ADVERTISEMENT

ಸಿದ್ದೀಕಿ ಹತ್ಯೆ: ಶೂಟರ್‌ಗಾಗಿ ತೀವ್ರ ಶೋಧ

ಮಧ್ಯ ಪ್ರದೇಶದ ಉಜ್ಜಯಿನಿ, ಖಾಂಡ್ವಾದಲ್ಲಿ ಹುಡುಕಾಟ * ಮೂರನೇ ಆರೋಪಿ 21ರವರೆಗೆ ಪೊಲೀಸ್‌ ವಶಕ್ಕೆ

ಪಿಟಿಐ
Published 14 ಅಕ್ಟೋಬರ್ 2024, 22:54 IST
Last Updated 14 ಅಕ್ಟೋಬರ್ 2024, 22:54 IST
   

ಭೋಪಾಲ್‌/ ಮುಂಬೈ: ಮಹಾರಾಷ್ಟ್ರದ ಎನ್‌ಸಿಪಿ (ಅಜಿತ್‌ ಪವಾರ ಬಣ) ನಾಯಕ, ಮಾಜಿ ಸಚಿವ ಬಾಬಾ ಸಿದ್ದೀಕಿ (66) ಹತ್ಯೆ ಪ್ರಕರಣದಲ್ಲಿ ಶಂಕಿತ ಶೂಟರ್‌ ಶಿವಕುಮಾರ್‌ ಗೌತಮ್‌ಗಾಗಿ ಮುಂಬೈ ಪೊಲೀಸರು ಮಧ್ಯ ಪ್ರದೇಶದ ಉಜ್ಜಯಿನಿ ಮತ್ತು ಖಾಂಡ್ವಾ ಜಿಲ್ಲೆಗಳ ಪೂಜಾ ಸ್ಥಳಗಳ ಬಳಿ ತೀವ್ರ ಶೋಧ ನಡೆಸಿದ್ದಾರೆ. 

ಈ ಪ್ರಕಣದಲ್ಲಿ ಪೊಲೀಸರು ಇಲ್ಲಿಯವರೆಗೆ ಹರಿಯಾಣದ ನಿವಾಸಿ ಗುರ್ಮೈಲ್‌ ಬಲ್ಜಿತ್‌ ಸಿಂಗ್‌ (23), ಉತ್ತರ ಪ್ರದೇಶದ ಧರ್ಮರಾಜ್‌ ರಾಜೇಶ್‌ ಕಶ್ಯಪ್‌ (19) ಮತ್ತು ಪುಣೆಯ ಸಹ ಸಂಚುಕೋರ ಪ್ರವೀಣ್‌ ಲೋನ್ಕರ್‌ ಅವರನ್ನು ಬಂಧಿಸಿದ್ದಾರೆ. ಪ್ರಕರಣಕ್ಕೆ ಬೇಕಿರುವ ಮೊಹಮ್ಮದ್‌ ಜಿಶನ್‌ ಅಖ್ತರ್‌ ಮತ್ತು ಗೌತಮ್‌ಗಾಗಿ ಹುಡುಕಾಟ ನಡೆಸಿದ್ದಾರೆ. 

ಉತ್ತರ ಪ್ರದೇಶದ ಬಹರಾಯಿಚ್ ಜಿಲ್ಲೆಯವನಾದ ಗೌತಮ್‌ನ ಜಾಡು ಹಿಡಿದು ಮುಂಬೈ ಪೊಲೀಸರು ಮಧ್ಯ ಪ್ರದೇಶಕ್ಕೆ ಬಂದಿದ್ದು, ಸ್ಥಳೀಯ ಪೊಲೀಸರ ಜತೆಗೂಡಿ ಉಜ್ಜಯಿನಿ ಮತ್ತು ಖಾಂಡ್ವಾಗಳಲ್ಲಿನ ಪ್ರಸಿದ್ಧ ಮಹಾಕಾಲ್‌ ಮತ್ತು ಓಂಕಾರೇಶ್ವರ ದೇವಾಲಯಗಳ ಬಳಿಯೂ ಸೇರಿದಂತೆ ಇತರೆಡೆ ಶೋಧ ಕೈಗೊಂಡಿದ್ದಾರೆ.

ADVERTISEMENT

ಹತ್ಯೆಯ ಹೊಣೆ ಹೊತ್ತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದ ಲಾರೆನ್ಸ್‌ ಬಿಷ್ಣೋಯ್‌ ತಂಡದ ಸದಸ್ಯನ ಪತ್ತೆಗೂ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ಪ್ರಕರಣದ ಆರೋಪಿಗಳ ಪತ್ತೆಗಾಗಿ ಮುಂಬೈ ಪೊಲೀಸರು 15 ತಂಡಗಳಲ್ಲಿ ಕಾರ್ಯು ನಿರ್ವಹಿಸುತ್ತಿದ್ದಾರೆ.

