ADVERTISEMENT

ಸಿದ್ದೀಕಿ ಹತ್ಯೆ: ‘ಮಹಾ’ ರಾಜಕೀಯದಲ್ಲಿ ತಲ್ಲಣ

ಒಬ್ಬ ಆರೋಪಿಗೆ 21ರವರೆಗೆ ಕಸ್ಟಡಿ l ಜೀಶನ್‌ ಅಖ್ತರ್‌ ಪ್ರಮುಖ ಆರೋಪಿ: ಶಂಕೆ l ಆರೋಪಿಗಳ ಪತ್ತೆಗೆ 16 ತಂಡ ರಚನೆ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2024, 1:14 IST
Last Updated 14 ಅಕ್ಟೋಬರ್ 2024, 1:14 IST
<div class="paragraphs"><p>ಸರ್ಕಾರಿ ಗೌರವಗಳೊಂದಿಗೆ ಸಿದ್ದೀಕಿ ಅವರ ಅಂತ್ಯಕ್ರಿಯೆಯನ್ನು ಭಾನುವಾರ ರಾತ್ರಿ ನೆರವೇರಿಸಲಾಯಿತು </p></div>

ಸರ್ಕಾರಿ ಗೌರವಗಳೊಂದಿಗೆ ಸಿದ್ದೀಕಿ ಅವರ ಅಂತ್ಯಕ್ರಿಯೆಯನ್ನು ಭಾನುವಾರ ರಾತ್ರಿ ನೆರವೇರಿಸಲಾಯಿತು

   

–ಪಿಟಿಐ ಚಿತ್ರ

ಮುಂಬೈ: ಎನ್‌ಸಿಪಿ (ಅಜಿತ್‌ ಪವಾರ ಬಣ) ನಾಯಕ, ಮಾಜಿ ಸಚಿವ ಬಾಬಾ ಸಿದ್ದೀಕಿ (66) ಹತ್ಯೆ ಮಹಾರಾಷ್ಟ್ರ ರಾಜಕೀಯದಲ್ಲಿ ತಲ್ಲಣ ಸೃಷ್ಟಿಸಿದೆ. ಅದರಲ್ಲೂ, ಸಿದ್ದೀಕಿ ಅವರ ಹತ್ಯೆಯ ಹೊಣೆಯನ್ನು ಗ್ಯಾಂಗ್‌ಸ್ಟರ್‌ ಲಾರೆನ್ಸ್‌ ಬಿಷ್ಣೋಯ್‌ ತಂಡ ಹೊತ್ತುಕೊಂಡಿರುವುದು ಪ್ರಕರಣವನ್ನು ಮತ್ತಷ್ಟು ನಿಗೂಢಗೊಳಿಸಿದೆ.

ADVERTISEMENT

ಪ್ರಕರಣಕ್ಕೆ ಸಂಬಂಧಿಸಿ, ಬಾಲಕ ಸೇರಿ ಇಬ್ಬರು ಆರೋಪಿಗಳನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಮೂರನೇ ಆರೋಪಿ ಪರಾರಿಯಾಗಿದ್ದಾರೆ. ಪ್ರಕರಣದ ನಾಲ್ಕನೇ ಆರೋಪಿ ಜೀಶನ್‌ ಅಖ್ತರ್, ಇಡೀ ಕೃತ್ಯದ ನಿರ್ವಹಣೆ ಮಾಡಿರುವ ಕುರಿತು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದು, ಆತನ ಬಂಧನಕ್ಕೆ ಬಲೆ ಬೀಸಿದ್ದಾರೆ.

ಆರೋಪಿಗಳಾದ ಹರಿಯಾಣದ ಗುರ್ಮೈಲ್‌ ಬಲ್ಜಿತ್‌ ಸಿಂಗ್‌ (23) ಹಾಗೂ ಉತ್ತರ ಪ್ರದೇಶದ ಬಾಲಕನೊಬ್ಬನನ್ನು ಪೊಲೀಸರು ಭಾನುವಾರ ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಗುರ್ಮೈಲ್‌ ಬಲ್ಜಿತ್‌ ಸಿಂಗ್‌ ಅವರನ್ನು ಇದೇ 21ರ ವರೆಗೆ ಪೊಲೀಸ್‌ ಕಸ್ಟಡಿಗೆ ನೀಡಿ ನ್ಯಾಯಾಲಯ ಆದೇಶಿಸಿದೆ. 

