ಮುಂಬೈ: ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ನಾಯಕ ಬಾಬಾ ಸಿದ್ದೀಕಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ಮತ್ತೊಬ್ಬ ಆರೋಪಿಯನ್ನು ಬಂಧಿಸಿದ್ದಾರೆ. ಈತ ಶೂಟರ್‌ಗಳಿಗೆ ಹಣಕಾಸು ಮತ್ತು ಇತರೆ ಲಾಜಿಸ್ಟಿಕ್ಸ್ ನೆರವು ನೀಡಿದ್ದ ಎಂದು ಅವರು ತಿಳಿಸಿದ್ದಾರೆ.
ಬಂಧಿತನನ್ನು ಹರೀಶ್ ಕುಮಾರ್ ಬಾಲಕ್ರಮ್(23) ಎಂದು ಗುರುತಿಸಲಾಗಿದೆ. ಈತ ಸಹ ಉತ್ತರ ಪ್ರದೇಶದ ಬಹ್ರೇಚ್ ಮೂಲದವನಾಗಿದ್ದಾನೆ. ಈತ ಮಹಾರಾಷ್ಟ್ರದ ಪುಣೆಯ ವಾರ್ಜೆಯಲ್ಲಿ ಗುಜರಿ ವ್ಯಾಪಾರ ಮಾಡಿಕೊಂಡಿದ್ದ.
ಸೋಮವಾರವೇ ಉತ್ತರ ಪ್ರದೇಶದಲ್ಲಿ ಆರೋಪಿಯನ್ನು ಬಂಧಿಸಿರುವ ಪೊಲೀಸರು, ಇಂದು ಮಹಾರಾಷ್ಟ್ರಕ್ಕೆ ಕರೆತಂದಿದ್ದಾರೆ.
ಪ್ರಕರಣದಲ್ಲಿ ಈವರೆಗೆ 4 ಆರೋಪಿಗಳನ್ನು ಬಂಧಿಸಲಾಗಿದೆ. ಶೂಟರ್‌ಗಳಾದ ಹರಿಯಾಣ ನಿವಾಸಿ ಗುರ್ಮೈಲ್ ಬಲ್ಜಿತ್ ಸಿಂಗ್ (23), ಉತ್ತರ ಪ್ರದೇಶ ಮೂಲದ ಧರ್ಮರಾಜ್ ರಾಜೇಶ್ ಕಶ್ಯಪ್ (19) ಮತ್ತು ಪುಣೆಯಿಂದ ಸಹ ಸಂಚುಕೋರ ಪ್ರವೀಣ್ ಲೋಂಕರ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಉತ್ತರಪ್ರದೇಶದ ಬಹ್ರೇಚ್ ಮೂಲದ ಮತ್ತೊಬ್ಬ ಶೂಟರ್ ಶಿವಕುಮಾರ್ ಗೌತಮ್ ತಲೆಮರೆಸಿಕೊಂಡಿದ್ದಾನೆ.
ಬಾಬಾ ಸಿದ್ದೀಕಿ ಹತ್ಯೆಯ ಸಂಚಿನಲ್ಲಿ ಇತರೆ ಆರೋಪಿಗಳ ಜೊತೆ ಬಾಲಕ್ರಮ್ ಸಹ ಪಾತ್ರ ಹೊಂದಿದ್ದಾರೆ.
ಶನಿವಾರ ಮುಂಬೈನ ನಿರ್ಮಲಾ ನಗರ ಪ್ರದೇಶದಲ್ಲಿ ತಮ್ಮ ಮಗ, ಶಾಸಕ ಜೀಶನ್ ಸಿದ್ದೀಕಿ ಕಚೇರಿಯಿಂದ ಹೊರಬಂದ ಬಾಬಾ ಸಿದ್ದೀಕಿ ಮೇಲೆ ಮೂವರು ದುಷ್ಕರ್ಮಿಗಳು ಗುಂಡು ಹಾರಿಸಿದ್ದರು. ಬಳಿಕ, ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಸಿದ್ದೀಕಿ ಬದುಕುಳಿಯಲಿಲ್ಲ.
ಪ್ರಕರಣದ ಇತರೆ ಆರೋಪಿಗಳಾದ ಶಿವಕುಮಾರ್ ಗೌತಮ್, ಮೊಹಮ್ಮದ್ ಜೀಶನ್ ಅಖ್ತರ್ ಮತ್ತು ಇತರ ಆರೋಪಿಗಳ ಬಂಧನಕ್ಕೆ ಮುಂಬೈನ ಅಪರಾಧ ದಳದ ಪೊಲೀಸರು ಶೋಧ ನಡೆಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.