'ನಿಮ್ಮ ಹೇಳಿಕೆಯು ಕೊರೊನಾ ವಾರಿಯರ್‌ಗಳನ್ನು ಅಪಮಾನಿಸುತ್ತಿದೆ. ದೇಶದ ಜನರ ಭಾವನೆಗಳನ್ನು ಘಾಸಿಗೊಳಿಸುತ್ತಿದೆ. ಅಲೋಪತಿ ಕುರಿತ ನಿಮ್ಮ ಹೇಳಿಕೆಯು ಆರೋಗ್ಯ ಕಾರ್ಯಕರ್ತರ ಆತ್ಮಸ್ಥೈರ್ಯಕ್ಕೆ ಧಕ್ಕೆ ತರುತ್ತಿದೆ. ಕೋವಿಡ್ ವಿರುದ್ಧದ ನಮ್ಮ ಹೋರಾಟವನ್ನು ದುರ್ಬಲಗೊಳಿಸುತ್ತಿದೆ,' ಎಂದಿದ್ದರು. ಅಲೋಪತಿ ಕುರಿತ ತಮ್ಮ ಹೇಳಿಕೆಯನ್ನು ಹಿಂತೆಗೆದುಕೊಳ್ಳುವಂತೆಯೂ ರಾಮ್‌ದೇವ್‌ಗೆ ಸಚಿವರು ಆಗ್ರಹಿಸಿದ್ದರು.
ಆರೋಗ್ಯ ಸಚಿವರ ಪತ್ರಕ್ಕೆ ಟ್ವೀಟ್ ಮೂಲಕ ಪ್ರತಿಕ್ರಿಯಿಸಿರುವ ರಾಮ್‌ದೇವ್, 'ಗೌರವಾನ್ವಿತ ಸಚಿವರೇ, ನಾನು ನಿಮ್ಮ ಪತ್ರವನ್ನು ಸ್ವೀಕರಿಸಿದ್ದೇನೆ. ಅಲೋಪತಿ ವೈದ್ಯಕೀಯ ಪದ್ಧತಿ ಕುರಿತ ಹೇಳಿಕೆಯನ್ನು ಹಿಂಪಡೆದುಕೊಳ್ಳುತ್ತೇನೆ' ಎಂದು ರಾಮ್‌ದೇವ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.