ಆರೋಪಿಯೊಬ್ಬ ತಾನು ಅಪ್ರಾಪ್ತ ಎಂದು ಹೇಳಿಕೊಂಡಿರುವುದರಿಂದ, ವಯಸ್ಸು ಪತ್ತೆ ಹಚ್ಚುವುದಕ್ಕಾಗಿ ಆರೋಪಿಯ ಮೂಳೆ ಪರೀಕ್ಷೆಗೆ ನ್ಯಾಯಾಲಯ ಆದೇಶಿಸಿದೆ. ಮೂರನೇ
ಆರೋಪಿ ಶಿವಕುಮಾರ್ ಗೌತಮ್ ಪರಾರಿ ಯಾಗಿದ್ದು, ಆತನ ಪತ್ತೆಗೆ ತಂಡ ರಚಿಸಲಾಗಿದೆ.

ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆ(ಬಿಎನ್‌ಎಸ್‌), ಶಸ್ತ್ರಾಸ್ತ್ರಗಳ ಕಾಯ್ದೆ ಹಾಗೂ ಮಹಾರಾಷ್ಟ್ರ ಪೊಲೀಸ್‌ ಕಾಯ್ದೆಯ ವಿವಿಧ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಲಾಗಿದೆ. ಇದು ಪೂರ್ವಯೋಜಿತ ಕೃತ್ಯ ಎಂದು ಪೊಲೀಸರು ಶಂಕಿಸಿದ್ದಾರೆ.

ಮಗ ಜೀಶನ್ ಅವರ ಕಚೇರಿಯಿಂದ ಹೊರಗೆ ಬರುವಾಗ ರಾತ್ರಿ 9.30 ರ ಸುಮಾರು ಬೈಕ್‌ನಲ್ಲಿ ಬಂದಿದ್ದ ಮೂವರು ದುಷ್ಕರ್ಮಿಗಳು ಬಾಬಾ ಅವರ ಮೇಲೆ ಪಿಸ್ತೂಲ್‌ನಿಂದ 4–5 ಸುತ್ತು ಗುಂಡು ಹಾರಿಸಿದ್ದರು.

ಖ್ಯಾತರೊಂದಿಗೆ ಒಡನಾಟ

ವಿದ್ಯಾರ್ಥಿ ದೆಸೆಯಿಂದಲೂ ಕಾಂಗ್ರೆಸ್‌ನೊಂದಿಗೆ ಗುರುತಿಸಿಕೊಂಡಿದ್ದ ಬಾಬಾ ಸಿದ್ದೀಕಿ, ಮುಂಬೈನ ಬಾಂದ್ರಾ (ಪಶ್ಚಿಮ) ವಿಧಾನಸಭೆ ಕ್ಷೇತ್ರದಿಂದ ಮೂರು ಬಾರಿ ಗೆದ್ದಿದ್ದರು.

ಆಗಿನ ಮುಖ್ಯಮಂತ್ರಿ ವಿಲಾಸ್‌ರಾವ್ ದೇಶಮುಖ್ ಅವರ ಸರ್ಕಾರದಲ್ಲಿ ಬಾಬಾ ಸಿದ್ದೀಕಿ ಅವರು 2004ರಿಂದ 2008ರವರೆಗೆ ಆಹಾರ ಪೂರೈಕೆ ಹಾಗೂ ಕಾರ್ಮಿಕ ಸಚಿವರಾಗಿದ್ದರು. ಫೆಬ್ರುವರಿಯಲ್ಲಿ ಕಾಂಗ್ರೆಸ್‌ ತೊರೆದಿದ್ದ ಅವರು, ಅಜಿತ್‌ ಪವಾರ್‌ ನೇತೃತ್ವದ ಎನ್‌ಸಿಪಿ ಸೇರಿದ್ದರು. ಜೀವ ಬೆದರಿಕೆ ಇದ್ದ ಕಾರಣ ಅವರಿಗೆ ‘ವೈ’ ಕೆಟಗರಿ ಭದ್ರತೆ ಒದಗಿಸಲಾಗಿತ್ತು.

ಬಾಲಿವುಡ್‌ನೊಂದಿಗೂ ಒಡನಾಟ ಹೊಂದಿದ್ದ ಸಿದ್ದೀಕಿ, ಸಲ್ಮಾನ್‌ ಖಾನ್‌, ಶಾರುಕ್‌ ಖಾನ್‌, ಸಂಜಯ್ ದತ್‌ ಸೇರಿ ಅನೇಕರಿಗೆ ಆಪ್ತರಾಗಿದ್ದರು. ಕೋವಿಡ್‌–19 ಪಿಡುಗಿನ ವೇಳೆ ಜೀವರಕ್ಷಕ ಔಷಧಿಗಳ ಪೂರೈಕೆಗೆ ವ್ಯವಸ್ಥೆ ಮಾಡಿದ್ದರು. ವೈಭವೋಪೇತ ಇಫ್ತಾರ್‌ ಕೂಟಗಳ ಆಯೋಜನೆಗೂ
ಅವರು ಹೆಸರುವಾಸಿಯಾಗಿದ್ದರು.

