ಮುಂಬೈ: ಮಹಾರಾಷ್ಟ್ರದ ಎನ್‌ಸಿಪಿ (ಅಜಿತ್ ಪವಾರ್ ಬಣ) ನಾಯಕ, ಮಾಜಿ ಸಚಿವ ಬಾಬಾ ಸಿದ್ದೀಕಿ (66) ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು (ಶುಕ್ರವಾರ) ಮತ್ತೆ ಐವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಖಚಿತ ಮಾಹಿತಿ ಆಧರಿಸಿ ಮಹಾರಾಷ್ಟ್ರದ ರಾಯಘಡ ಜಿಲ್ಲೆಯ ಪನ್ವೇಲ್ ಮತ್ತು ಕರ್ಜತ್ ಪ್ರದೇಶಗಳಲ್ಲಿ ಕ್ರೈಂ ಬ್ರಾಂಚ್ ಪೊಲೀಸರು ದಾಳಿ ನಡೆಸಿದ್ದು, ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬಂಧಿತ ಆರೋಪಿಗಳು ಗ್ಯಾಂಗ್‌ಸ್ಟಾರ್ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನೊಂದಿಗೆ ಸಂಪರ್ಕದಲ್ಲಿದ್ದರು. ಬಾಬಾ ಸಿದ್ದೀಕಿ ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವುದು ದೃಢಪಟ್ಟಿದೆ ಎಂದು ಅವರು ಹೇಳಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿಯವರೆಗೆ ಒಟ್ಟು 9 ಮಂದಿಯನ್ನು ಬಂಧಿಸಿದಂತಾಗಿದೆ. ಇದಕ್ಕೂ ಮುನ್ನ ಪೊಲೀಸರು, ಹರಿಯಾಣದ ನಿವಾಸಿ ಗುರ್ಮೈಲ್ ಬಲ್ಜಿತ್ ಸಿಂಗ್ (23), ಉತ್ತರ ಪ್ರದೇಶದ ಹರೀಶ್‌ಕುಮಾರ್ ಬಾಲಕರಾಮ್ (23), ಧರ್ಮರಾಜ್ ರಾಜೇಶ್ ಕಶ್ಯಪ್ (19) ಮತ್ತು ಪುಣೆಯ ಸಹ ಸಂಚುಕೋರ ಪ್ರವೀಣ್ ಲೋಣಕರ್ ಅವರನ್ನು ಬಂಧಿಸಿದ್ದರು. ಮತ್ತೊಬ್ಬ ಶಂಕಿತ ಶೂಟರ್ ಶಿವಕುಮಾರ್ ಗೌತಮ್ ಮತ್ತು ಆರೋಪಿ ಮೊಹಮ್ಮದ್ ಜಿಶನ್ ಅಖ್ತರ್‌ಗಾಗಿ ಶೋಧ ಮುಂದುವರಿಸಿದ್ದಾರೆ.
ಅಕ್ಟೋಬರ್ 12ರಂದು ಮುಂಬೈನ ಬಾಂದ್ರಾ ಪ್ರದೇಶದ ನಿರ್ಮಲ್ ನಗರದಲ್ಲಿರುವ ಶಾಸಕ ಜೀಶನ್ ಸಿದ್ದೀಕಿ ಅವರ ಕಚೇರಿ ಬಳಿ ಬಾಬಾ ಸಿದ್ದೀಕಿ ಅವರ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದರು. ತೀವ್ರವಾಗಿ ಗಾಯಗೊಂಡಿದ್ದ ಅವರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.
ಬಾಬಾ ಸಿದ್ದೀಕಿ ಹತ್ಯೆಯು ಮಹಾರಾಷ್ಟ್ರ ರಾಜಕೀಯದಲ್ಲಿ ತಲ್ಲಣ ಸೃಷ್ಟಿಸಿದೆ. ಅದರಲ್ಲೂ, ಸಿದ್ದೀಕಿ ಅವರ ಹತ್ಯೆಯ ಹೊಣೆಯನ್ನು ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯಿ ತಂಡ ಹೊತ್ತುಕೊಂಡಿರುವುದು ಪ್ರಕರಣವನ್ನು ಮತ್ತಷ್ಟು ನಿಗೂಢಗೊಳಿಸಿದೆ.
ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್), ಶಸ್ತ್ರಾಸ್ತ್ರಗಳ ಕಾಯ್ದೆ ಹಾಗೂ ಮಹಾರಾಷ್ಟ್ರ ಪೊಲೀಸ್ ಕಾಯ್ದೆಯ ವಿವಿಧ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಲಾಗಿದೆ. ಇದು ಪೂರ್ವಯೋಜಿತ ಕೃತ್ಯ ಎಂದು ಪೊಲೀಸರು ಶಂಕಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.