ಇದೇ 21ರವರೆಗೆ ಪೊಲೀಸ್‌ ವಶಕ್ಕೆ:

ಮೂರನೇ ಆರೋಪಿ ಪ್ರವೀಣ್‌ ಲೋನ್ಕರ್‌ ಅನ್ನು ಇದೇ 21ರವರೆಗೆ ಪೊಲೀಸ್‌ ವಶಕ್ಕೆ ಒಪ್ಪಿಸಿ ಇಲ್ಲಿನ ನ್ಯಾಯಾಲಯ ಆದೇಶಿಸಿದೆ.  ಪೊಲೀಸರು ಪುಣೆಯಲ್ಲಿ ಆತನನ್ನು ಭಾನುವಾರ ಬಂಧಿಸಿದ್ದರು.

‘ಪ್ರವೀಣ್‌ ಲೋನ್ಕರ್‌ ಅವರ ಸಹೋದರ ಶುಭಂ ಜೈಲಿನಲ್ಲಿರುವ ಗ್ಯಾಂಗ್‌ಸ್ಟರ್‌ ಲಾರೆನ್ಸ್‌ ಬಿಷ್ಣೋಯ್‌ ಜತೆ ಸಂಬಂಧ ಹೊಂದಿದ್ದಾರೆ. ಸಿದ್ದೀಕಿ ಹತ್ಯೆಗೆ ಶುಭಂ ಲೋನ್ಕರ್‌ ಮತ್ತು ಇತರ ಆರೋಪಿಗಳು ಸಂಚು ರೂಪಿಸಿದ್ದರು ಮತ್ತು ಬಂದೂಕುಧಾರಿಗಳಿಗೆ ಶಸ್ತ್ರಾಸ್ತ್ರಗಳನ್ನು ಪೂರೈಸಿದ್ದರು’ ಎಂದು ಪೊಲೀಸ್‌ ಪರ ವಕೀಲರು ವಾದಿಸಿದರು.

ತನಿಖೆಯ ಭಾಗವಾಗಿ ಪ್ರವೀಣ್‌ ಅವರನ್ನು ಉತ್ತರ ಪ್ರದೇಶ, ರಾಜಸ್ಥಾನ ಮತ್ತು ಬಿಹಾರಕ್ಕೆ ಕರೆದೊಯ್ಯಬೇಕಿದೆ. ಹೀಗಾಗಿ ಅವರ ಕಸ್ಟಡಿ ಅಗತ್ಯವಿದೆ ಎಂದು ಅವರು ಕೋರಿದರು.

ಇದಕ್ಕೆ ಆಕ್ಷೇಪಿಸಿದ ಪ್ರವೀಣ್‌ ಪರ ವಕೀಲರು, ಶುಭಂ ಲೋನ್ಕರ್‌ ಅವರನ್ನು ಬಂಧಿಸದೆ ಪೊಲೀಸರು ಪ್ರವಿಣ್‌ ಅವರನ್ನು ಬಲಿಪಶು ಮಾಡುತ್ತಿದ್ದಾರೆ. ಪ್ರವೀಣ್‌ ಡೇರಿ ಅಂಗಡಿ ನಡೆಸುತ್ತಿದ್ದು, ಅವರ ವಿರುದ್ಧ ಯಾವುದೇ ಪಿತೂರಿ ಆರೋಪಗಳಿಲ್ಲ ಎಂದು ಪ್ರತಿಪಾದಿಸಿದರು. 

ವಾದ, ಪ್ರತಿವಾದ ಆಲಿಸಿದ ನ್ಯಾಯಾಧೀಶ ವಿ.ಆರ್‌.ಪಾಟೀಲ್ ಅವರು ಪ್ರವೀಣ್‌ ಅವರನ್ನು ಇದೇ 21ರವರೆಗೆ ಪೊಲೀಸ್‌ ವಶಕ್ಕೆ ಒಪ್ಪಿಸಿದರು.