ರಾಜಕೀಯ ಜಟಾಪಟಿ

ಬಾಬಾ ಸಿದ್ದೀಕಿ ಅವರ ಹತ್ಯೆ ಮಹಾರಾಷ್ಟ್ರದಲ್ಲಿ ರಾಜಕೀಯ ಜಟಾಪಟಿಗೆ ಕಾರಣವಾಗಿದೆ. ಕಾಂಗ್ರೆಸ್, ಎನ್‌ಸಿಪಿ(ಯುಬಿಟಿ) ಸೇರಿದಂತೆ ವಿರೋಧ ಪಕ್ಷಗಳು, ‘ಮಹಾಯುತಿ’ ಮೈತ್ರಿಕೂಟ ನೇತೃತ್ವದ ಸರ್ಕಾರದ ವಿರುದ್ಧ ಟೀಕಾಪ್ರಹಾರ ನಡೆಸಿವೆ.

ವರ್ಷಾಂತ್ಯಕ್ಕೆ ಮಹಾರಾಷ್ಟ್ರ ವಿಧಾನಸಭೆಗೆ ಚುನಾವಣೆ ನಡೆಯಲಿರುವ ಕಾರಣ, ರಾಜ್ಯದಲ್ಲಿನ ಕಾನೂನು–ಸುವ್ಯವಸ್ಥೆ ವಿಚಾರವಾಗಿ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಈ ಘಟನೆ ವಿಪಕ್ಷಗಳ ಕೈಗೆ ಅಸ್ತ್ರದಂತಾಗಿದೆ.

‘ಇಂಥ ಹೇಯ ಕೃತ್ಯ ನಡೆದಿರುವುದು ಆಘಾತಕಾರಿ ಹಾಗೂ ರಾಜ್ಯದ ಪಾಲಿಗೆ ನಾಚಿಕಗೇಡಿನ ಸಂಗತಿ. ರಾಜ್ಯದಲ್ಲಿ ಅರಾಜಕತೆ ಇದೆ ಎಂಬುದನ್ನು ಇದು ತೋರಿಸುತ್ತದೆ’ ಎಂದು ವಿರೋಧ ಪಕ್ಷಗಳು ಸರ್ಕಾರದ ವಿರುದ್ಧ ಹರಿಹಾಯ್ದಿವೆ.

‘ಆಡಳಿತ ನಡೆಸುವವರು ಈ ಘಟನೆ ಕುರಿತ ಹೊಣೆ ಹೊರಬೇಕು ಹಾಗೂ ಅಧಿಕಾರದಿಂದ ಕೆಳಗಿಳಿಯಬೇಕು’ ಎಂದು ಎನ್‌ಸಿಪಿ (ಶರದ್‌ಪವಾರ್ ಬಣ) ವರಿಷ್ಠ ಶರದ್‌ ಪವಾರ್ ಪ್ರತಿಕ್ರಿಯಿಸಿದ್ದಾರೆ. ಪವಾರ್‌ ಅವರ ಈ ಹೇಳಿಕೆಗೆ ಪ್ರತಿಕ್ರಿಯಿಸಿದ ಉಪಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌,‘ಇಂತಹ ದುರ್ಘಟನೆಗಳು ನಡೆದ ಸಂದರ್ಭದಲ್ಲಿಯೂ ಅವರಿಗೆ ಅಧಿಕಾರಕ್ಕೇರುವ ಆಸೆ ಇದೆ. ನಾನು ಮಹಾರಾಷ್ಟ್ರದ ಅಭಿವೃದ್ಧಿ ಹಾಗೂ ಸುರಕ್ಷತೆ ಬಗ್ಗೆ ಗಮನ ಹರಿಸಿದ್ದರೆ, ಅವರಿಗೆ ಮಾತ್ರ ಅಧಿಕಾರವೇ ಮುಖ್ಯ’ ಎಂದು ಟೀಕಿಸಿದರು.

