ಪಟ್ನಾ: ಎನ್‌ಸಿಪಿ ಅಜಿತ್ ಪವಾರ್ ಬಣದ ನಾಯಕ ಹಾಗೂ ಮಹಾರಾಷ್ಟ್ರ ಮಾಜಿ ಸಚಿವ ಬಾಬಾ ಸಿದ್ಧಿಕಿ ಅವರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿರುವುದನ್ನು ಖಂಡಿಸಿ, ಮಹಾರಾಷ್ಟ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್, ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಡಿದೆ ಎಂದು ಕಿಡಿಕಾರಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ಧಿಕಿ ಅವರನ್ನು ಹತ್ತಿರದಿಂದ ನೋಡಿದ್ದೆ. ಈ ಆಘಾತಕಾರಿ ಸುದ್ದಿ ಕೇಳಿ ನನಗೆ ತೀವ್ರ ದುಃಖವಾಗಿದೆ. ಮುಂಬೈನ ಬಾಂದ್ರಾದಂತಹ ಪ್ರದೇಶದಲ್ಲಿ ಇಂತಹ ಘಟನೆ ನಡೆದಿದೆ. ಅಲ್ಲಿ ವಾಸಿಸುತ್ತಿರುವವರು ಯಾರು ಸುರಕ್ಷಿತವಾಗಿಲ್ಲ ಎಂಬುವುದನ್ನು ಈ ಘಟನೆ ಸಾಬೀತು ಪಡಿಸಿದೆ ಎಂದು ಹೇಳಿದ್ದಾರೆ.
ಮಹಾರಾಷ್ಟ್ರದಲ್ಲಿ ದಿನೇ ದಿನೇ ಕಾನೂನು ಸುವ್ಯವಸ್ಥೆ ಹದಗೆಡುತ್ತಿದೆ ಎಂದು ಪುನರುಚ್ಚರಿಸಿದ ಯಾದವ್, ಕುಟುಂಬದವರಿಗೆ ಸಿದ್ದಿಕಿ ಅವರ ಸಾವಿನ ನೋವನ್ನು ಭರಿಸುವ ಶಕ್ತಿಯನ್ನು ದೇವರು ಕರುಣಿಸಲಿ ಎಂದು ತಿಳಿಸಿದ್ದಾರೆ.
ದಸರಾ ಪ್ರಯುಕ್ತ ಬಾಬಾ ಅವರು ತಮ್ಮ ಮಗ ಹಾಗೂ ಶಾಸಕ ಜಿಶಾನ್ ಸಿದ್ಧಿಕಿ ಅವರ ಮನೆಗೆ ತೆರಳಿದ್ದರು. ಮನೆಯಿಂದ ಹೊರಗೆ ಬರುವಾಗ ಶನಿವಾರ ರಾತ್ರಿ 9.30 ರ ಸುಮಾರು ಬೈಕ್‌ನಲ್ಲಿ ಬಂದಿದ್ದ ಮೂವರು ದುಷ್ಕರ್ಮಿಗಳು ಬಾಬಾ ಅವರ ಮೇಲೆ ಪಿಸ್ತೂಲ್‌ನಿಂದ ಮೂರು ಸುತ್ತು ಗುಂಡು ಹಾರಿಸಿದ್ದರು. ಎದೆ ಹಾಗೂ ಹೊಟ್ಟೆಗೆ ಗುಂಡು ತಗುಲಿದ್ದ ಬಾಬಾ ಅವರನ್ನು ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೇ ಅವರು ಭಾನುವಾರ ತಡರಾತ್ರಿ 12.30ಕ್ಕೆ ಮೃತರಾದರು ಎಂದು ವೈದ್ಯರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.