ದೇಶದಾದ್ಯಂತ 700 ಸದಸ್ಯರನ್ನು ಹೊಂದಿರುವ ಗ್ಯಾಂಗ್‌ ಲಾರೆನ್ಸ್ ಬಿಷ್ಣೋಯ್‌ ಈಗ ದೊಡ್ಡ ಗ್ಯಾಂಗ್‌

ಮಾಜಿ ಸಚಿವ ಸಿದ್ದೀಕಿ ಹತ್ಯೆಯಲ್ಲಿ ಗ್ಯಾಂಗ್‌ಸ್ಟರ್‌ ಲಾರೆನ್ಸ್‌ ಬಿಷ್ಣೋಯ್‌ (31) ತಂಡದ ಹೆಸರು ಕೇಳಿ ಬಂದ ಬೆನ್ನಲ್ಲೇ ಅದೀಗ ದೊಡ್ಡ ಗ್ಯಾಂಗ್‌ ಆಗಿ ಬಿಂಬಿತವಾಗುತ್ತಿದೆ. ಬಿಷ್ಣೋಯ್‌ ಗ್ಯಾಂಗ್‌ ದೇಶದಾದ್ಯಂತ ವ್ಯಾಪಿಸಿದ್ದು ಶಾರ್ಪ್‌ಶೂಟರ್‌ಗಳೂ ಸೇರಿದಂತೆ ಸುಮಾರು 700 ಸದಸ್ಯರನ್ನು ಹೊಂದಿದೆ ಎಂದು ರಾಷ್ಟ್ರೀಯ ತನಿಖಾ ಏಜೆನ್ಸಿಯ (ಎನ್‌ಐಎ) ಮೂಲಗಳು ತಿಳಿಸಿವೆ. ರಾಜಸ್ಥಾನದಲ್ಲಿ ಕಾಲು ಶತಮಾನಕ್ಕೂ ಹಿಂದೆ ಕೃಷ್ಣಮೃಗಗಳನ್ನು ಕೊಂದ ಆರೋಪ ಎದುರಿಸುತ್ತಿರುವ ಬಾಲಿವುಡ್‌ ಪ್ರಸಿದ್ಧ ನಟ ಸಲ್ಮಾನ್‌ ಖಾನ್‌ಗೆ ಲಾರೆನ್ಸ್‌ ಬಿಷ್ಣೋಯ್‌ ಕಡೆಯಿಂದ ಸರಣಿ ಬೆದರಿಕೆಗಳು ಬಂದಿದ್ದವು. ಬಿಷ್ಣೋಯ್‌ ಸಮುದಾಯವು ಕೃಷ್ಣಮೃಗಗಳನ್ನು ಪವಿತ್ರ ಪ್ರಾಣಿಗಳೆಂದು ಪರಿಗಣಿಸುತ್ತದೆ. ಹೀಗಾಗಿ ಲಾರೆನ್ಸ್‌ ಸಲ್ಮಾನ್‌ ಖಾನ್‌ ವಿರುದ್ಧ ತಿರುಗಿಬಿದ್ದಿದ್ದಾರೆ ಎನ್ನಲಾಗುತ್ತಿದೆ. 1998ರ ಅಕ್ಟೋಬರ್ 1–2 ಮಧ್ಯರಾತ್ರಿ ಜೋಧ್‌ಪುರದ ಹೊರವಲಯದಲ್ಲಿನ ಕಂಕಣಿ ಗ್ರಾಮದ ಬಳಿ ಸಲ್ಮಾನ್‌ ಖಾನ್‌ ಎರಡು ಕೃಷ್ಣಮೃಗಗಳನ್ನು ಗುಂಡಿಕ್ಕಿ ಕೊಂದ ಆರೋಪ ಎದುರಿಸುತ್ತಿದ್ದಾರೆ. ಬಾಲಿವುಡ್‌ ಸಿನಿಮಾ ‘ಹಮ್‌ ಸಾಥ್‌ ಸಾಥ್‌ ಹೇ’ ಚಿತ್ರೀಕರಣದ ವೇಳೆ ಈ ಘಟನೆ ನಡೆದಿದೆ. ಈ ವೇಳೆ ಸಲ್ಮಾನ್‌ ಅವರ ಜತೆಗೆ ನಟರಾದ ಸೈಫ್‌ ಅಲಿ ಖಾನ್‌ ಸೋನಾಲಿ ಬೇಂದ್ರೆ ಟಬು ಮತ್ತು ನೀಲಂ ಸಹ ಇದ್ದರು.  