ಮುಂಬೈ: ಅಜಿತ್ ಪವಾರ್ ನೇತೃತ್ವದ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ನಾಯಕ ಬಾಬಾ ಸಿದ್ಧಿಕಿ ಅವರನ್ನು ಮುಂಬೈನಲ್ಲಿ ಶನಿವಾರ ರಾತ್ರಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಪುತ್ರ ಹಾಗೂ ಶಾಸಕ ಜೀಶನ್ ಅವರ ಕಚೇರಿಯಿಂದ ಹೊರಗೆ ಬಂದಾಗ ಈ ಕೃತ್ಯವೆಸಗಲಾಗಿದ್ದು, ರಾಷ್ಟ್ರದಾದ್ಯಂತ ತಲ್ಲಣ ಸೃಷ್ಟಿಸಿದೆ.
ಮುಂಬೈ, ದಾವೂದ್ ಇಬ್ರಾಹಿಂ, ಅಬು ಸಲೇಂ, ಛೋಟಾ ರಾಜನ್ ಸೇರಿದಂತೆ ಅನೇಕ ಗ್ಯಾಂಗ್‌ಸ್ಟರ್‌ಗಳ ಅಡ್ಡೆ ಎಂಬ ಅಪಕೀರ್ತಿಗೆ 1980 ಹಾಗೂ 90ರ ದಶಕದಲ್ಲಿ ಗುರಿಯಾಗಿತ್ತು. ಅವರು, ತಮ್ಮ ಆದಾಯಕ್ಕಾಗಿ ಇತರ ಗ್ಯಾಂಗ್‌ಸ್ಟರ್‌ಗಳನ್ನಷ್ಟೇ ಅಲ್ಲದೆ, ರಾಜಕಾರಣಿಗಳು, ಬಾಲಿವುಡ್ ಮಂದಿಯನ್ನು ಗುರಿಯಾಗಿಸಿ ದಾಳಿ ಮಾಡುತ್ತಿದ್ದರು.
'ಟಿ–ಸೀರೀಸ್' ಸಂಸ್ಥಾಪಕ ಗುಲ್ಶಾನ್ ಕುಮಾರ್ ಅವರನ್ನು 1997ರಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. 2000ನೇ ಇಸವಿಯಲ್ಲಿ ಬಿಡುಗಡೆಯಾಗಿ ಭಾರಿ ಯಶಸ್ಸು ಗಳಿಸಿದ್ದ 'ಕಹೋ ನಾ ಪ್ಯಾರ್ ಹೈ' ಚಿತ್ರದ ನಿರ್ಮಾಪಕ, ನಿರ್ದೇಶಕ ರಾಕೇಶ್ ರೋಷನ್ ಅವರ ಮೇಲೆ ಅದೇ ವರ್ಷ ಗುಂಡಿನ ದಾಳಿ ನಡೆಸಲಾಗಿತ್ತು.
ಇಂತಹ ಹಲವು ಪ್ರಕರಣಗಳು ಮೇಲಿಂದ ಮೇಲೆ ವರದಿಯಾದ ಬಳಿಕ ಪೊಲೀಸರು ಕಾನೂನು ಮತ್ತು ಸುವ್ಯವಸ್ಥೆ ಬಿಗಿಗೊಳಿಸಿದ್ದರು. ಹೀಗಾಗಿ, ಕೆಲಕಾಲ ಆತಂಕ ದೂರವಾಗಿತ್ತು. ಆದರೆ, ನಟ ಸಲ್ಮಾನ್ ಖಾನ್ ಅವರ ಗ್ಯಾಲಕ್ಸಿ ಅಪಾರ್ಟ್‌ಮೆಂಟ್ ಹೊರಗೆ ಇತ್ತೀಚೆಗೆ ನಡೆದಿದ್ದ ಗುಂಡಿನ ದಾಳಿ ಹಾಗೂ ಬಾಬಾ ಸಿದ್ಧಿಕಿ ಅವರ ಹತ್ಯೆ ಪ್ರಕರಣಗಳು, ನಗರದಲ್ಲಿ ಭೂಗತ ಚಟುವಟಿಕೆಗಳು ಸಂಪೂರ್ಣ ನಿಂತಿಲ್ಲ ಎಂಬುದನ್ನು ಸಾಬೀತು ಮಾಡಿವೆ.
ಸಿದ್ಧಿಕಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದ ಕೆಲ ಮಾಹಿತಿ ಇಲ್ಲಿದೆ...
1. ಶೂಟರ್‌ಗಳು ಯಾರು?