‘ಪಟಾಕಿಗಳ ಅಬ್ಬರದ ನಡುವೆ ಹಾರಿದ ಗುಂಡುಗಳು’

‘ಸಿದ್ದೀಕಿ ಅವರು ತಮ್ಮ ಪುತ್ರ ಜೀಶನ್ ಕಚೇರಿಯಿಂದ ಹೊರನಡೆದಿದ್ದರು. ಅದೇ ವೇಳೆ, ದುರ್ಗಾ ಮೂರ್ತಿ ಮೆರವಣಿಗೆಯೂ ಹೊರಟಿತ್ತು. ಈ ವೇಳೆ ಪಟಾಕಿಗಳನ್ನು ಸಿಡಿಸಿ ಸಂಭ್ರಮಿಸಲಾಗುತ್ತಿತ್ತು. ಇದೇ ಸಮಯದಲ್ಲಿ ಹಂತಕರು, 9.9 ಎಂ.ಎಂ ಪಿಸ್ತೂಲ್‌ನಿಂದ ಸಿದ್ದೀಕಿ ಮೇಲೆ ಗುಂಡು ಹಾರಿಸಿದ್ದಾರೆ’ ಎಂದು ಪೊಲೀಸರು ಹೇಳಿದ್ದಾರೆ.

‘ಫೇಸ್‌ಬುಕ್‌ನಲ್ಲಿ ಪೋಸ್ಟ್‌; ಪರಿಶೀಲನೆ’

ಲಾರೆನ್ಸ್‌ ಬಿಷ್ಣೋಯ್‌ ತಂಡದ ಸದಸ್ಯ ಎನ್ನಲಾದ ಶಿಬು ಲೋಣಕರ್, ಸಿದ್ದೀಕಿ ಹತ್ಯೆ ಹೊಣೆ ಹೊತ್ತುಕೊಂಡಿದ್ದು, ಈ ಕುರಿತು ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಿದ್ದಾನೆ. ಈತನ ಪತ್ತೆಗೆ ಪೊಲೀಸರು ಪುಣೆಯಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

‘ಭಾರತಕ್ಕೆ ಬೇಕಾಗಿರುವ ಉಗ್ರ ದಾವೂದ್‌ ಇಬ್ರಾಹಿಂ ಜತೆ ನಂಟು ಹೊಂದಿದ್ದಕ್ಕಾಗಿ ಸಿದ್ದೀಕಿಯನ್ನು ಹತ್ಯೆ ಮಾಡಲಾಗಿದೆ. ಅಲ್ಲದೇ, ಸಲ್ಮಾನ್‌ ಖಾನ್‌ ನಿವಾಸದ ಬಳಿ ಗುಂಡು ಹಾರಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದ ಬಂಧಿಸಲಾಗಿದ್ದ ಶಂಕಿತರ ಪೈಕಿ, ಅನುಜ್‌ ಥಾಪನ್‌ ಎಂಬಾತ ಮೃತಪಟ್ಟಿದ್ದು, ಈ ಕಾರಣಕ್ಕಾಗಿಯೂ ಸಿದ್ದೀಕಿಯನ್ನು ಹತ್ಯೆ ಮಾಡಿದ್ದಾಗಿ’ ಶಿಬು ಪೋಸ್ಟ್‌ ಮಾಡಿದ್ದಾನೆ. ‘ನಮಗೆ ಯಾರೊಂದಿಗೂ ಶತ್ರುತ್ವ ಇಲ್ಲ. ಸಲ್ಮಾನ್‌ ಖಾನ್‌ ಮತ್ತು ದಾವೂದ್‌ ಇಬ್ರಾಹಿಂ ಗ್ಯಾಂಗಿಗೆ ಯಾರು ನೆರವು ನೀಡುವರೋ ಅವರ ಸರದಿ ಬರುತ್ತದೆ’ ಎಂದು ಹಿಂದಿಯಲ್ಲಿ ಪೋಸ್ಟ್‌ ಮಾಡಿದ್ದಾರೆ.

ಈ ಕೃತ್ಯ ನಡೆದಿರುವುದು ಖಂಡನೀಯ. ಯಾರೂ ಕಾನೂನನ್ನು ಕೈಗೆತ್ತಿಕೊಳ್ಳಲು ಅವಕಾಶ ನೀಡದಂತೆ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ನಿರ್ದೇಶನ ನೀಡಲಾಗಿದೆ
ಅಜಿತ್‌ ಪವಾರ್‌, ಉಪಮುಖ್ಯಮಂತ್ರಿ
ಬಾಬಾ ಸಿದ್ದೀಕಿ ಹತ್ಯೆ ಆಘಾತಕಾರಿ. ಮಹಾರಾಷ್ಟ್ರ ಸರ್ಕಾರ ಈ ಕೊಲೆ ಕುರಿತು ಸಮಗ್ರ ಹಾಗೂ ಪಾರದರ್ಶಕ ತನಿಖೆಗೆ ಆದೇಶಿಸಿ ನ್ಯಾಯ ದೊರಕಿಸಿ ಕೊಡಬೇಕು
ಮಲ್ಲಿಕಾರ್ಜುನ ಖರ್ಗೆ,ಎಐಸಿಸಿ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.