ಜೋಧ್‌ಪುರ ನ್ಯಾಯಾಲಯವು 2018ರ ಏಪ್ರಿಲ್‌ನಲ್ಲಿ ಸಲ್ಮಾನ್‌ ಖಾನ್‌ಗೆ ಐದು ವರ್ಷಗಳ ಸಜೆ ಮತ್ತು ₹ 10 ಸಾವಿರ ದಂಡ ವಿಧಿಸಿತ್ತು. ಈ ಶಿಕ್ಷೆಯನ್ನು ಸಲ್ಮಾನ್‌ ರಾಜಸ್ಥಾನದ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದಾರೆ.  ಆ ನಂತರವೂ ಲಾರೆನ್ಸ್‌ ಬಿಷ್ಣೋಯ್‌ ಕಡೆಯಿಂದ ಸಲ್ಮಾನ್ ಖಾನ್‌ಗೆ ನಿರಂತರ ಬೆದರಿಕೆಗಳು ಬಂದಿವೆ. ಅಲ್ಲದೆ ಬಾಂದ್ರಾದಲ್ಲಿ ಸಲ್ಮಾನ್‌ ಮನೆ ಬಳಿ ಬಿಷ್ಣೋಯ್‌ ಪಡೆ ನಿಗಾ ಸಹ ವಹಿಸಿದೆ ಎಂಬ ಮಾಹಿತಿಯಿದೆ. ಸದ್ಯ ಡ್ರಗ್ಸ್ ಪ್ರಕರಣದಲ್ಲಿ ಬಂಧಿತರಾಗಿ ಗುಜರಾತಿನ ಸಬರಮತಿ ಜೈಲಿನಲ್ಲಿರುವ ಲಾರೆನ್ಸ್‌ ಬಿಷ್ಣೋಯ್‌ ಪಂಜಾಬಿ ಗಾಯಕ ಸಿಧು ಮೂಸೆವಾಲಾ ಖಾಲಿಸ್ತಾನಿ ಪ್ರೆತ್ಯೇಕತಾವಾದಿ ಸುಖ್‌ದೂಲ್‌ ಸಿಂಗ್‌ ಹತ್ಯೆ ಸೇರಿದಂತೆ ಎರಡು ಡಜನ್‌ಗೂ ಹೆಚ್ಚು ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ಕೆನಡಾ ಮೂಲದ ಗ್ಯಾಂಗ್‌ಸ್ಟರ್‌ ಗೋಲ್ಡಿ ಬ್ರಾರ್‌ ಜತೆಗೂ ಲಾರೆನ್ಸ್‌ಗೆ ಸಂಬಂಧವಿದೆ. 1993 ಫೆಬ್ರುವರಿ 12ರಂದು ಜನಿಸಿದ ಲಾರೆನ್ಸ್‌ ರಾಜಸ್ಥಾನ ಹರಿಯಾಣ ಮತ್ತು ಪಂಜಾಬ್‌ನಲ್ಲಿ ಬೆಳೆದಿದ್ದಾರೆ. ಚಂಡೀಗಢದ ಡಿಎವಿ ಕಾಲೇಜಿನಲ್ಲಿ ಪದವಿ ಪಂಜಾಬ್‌ ವಿಶ್ವವಿದ್ಯಾಲಯದಲ್ಲಿ ಕಾನೂನು ಪದವಿ ಪಡೆದಿರುವ ಅವರು ಕಾಲೇಜು ದಿನಗಳಲ್ಲಿ ವಿದ್ಯಾರ್ಥಿ ರಾಜಕೀಯದಲ್ಲಿ ಸಕ್ರಿಯರಾದ ಬಳಿಕ ಕ್ರಮೇಣ ಅಪರಾಧ ಜಗತ್ತು ಪ್ರವೇಶಿಸಿದರು. ವರ್ಷಗಳು ಕಳೆದಂತೆ ತನ್ನ ಜಾಲವನ್ನು ವಿಸ್ತರಿಸಿಕೊಂಡು ಜೈಲಿನಿಂದಲೇ ಅಪರಾಧಿಗಳೊಂದಿಗೆ ಸಂಪರ್ಕ ಬೆಳೆಸಿಕೊಂಡಿದ್ದಾರೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಮೂರು ದಶಕಗಳಲ್ಲಿ ಕಂಡ ದೊಡ್ಡ ರಾಜಕೀಯ ಹತ್ಯೆ