ಸಿದ್ಧಿಕಿ ಹತ್ಯೆ ಪ್ರಕರಣದಲ್ಲಿ ಮೂವರು ಭಾಗಿಯಾಗಿದ್ದಾರೆ. ಆ ಪೈಕಿ ಇಬ್ಬರನ್ನು ಈಗಾಗಲೇ ಬಂಧಿಸಲಾಗಿದೆ.
ಈ ಸಂಬಂಧ ಹೇಳಿಕೆ ಬಿಡುಗಡೆ ಮಾಡಿರುವ ಮುಂಬೈ ಪೊಲೀಸರು, ಬಂಧಿತರನ್ನು ಹರಿಯಾಣದ ಗುರ್ಮೈಲ್ ಸಿಂಗ್ ಮತ್ತು ಉತ್ತರ ಪ್ರದೇಶದ ಧರ್ಮರಾಜ್ ಕಶ್ಯಪ್ ಎಂದು ತಿಳಿಸಿದ್ದಾರೆ. ಮತ್ತೊಬ್ಬ ಶಿವ ಗೌತಮ್ ಎಂಬಾತ ಪರಾರಿಯಾಗಿದ್ದಾನೆ.
2. ಮುಂಬೈಗೆ ಬಂದದ್ದು ಯಾವಾಗ?
ಸಿದ್ಧಿಕಿ ಹತ್ಯೆ ಮಾಡಿದ ಶೂಟರ್‌ಗಳು ತಿಂಗಳ ಹಿಂದೆಯೇ ಮುಂಬೈಗೆ ಬಂದಿದ್ದರು ಎಂಬುದು ಬಂಧಿತರ ವಿಚಾರಣೆ ವೇಳೆ ತಿಳಿದುಬಂದಿದೆ.
ತಿಂಗಳಿಗೆ ₹ 14,000 ನೀಡುವುದಾಗಿ ಕುರ್ಲಾದ ಮನೆಯೊಂದನ್ನು ಬಾಡಿಗೆಗೆ ಪಡೆದು, ಉಳಿದುಕೊಂಡಿದ್ದರು. ಇವರು ಸುಮಾರು ಹದಿನೈದು ದಿನಗಳ ಹಿಂದೆ ಕೊರಿಯರ್ ಮೂಲಕ ಶಸ್ತ್ರಾಸ್ತ್ರಗಳನ್ನು ಪಡೆದಿದ್ದರು. ಪೊಲೀಸರು ಬಂಧಿತರಿಂದ 9mm ಪಿಸ್ತೂಲ್, 28 ಕಾರ್ಟ್ರಿಡ್ಜ್‌ಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿದೆ.
3. ಕೃತ್ಯಕ್ಕಾಗಿ ಪಡೆದ ಹಣವೆಷ್ಟು?
ಕೃತ್ಯದ ನಿರ್ವಹಣೆಗಾಗಿ ಶೂಟರ್‌ಗಳು ತಲಾ ₹ 50,000 ಪಡೆದುಕೊಂಡಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿರುವುದಾಗಿ ಎನ್‌ಡಿಟಿವಿ ವರದಿ ಮಾಡಿದೆ.
4. ಕೃತ್ಯವೆಸಗಿದ್ದು ಹೇಗೆ?
ಸ್ಕೂಟರ್‌ನಲ್ಲಿ ಸ್ಥಳಕ್ಕೆ ಬಂದಿದ್ದ ಶೂಟರ್‌ಗಳು, ತಾವು ಗುರಿಯಾಗಿಸಿಕೊಂಡಿದ್ದ ಸಿದ್ಧಿಕಿ ಹೊರಗೆ ಬರುವವರೆಗೆ ಕಾಯ್ದಿದ್ದರು. ಅವರಿಗೆ ಸಿದ್ಧಿಕಿ ಇರುವ ಸ್ಥಳದ ಬಗ್ಗೆ ಮತ್ತೊಬ್ಬ ಮಾಹಿತಿ ನೀಡುತ್ತಿದ್ದ.
ಸಿದ್ಧಿಕಿ ಹೊರಗೆ ಬರುತ್ತಿದ್ದಂತೆ ಒಟ್ಟು ಆರು ಗುಂಡುಗಳನ್ನು ಹಾರಿಸಲಾಯಿತು. ಅದರಲ್ಲಿ ನಾಲ್ಕು, ಮೃತ ರಾಜಕಾರಣಿಯ ಎದೆಗೆ ಹೊಕ್ಕಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.