ADVERTISEMENT

ಸಿದ್ದೀಕಿ ಹತ್ಯೆ ಪ್ರಕರಣ: ಮತ್ತೊಬ್ಬನ ಬಂಧನ, 21ರವರೆಗೆ ಪೊಲೀಸ್‌ ವಶಕ್ಕೆ

ಪಿಟಿಐ
Published 15 ಅಕ್ಟೋಬರ್ 2024, 13:57 IST
Last Updated 15 ಅಕ್ಟೋಬರ್ 2024, 13:57 IST
.
.   

ಮುಂಬೈ: ಮಹಾರಾಷ್ಟ್ರದ ಎನ್‌ಸಿಪಿ (ಅಜಿತ್‌ ಪವಾರ ಬಣ) ನಾಯಕ, ಮಾಜಿ ಸಚಿವ ಬಾಬಾ ಸಿದ್ದೀಕಿ (66) ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹರೀಶ್‌ಕುಮಾರ್‌ ಬಾಲಕರಾಮ್‌ (23) ಎಂಬುವರನ್ನು ಬಂಧಿಸಿರುವುದಾಗಿ ಮುಂಬೈ ಪೊಲೀಸರು ಮಂಗಳವಾರ ತಿಳಿಸಿದ್ದಾರೆ.

ಉತ್ತರ ಪ್ರದೇಶದ ಬಹರಾಯಿಚ್‌ ಮೂಲದ ಬಾಲಕರಾಮ್‌ ಅನ್ನು ಬಹರಾಯಿಚ್‌ನಲ್ಲಿ ಸೋಮವಾರ ಬಂಧಿಸಿ, ಮಂಗಳವಾರ ಬೆಳಿಗ್ಗೆ ಮುಂಬೈಗೆ ಕರೆತರಲಾಯಿತು. ಈತ ಪುಣೆಯಲ್ಲಿ ಗುಜರಿ ವ್ಯಾಪಾರಿಯಾಗಿದ್ದು, ಸಿದ್ದೀಕಿ ಹತ್ಯೆಗಾಗಿ ಶೂಟರ್‌ಗಳಿಗೆ ಹಣ ಮತ್ತು ಇತರ ಸಾಮಗ್ರಿಗಳನ್ನು ಪೂರೈಸಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇದೇ 21ರವರೆಗೆ ಪೊಲೀಸ್‌ ವಶಕ್ಕೆ:

ADVERTISEMENT

ಆರೋಪಿ ಹರೀಶ್‌ಕುಮಾರ್‌ನನ್ನು ಇದೇ 21ರವೆರಗೆ ಪೊಲೀಸ್‌ ವಶಕ್ಕೆ ಒಪ್ಪಿಸಿ ನ್ಯಾಯಾಲಯ ಆದೇಶಿಸಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿಯವರೆಗೆ ಒಟ್ಟು ನಾಲ್ವರನ್ನು ಬಂಧಿಸಿದಂತಾಗಿದೆ. ಇದಕ್ಕೂ ಮುನ್ನ ಪೊಲೀಸರು, ಹರಿಯಾಣದ ನಿವಾಸಿ ಗುರ್ಮೈಲ್‌ ಬಲ್ಜಿತ್‌ ಸಿಂಗ್‌ (23), ಉತ್ತರ ಪ್ರದೇಶದ ಧರ್ಮರಾಜ್‌ ರಾಜೇಶ್‌ ಕಶ್ಯಪ್‌ (19) ಮತ್ತು ಪುಣೆಯ ಸಹ ಸಂಚುಕೋರ ಪ್ರವೀಣ್‌ ಲೋಣಕರ್ ಅವರನ್ನು ಬಂಧಿಸಿದ್ದರು. ಮತ್ತೊಬ್ಬ ಶಂಕಿತ ಶೂಟರ್‌ ಶಿವಕುಮಾರ್‌ ಗೌತಮ್‌ ಮತ್ತು ಆರೋಪಿ ಮೊಹಮ್ಮದ್‌ ಜಿಶನ್‌ ಅಖ್ತರ್‌ಗಾಗಿ ಶೋಧ ಮುಂದುವರಿಸಿದ್ದಾರೆ.

ಸಿದ್ದೀಕಿ ಹತ್ಯೆಗೆ ಸಂಚುರೂಪಿಸಿದ್ದ ಕಶ್ಯಪ್‌, ಗೌತಮ್‌, ಪ್ರವೀಣ ಮತ್ತು ಶಿಬು ಲೋಣಕರ್ ಜತೆ ಬಾಲಕರಾಮ್‌ ಸಹ ಭಾಗಿಯಾಗಿದ್ದಾನೆ ಎಂದು ಅವರು ವಿವರಿಸಿದ್ದಾರೆ. 

ವಿವಿಧ ಆಯಾಮಗಳಲ್ಲಿ ತನಿಖೆ:

ಅಪರಾಧ ವಿಭಾಗದ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ. ಸುಫಾರಿ ಕೊಲೆ, ವ್ಯಾಪಾರ ಅಥವಾ ರಾಜಕೀಯ ವೈರತ್ವ ಅಥವಾ ಕೊಳಗೇರಿ ಪುನರ್‌ವಸತಿ ಯೋಜನೆಗೆ ಸಂಬಂಧಿಸಿದಂತೆ ಬರುತ್ತಿದ್ದ ಬೆದರಿಕೆಗಳು ಸೇರಿದಂತೆ ಹಲವು ಆಯಾಮಗಳಲ್ಲಿ ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಫೇಸ್‌ಬುಕ್‌, ಇನ್‌ಸ್ಟಾಗ್ರಾಮ್‌ಗೆ ಪತ್ರ:

ಸಿದ್ದೀಕಿ ಹತ್ಯೆ ಹೊಣೆ ಹೊತ್ತುಕೊಂಡು ಲಾರೆನ್ಸ್‌ ಬಿಷ್ಣೋಯ್‌ ತಂಡದ ಸದಸ್ಯರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವುದರ ಕುರಿತು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಈ ಪೋಸ್ಟ್‌ಗೆ ಸಂಬಂಧಿಸಿದಂತೆ ಮಾಹಿತಿ ಕೋರಿ ಪೊಲೀಸರು ಫೇಸ್‌ಬುಕ್‌ ಮತ್ತು ಇನ್‌ಸ್ಟಾಗ್ರಾಮ್‌ನ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.