ಮುಂಬೈ: ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ನಾಯಕ ಮತ್ತು ಮಾಜಿ ಸಚಿವ ಬಾಬಾ ಸಿದ್ದೀಕಿ ಹತ್ಯೆಗೆ ಪುಣೆಯಲ್ಲಿ ಸಂಚು ರೂಪಿಸಲಾಗಿದೆ. ಟಾರ್ಗೆಟ್ ವ್ಯಕ್ತಿಯ ಗುರುತಿಗಾಗಿ ಫೋಟೊ, ಫ್ಲೆಕ್ಸ್ ಬ್ಯಾನರ್‌ಗಳನ್ನು ಶೂಟರ್‌ಗಳಿಗೆ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕೊಲೆಯ ಸಂಚಿನಲ್ಲಿ ಪುಣೆ ಮೂಲದ ಪ್ರವೀಣ ಲೋಂಕರ್, ಅವರ ಸಹೋದರ ಶುಭಂ ಲೋಂಕರ್ ಪಾತ್ರ ಇರುವ ಬಗ್ಗೆ ಮುಂಬೈ ಅಪರಾಧ ದಳದ ಪೊಲೀಸರು ಮಾಹಿ ಕಲೆ ಹಾಕಿದ್ದಾರೆ.
ಶಂಕಿತ ಎಲ್ಲ ಆರೋಪಿಗಳನ್ನು ಬಂಧಿಸಿದ ಬಳಿಕ ಹತ್ಯೆಯ ಹಿಂದಿನ ಉದ್ದೇಶ ಖಚಿತವಾಗಲಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಲೋಂಕರ್ ಸಹೋದರರೇ ಅಪರಾಧದ ಪ್ರಮುಖ ವ್ಯಕ್ತಿಗಳು ಎಂದು ಪೊಲೀಸರು ಗುರುತಿಸಿದ್ದಾರೆ. ಇವರಿಬ್ಬರು ಶೂಟರ್‌ಗಳಿಗೆ ಹಣಕಾಸು ಒದಗಿಸಿದ್ದಾರೆ. ಲಾಜಿಸ್ಟಿಕ್ಸ್ ಮತ್ತು ದಾಳಿಗೆ ಯೋಜನೆ ರೂಪಿಸಲು ಸಭೆಗಳನ್ನು ಆಯೋಜಿಸಿದ್ದಾರೆ. ಪ್ರವೀಣ್ ಅವರು ಶುಭಂ ಒಡೆತನದ ಡೈರಿಯಲ್ಲಿ ಕೆಲಸ ಮಾಡುತ್ತಿದ್ದರು. ಅಲ್ಲಿ ಅವರು ಶೂಟರ್‌ಗಳಾದ ಶಿವಕುಮಾರ್ ಗೌತಮ್ ಮತ್ತು ಧರ್ಮರಾಜ್ ಕಶ್ಯಪ್ ಅವರನ್ನು ಕೃತ್ಯಕ್ಕೆ ನೇಮಕ ಮಾಡಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಸಿದ್ದೀಕಿ ಹತ್ಯೆ ಮಾಡಿದ ಬಳಿಕ ಭಾರಿ ಪ್ರಮಾಣದ ಹಣ ನೀಡುವ ಭರವಸೆಯೊಂದಿಗೆ ಶೂಟರ್‌ಗಳಿಗೆ ಮುಂಗಡವಾಗಿ ತಲಾ ₹50,000 ಗಳನ್ನು ನೀಡಲಾಗಿತ್ತು. ಸಿದ್ದೀಕಿ ಅವರ ದಿನಚರಿ ಮತ್ತು ಅವರ ನಿವಾಸದ ಸುತ್ತಲಿನ ಪರಿಸರದ ಬಗ್ಗೆ ಮಾಹಿತಿ ಕಲೆ ಹಾಕಲು ಶೂಟರ್‌ಗಳು ಮೋಟಾರ್ ಸೈಕಲ್ ಖರೀದಿಸಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶೂಟರ್‌ಗಳಿಗೆ ಹತ್ಯೆಗೆ ಯೋಜನೆ ರೂಪಿಸಿಕೊಟ್ಟ ಪ್ರವೀಣ್ ಲೋಂಕರ್‌ನನ್ನು ಸಹ ಸಂಚುಕೋರ ಎಂದು ಪೊಲೀಸರು ಗುರುತಿಸಿದ್ದಾರೆ.
ಶೂಟರ್‌ಗಳಾದ ಹರಿಯಾಣದ ಗುರ್ಮೈಲ್ ಬಲ್ಜಿತ್ ಸಿಂಗ್(23), ಉತ್ತರ ಪ್ರದೇಶ ಮೂಲದ ಧರ್ಮರಾಜ್ ರಾಜೇಶ್ ಕಶ್ಯಪ್(19), ಸಂಚುಕೋರ ಪ್ರವೀಣ್ ಲೋಂಕರ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಶನಿವಾರ ರಾತ್ರಿ ಮುಂಬೈನ ಬಾಂದ್ರಾ ಪ್ರದೇಶದಲ್ಲಿರುವ ಮಗ ಜೀಶನ್ ಅವರ ಕಚೇರಿಯಿಂದ ಹೊರಗೆ ಬಂದ ಸಿದ್ದೀಕಿ ಅವರ ಮೇಲೆ ಗುಂಡಿನ ದಾಳಿ ನಡೆದಿತ್ತು. ಕೂಡಲೇ ಅವರನ್ನು ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅವರು ಉಳಿಯಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.