ಮುಂಬೈ: ಬಾಬಾ ಸಿದ್ದೀಕಿ ಹತ್ಯೆಯು ಮೂರು ದಶಕಗಳಲ್ಲಿ ಮುಂಬೈ ಕಂಡಿರುವ ಅತಿ ದೊಡ್ಡ ರಾಜಕೀಯ ವ್ಯಕ್ತಿಯ ಹತ್ಯೆಯಾಗಿದೆ.  ಮುಂಬೈನಲ್ಲಿ 30 ವರ್ಷಗಳಲ್ಲಿ ಎರಡು ದೊಡ್ಡ ಪ್ರಕರಣಗಳನ್ನು ಹೊರತುಪಡಿಸಿದರೆ ಶಾಸಕರು ಸಂಸದರು ಕೊಲೆಯಾದ ಪ್ರಕರಣ ಕಂಡಿರಲಿಲ್ಲ ಎಂದು ಗುಪ್ತಚರ ಅಧಿಕಾರಿಯೊಬ್ಬರು ತಿಳಿಸಿದರು. ಸ್ಥಳೀಯ ನಾಯಕರು ಕಾರ್ಪೊರೇಟರ್‌ಗಳ ಮೇಲೆ ಹಲವು ಬಾರಿ ಈ ರೀತಿಯ ದಾಳಿಗಳು ನಡೆದಿವೆ. ಅವುಗಳಲ್ಲಿ ಹೆಚ್ಚಿನವು ಆಸ್ತಿ ವಿವಾದಗಳಿಗೆ ಸಂಬಂಧಿಸಿದ್ದವು ಎಂದು ಅವರು ವಿವರಿಸಿದರು.  25ರಿಂದ 30 ವರ್ಷಗಳಲ್ಲಿ ಇಬ್ಬರು ದೊಡ್ಡ ರಾಜಕಾರಣಿಗಳು ಹತ್ಯೆಯಾಗಿತ್ತು. 1997ರ ಜನವರಿ 16ರಲ್ಲಿ ಡಾ. ದತ್ತ ಸಾಮಂತ್‌ ಮತ್ತು 2006ರ ಮೇ 3ರಂದು ಪ್ರಮೋದ್‌ ಮಹಾಜನ್‌ ಅವರು ಕೊಲೆಯಾಗಿದ್ದರು ಎಂದು ಅವರು ಮಾಹಿತಿ ನೀಡಿದರು. ಡಾ. ಸಾಮಂತ್‌ ಅವರು ಡಾಕ್ಟರ್‌ ಸಾಹೇಬ್‌ ಎಂದೇ ಪ್ರಸಿದ್ಧರಾಗಿದ್ದರು. ಅವರು ಜವಳಿ ಗಿರಣಿ ಕಾರ್ಮಿಕರ ಚಳವಳಿ ಮತ್ತು 1982ರ ಬಾಂಬೆ ಗಿರಣಿಗಳ ಮುಷ್ಕರದ ನೇತೃತ್ವ ವಹಿಸಿದ್ದರು. ಎಂಟನೇ ಲೋಕಸಭೆಯಲ್ಲಿ ಮುಂಬೈ ಸೌತ್‌ ಸೆಂಟ್ರಲ್‌ ಕ್ಷೇತ್ರವನ್ನು ಪಕ್ಷೇತರರಾಗಿ ಪ್ರತಿನಿಧಿಸಿದ್ದರು. ಅವರ ಹತ್ಯೆ ಪ್ರಕರಣದಲ್ಲಿ ಛೋಟಾ ರಾಜನ್‌ ಹೆಸರು ಕೇಳಿಬಂದಿತ್ತು. ಬಿಜೆಪಿಯ ಪ್ರಮುಖ ನಾಯಕರಾಗಿದ್ದ ಕೇಂದ್ರದ ಮಾಜಿ ಸಚಿವ ಪ್ರಮೋದ್‌ ಮಹಾಜನ್‌ ಅವರನ್ನು ಅವರ ಸಹೋದರ ಪ್ರವೀಣ್‌ ಮಹಾಜನ್‌ ಗುಂಡಿಕ್ಕಿ ಹತ್ಯೆ ಮಾಡಿದರು. 90ರ ದಶಕದಲ್ಲಿ ಬಿಜೆಪಿ ನಾಯಕ ಮತ್ತು ಮಾಜಿ ಶಾಸಕರಾದ ರಾಮದಾಸ್‌ ನಾಯಕ್‌ (ಖೇರ್ವಾಡಿ) ಪ್ರೇಮ್‌ ಕುಮಾರ್‌ ಶರ್ಮಾ (ಖೇತ್ವಾಡಿ) ಮತ್ತು ಮೌಲಾನಾ ಜಿಯಾವುದ್ದೀನ್‌ ಬುಖಾರಿಯ ಅವರ ಹತ್ಯೆಗಳಾಗಿದ್ದವು. ಈ ರೀತಿಯ ರಾಜಕೀಯ ವ್ಯಕ್ತಿಗಳ ಕೊಲೆಗಳ ಪೈಕಿ 1970ರ ಜೂನ್‌ 5ರಂದು ನಡೆದ ಕೃಷ್ಣ ದೇಸಾಯಿ ಅವರ ಹತ್ಯೆಯೇ ಮೊದಲನೇಯದ್ದು ಎಂದು ಅವರು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.